ಮಂಗಳೂರು ನಗರ ಪೊಲೀಸ್ ಕಮೀಷನರ್ ಆಗಿ ಅನುಪಮ್ ಅಗರ್ವಾಲ್ ಅಧಿಕಾರ ಸ್ವೀಕಾರ

Spread the love

ಮಂಗಳೂರು ನಗರ ಪೊಲೀಸ್ ಕಮೀಷನರ್ ಆಗಿ ಅನುಪಮ್ ಅಗರ್ವಾಲ್ ಅಧಿಕಾರ ಸ್ವೀಕಾರ

ಮಂಗಳೂರು: ನೂತನ ನಗರ ಪೊಲೀಸ್ ಕಮೀಷನರ್ ಆಗಿ ನಿರ್ಗಮನ ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಆರ್. ಜೈನ್ ಅವರಿಂದ ಅನುಪಮ್ ಅಗರ್ವಾಲ್ ಗುರುವಾರ ಅಧಿಕಾರ ವಹಿಸಿಕೊಂಡರು.

ಬಳಿಕ ಮಾತನಾಡಿದ ಅವರು ಬೇರೆ ಜಿಲ್ಲೆಗಳಲ್ಲಿ ಕೆಲಸ ಮಾಡಿದ ಸಂದರ್ಭ ಇಲ್ಲಿನ ಡ್ರಗ್ಸ್ ಸಮಸ್ಯೆಯ ಬಗ್ಗೆ ಕೇಳಿದ್ದೇನೆ. ಹಿಂದಿನ ಕಮಿಷನರ್ ಕುಲದೀಪ್ ಕುಮಾರ್ ಅವರು ಕೂಡಾ ಈ ದಿಸೆಯಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಡ್ರಗ್ಸ್ ಮುಕ್ತ ಮಂಗಳೂರು ಅಭಿಯಾನ ಯಶಸ್ವಿ ಕಾಣುತ್ತಿದ್ದು, ನಶೆ ಮುಕ್ತ ಮಂಗಳೂರು ಕನಸು ನನಸು ಮಾಡುವ ನಿಟ್ಟಿನಲ್ಲಿ ಅಧಿಕಾರಿಗಳ ಜತೆ ಈ ಅಭಿಯಾನವನ್ನು ಮುಂದುವರಿಸುವ ಭರವಸೆಯನ್ನು ನೀಡುವುದಾಗಿ ಹೇಳಿದರು.

ಕರ್ನಾಟಕ ಪೊಲೀಸರಿಗೆ ಮತ್ತೊಂದು ಪ್ರಮುಖ ಸೂಕ್ಷ್ಮ ವಿಚಾರ ಅನೈತಿಕ ಪೊಲೀಸ್ಗಿರಿ. ಈ ಭಾಗದಲ್ಲಿ ಸಮಸ್ಯೆ ಹೆಚ್ಚಿರುವ ಬಗ್ಗೆ ಅರಿವಿದೆ. ಪೊಲೀಸರು ಈಗಾಗಲೇ ಈ ಬಗ್ಗೆ ಹಲವು ಕ್ರಮಗಳನ್ನು ಕೈಗೊಂಡಿದ್ದು, ಅನೈತಿಕ ಪೊಲೀಸ್ಗಿರಿಯಲ್ಲಿ ತೊಡಗುವವರ ವಿರುದ್ಧ ಕಠಿಣ ಕ್ರಮಗಳ ಮೂಲಕ ಕಾನೂನಿನ ನೈಜ ಮುಖವನ್ನು ತೋರಿಸಲಿದ್ದೇವೆ ಎಂದರು. ಮತೀಯ ಶಾಂತಿ ಮತ್ತು ಸೌಹಾರ್ದತೆಗೆ ಭಂಗ ತರುವವರ ವಿರುದ್ಧ ಕಠಿಣ ಕ್ರಮ ವಹಿಸಲಿದ್ದೇವೆ ಎಂದರು.

