ಮಂಗಳೂರು: ಪಾಲಿಕೆ ನಿರ್ಲಕ್ಷಕ್ಕೆ ಮೀನುಗಳ ಮಾರಣಹೋಮ!
ಮಂಗಳೂರು: ನಗರದ ