ಮಂಗಳೂರು ಧರ್ಮಪ್ರಾಂತ್ಯದ ಪರಮ ಪವಿತ್ರ ಪ್ರಸಾದದ ಮೆರವಣಿಗೆ: ‘ಕುಟುಂಬ ವರ್ಷ’ಘೋಷಣೆ

Spread the love

ಮಂಗಳೂರು ಧರ್ಮಪ್ರಾಂತ್ಯದ ಪರಮ ಪವಿತ್ರ ಪ್ರಸಾದದ ಮೆರವಣಿಗೆ: ‘ಕುಟುಂಬ ವರ್ಷ’ಘೋಷಣೆ

ಮಂಗಳೂರು: ಮಂಗಳೂರು ಧರ್ಮಪ್ರಾಂತ್ಯದ ವಾರ್ಷಿಕ ಪರಮ ಪವಿತ್ರ ಪ್ರಸಾದದ ಮೆರವಣಿಗೆಯು ಜನವರಿ 8ರ ಭಾನುವಾರದಂದು ನಗರದ ಮಿಲಾಗ್ರಿಸ್ ಚರ್ಚ್‍ನಿಂದ ರೊಸಾರಿಯೊ ಕೆಥೆಡ್ರಲ್ ಚರ್ಚ್‍ವರೆಗೆ ನಡೆಯಿತು. ಸಾವಿರಾರು ಭಕ್ತಾದಿಗಳು ಭಕ್ತಿ ಮತ್ತು ಶಿಸ್ತಿನಿಂದ ಪಾಲ್ಗೊಂಡರು.

ಈ ಸಂದರ್ಭ ಮಂಗಳೂರು ಧರ್ಮಕ್ಷೇತ್ರದಲ್ಲಿ ಪ್ರಸ್ತುತ 2023 ವರ್ಷವನ್ನು ‘ಕುಟುಂಬ ವರ್ಷ’ ವೆಂದು ಘೋಷಿಸಿ, ಸಮಾಜದಲ್ಲಿ ಆಧ್ಯಾತ್ಮಿಕ ಹಾಗೂ ಮಾನವೀಯ ಕುಟುಂಬಗಳನ್ನು ಕಟ್ಟಲು ಕರೆ ನೀಡಲಾಯಿತು.

ಮೆರವಣಿಗೆಗೂ ಮುನ್ನ ಮಿಲಾಗ್ರಿಸ್ ಚರ್ಚ್‍ನಲ್ಲಿ ಮಂಗಳೂರಿನ ಬಿಷಪ್ ಅತೀ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ಸಾಮೂಹಿಕವಾಗಿ ಬಲಿಪೂಜೆಯನ್ನು ಸಲ್ಲಿಸಿದರು. ಬಿಷಪ್ ನೇತೃತ್ವದ ಮೆರವಣಿಗೆಯು ರೊಸಾರಿಯೊ ಕೆಥೆಡ್ರಲ್ ಚರ್ಚ್‍ನಲ್ಲಿ ಆರಾಧನೆಯೊಂದಿಗೆ ಸಮಾಪನಗೊಂಡಿತು.

ಯೇಸುವಿನ ದೈವದರ್ಶನ ಮಹೋತ್ಸವದಂದು ಏರ್ಪಡಿಸಿದ ಈ ಮೆರವಣಿಗೆಯು ಯೇಸು ಕ್ರಿಸ್ತರು ತಮ್ಮನ್ನು ಹುಡುಕಿ ಬಂದ ಜ್ಯೋತಿಷ್ಯರಿಗೆ ತಮ್ಮ ಮೊದಲ ದೈವ ದರ್ಶನ ನೀಡಿದ ಘಟನೆಯನ್ನು ಸ್ಮರಿಸುತ್ತದೆ. ಈ ಹಬ್ಬವನ್ನು ‘ಎಪಿಫನಿ’, ‘ಥಿಯೋಫನಿ’ ಅಥವಾ ‘ತ್ರಿ ಕಿಂಗ್ಸ್ ಡೇ’ ಎಂದೂ ಕರೆಯುತ್ತಾರೆ.

