
ಮಂಗಳೂರು: ನಂತೂರಿನಲ್ಲಿ ದ್ವಿಚಕ್ರ ವಾಹನಕ್ಕೆ ಟಿಪ್ಪರ್ ಡಿಕ್ಕಿ – ಇಬ್ಬರ ಮೃತ್ಯು
ಮಂಗಳೂರು: ರಾಷ್ಟ್ರೀಯ ಹೆದ್ದಾರಿ 66 ರ ನಂತೂರಿನಲ್ಲಿ ನಿಂತಿದ್ದ ಸ್ಕೂಟರ್ ಗೆ ಟಿಪ್ಪರ್ ಡಿಕ್ಕಿಯಾದ ಪರಿಣಾಮ ಇಬ್ಬರು ಸಾವನಪ್ಪಿದ ಘಟನೆ ಶನಿವಾರ ನಡೆದಿದೆ.
ಮೃತರನ್ನು ಬೋಳೂರಿನ ಸ್ಯಾಮ್ಯುಯೆಲ್ ಜೇಸುದಾಸ್ (66) ಮತ್ತು ಕುಂಪಲದ ಅವರ ಸಂಬಂಧಿ ಭೂಮಿಕಾ (17) ಎಂದು ಗುರುತಿಸಲಾಗಿದೆ.
ಮೂಲಗಳ ಪ್ರಕಾರ, ಸ್ಯಾಮ್ಯುಯೆಲ್ ಜೇಸುದಾಸ್ ತನ್ನ ಸಂಬಂಧಿ ಭೂಮಿಕಾಳನ್ನು ಆಕೆಯ ಮನೆ ಕುಂಪಲದಿಂದ ಬೋಳೂರಿಗೆ ಕರೆತರುತ್ತಿದ್ದರು. ಭೂಮಿಕಾ ಸ್ಯಾಮ್ಯುಯೆಲ್ ಜೇಸುದಾಸ್ ಮನೆಯಲ್ಲಿದ್ದು, ಸೇಂಟ್ ಅಲೋಶಿಯಸ್ ಕಾಲೇಜಿನಲ್ಲಿ ಓದುತ್ತಿದ್ದಳು. ಮಾರ್ಚ್ 18 ರಂದು ಭೂಮಿಕಾ ತನ್ನ ಚಿಕ್ಕಪ್ಪನ ದ್ವಿಚಕ್ರ ವಾಹನದಲ್ಲಿ ಕುಂಪಲದಿಂದ ಬೋಳೂರಿಗೆ ಹಿಂತಿರುಗುತ್ತಿದ್ದಳು. ನಂತೂರು ಜಂಕ್ಷನ್ ತಲುಪಿ ಸಿಗ್ನಲ್ ಬಳಿ ನಿಲ್ಲಿಸಿದಾಗ ಕೆಎ 19 ಎಇ 0721 ನಂಬರಿನ ಶ್ರೀ ಆದಿನಾಥೇಶ್ವರ ರೋಡ್ಲೈನ್ಸ್ ಟಿಪ್ಪರ್ ಅವರ ಮೇಲೆ ಹರಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಸ್ಥಳಕ್ಕಾಗಮಿಸಿದ ಕದ್ರಿ ಸಂಚಾರ ಠಾಣೆ ಪೊಲೀಸರು ಟಿಪ್ಪರ್ ಚಾಲಕನನ್ನು ಬಂಧಿಸಿದ್ದಾರೆ. ಈ ಕುರಿತು ಮಂಗಳೂರು ಪೂರ್ವ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.