ಅನೈತಿಕ ಪೊಲೀಸ್ಗಿರಿ ಕೃತ್ಯಗಳಿಗೆ ಯಾರು ಮುಂದಾಗುತ್ತಾರೆ ಮತ್ತು ಅವರಿಗೆ ಬೆನ್ನ ಹಿಂದೆಯಿಂದ ಯಾರೂ ಬೆಂಬಲ ನೀಡುತ್ತಾರೆಯೋ ಅವರ ಬಗ್ಗೆ ತುರ್ತಾಗಿ ಕಾನೂನಿನಡಿ ಕೈಗೊಳ್ಳಬಹುದಾದ ಕ್ರಮಗಳನ್ನು ವಹಿಸಲಾಗುವುದು. ಸಾಮಾನ್ಯವಾಗಿ ಇಂತಹ ಕೃತ್ಯಗಳು ನಡೆದಾಗ ತಡವಾಗಿ ಕ್ರಮ ವಹಿಸಲು ಮುಂದಾದಾಗ ಅವರಿಗೆ ಪ್ರೋತ್ಸಾಹ ದೊರಕಿದಂತಾಗುತ್ತದೆ. ಅದಕ್ಕೆ ಅವಕಾಶ ನೀಡದೆ ಕ್ರಮ ವಹಿಸಲಾಗುವುದು. ರಾಜ್ಯದಲ್ಲಿಯೇ ಮಂಗಳೂರು ಅತ್ಯಂತ ಮಹತ್ವ ಹಾಗೂ ಸೂಕ್ಷ್ಮ ಪ್ರದೇಶವಾಗಿ ಗುರುತಿಸಿಕೊಂಡಿದೆ. ಹಾಗಾಗಿ ಇಲ್ಲಿ ಕೆಲಸಮಾಡುವಾಗ ನಮ್ಮ ಹೆಚ್ಚುವರಿ ಪ್ರಯತ್ನವನ್ನು ಹಾಕಬೇಕಾಗುತ್ತದೆ. ನನಗೆ ಈಗ ಇಲ್ಲಿ ಕೆಲಸ ಮಾಡಲು ಅವಕಾಶ ಸಿಕ್ಕಿದೆ. ಬೀಟ್ ವ್ಯವಸ್ಥೆಯೊಂದಿಗೆ ಜನಸ್ನೇಹಿ ಪೊಲೀಸ್ ವ್ಯವಸ್ಥೆಯನ್ನು ಬಲಪಡಿಸಲಾಗುವುದು. ಈ ನಿಟ್ಟಿನಲ್ಲಿ ಜನರು ಸಮಸ್ಯೆಗಳನ್ನು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ನಮ್ಮ ಗಮನಕ್ಕೆ ತರುವ ನಿಟ್ಟಿನಲ್ಲಿ ಒತ್ತು ನೀಡಲಾಗುವುದು. ರೆಗ್ಯುಲರ್ ಪೊಲೀಸಿಂಗ್ ಜತೆಗೆ, ಜೂಜಾಟ, ಸಣ್ಣಪುಟ್ಟ ಇತರ ಅಕ್ರಮ ಚಟುವಟಿಕೆಗಳ ಬಗ್ಗೆಯೂ ಹೆಚ್ಚಿನ ಗಮನ ನೀಡಲಾಗುವುದು. ಫೋನ್ ಇನ್ ಕಾರ್ಯಕ್ರಮದ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಹಿಂದಿನ ಕಮಿಷನರ್ ಅವರು ಟ್ರಾಫಿಕ್ ಸಮಸ್ಯೆಗಳಿಗೂ ಹೆಚ್ಚಿನ ಒತ್ತು ನೀಡಿರುವುದು ಗಮನದಲ್ಲಿದ್ದು, ಅಂತಹ ಜಸನ್ನೇಹಿ ಕಾರ್ಯಕ್ರಮಗಳನ್ನು ಮುಂದುವರಿಸುವುದಾಗಿ ಹೇಳಿದರು.


Spread the love

Leave a Reply

Please enter your comment!
Please enter your name here