ಬಿಷಪ್ ಪೀಟರ್ ಪಾವ್ಲ್ ಸಲ್ಡಾನ್ಹಾ ಆವರು ತಮ್ಮ ಧರ್ಮೋಪದೇಶದಲ್ಲಿ “ದೇವರನ್ನು ಮೊದಲು ಪವಿತ್ರ ಗ್ರಂಥಗಳಲ್ಲಿ ಕಂಡುಕೋಳ್ಳೋಣ, ನಂತರ ನಮ್ಮ ಹಾಗೂ ಪರಸ್ಪರರ ಹೃದಯಗಳಲ್ಲಿ ಆತನ ಸಾಮಿಪ್ಯವನ್ನು ಗುರುತಿಸೋಣ. ಪವಿತ್ರಗ್ರಂಥ ಬೈಬಲ್ ನಮ್ಮ ಕೈಯಲ್ಲಿರುವ ನಕ್ಷತ್ರ. ಆ ನಕ್ಷತ್ರವನ್ನು ನಮ್ಮದಾಗಿಸಿ ನಿತ್ಯ ಧ್ಯಾನಿಸಿದ್ದಲ್ಲಿ ಯೇಸುವಲ್ಲಿ ಸೇರುವ ದಾರಿಯು ಗೋಚರಿಸುವುದು. ದೇವರ ವಾಕ್ಯ ನಮ್ಮ ದಾರಿಗೆ ದೀಪವೂ, ಆ ದೀಪದ ಬೆಳಕಿನಲ್ಲಿ ಸದಾ ನಡೆದು ಯೇಸುವನ್ನು ಮಹಿಮೆಪಡಿಸೊಣ”, ಎಂದು ನುಡಿದರು.

ಅತ್ಯಂತ ಭಕ್ತಿ ಮತ್ತು ಶಿಸ್ತಿನಿಂದ ನಡೆದ ಈ ಮೆರವಣಿಗೆಯು ನಗರದ ರಸ್ತೆಗಳಲ್ಲಿ ದೇವರನ್ನು ಮಹಿಮೆಪಡಿಸುತ್ತಾ, ಆರಾಧಿಸುತ್ತಾ, ಎರಡು ಸಾಲುಗಳಲ್ಲಿ ಸಾಗಿತು.

ರೊಸಾರಿಯೋ ಕೆಥೆಡ್ರಲ್ ಚರ್ಚ್ ಮೈದಾನದಲ್ಲಿ ‘ಸೆವಕ್’ ಮಾಸಿಕ ಪತ್ರಿಕೆಯ ಸಂಪಾದಕ ವಂದನೀಯ ಚೇತನ್ ಲೋಬೋ, ಕಾಪುಚಿನ್ ಅವರು ಪ್ರವಚನ ಬೋಧಿಸಿದರು. ಅವರು “ಮಾನವೀಯ ಕುಟುಂಬಗಳು: ಭವಿಷ್ಯದ ಭರವಸೆ” ಎಂಬ ವಿಷಯವನ್ನು ವಿವರಿಸುತ್ತಾ, ಆಧುನಿಕ ಕುಟುಂಬಗಳನ್ನು ಮಾನವೀಯ ನೆಲೆಯಲ್ಲಿ ಸುಧಾರಣೆಗೋಳಿಸಲು ಹಾಗೂ ಪುನಶ್ಚೇತನಗೋಳಿಸಲು ಕರೆ ಕೊಟ್ಟರು.

ಮಂಗಳ ಜ್ಯೋತಿಯ ಸಂಚಾಲಕ ವಂದನೀಯ ವಿಜಯ್ ಮಚಾದೊ ಆವರು ಭಕ್ತಿಯುತವಾಗಿ ಕಾರ್ಯಕ್ರಮವನ್ನು ನೆರವೇರಿಸಿದರು.

ಬಿಷಪ್ ಆತೀ ವಂದನೀಯ ಡಾ| ಪೀಟರ್ ಪಾವ್ಲ್ ಸಲ್ಡಾನ್ಹಾ ಮೆರವನಿಗೆಯ ಯಶಸ್ಸಿಗೆ ಕಾರಣಾರಾದ ಎಲ್ಲರನ್ನು ಸ್ಮರಿಸಿದರು ಹಾಗೂ ಸಾಕ್ಷಿಯಾದ ಎಲ್ಲಾ ವಿಶ್ವಾಸಿಗಳಿಗೆ ಕೃತಜ್ಞತೆಯನ್ನು ಸಲ್ಲಿಸಿದರು.

ವರದಿ: ವಂದನೀಯ ಅನಿಲ್ ಐವನ್ ಫೆನಾರ್ಂಡಿಸ್
ಚಿತ್ರಗಳು: ಸ್ಟಾನ್ಲಿ ಹಾಗೂ ಜೋಸ್ಟನ್


Spread the love

Leave a Reply

Please enter your comment!
Please enter your name here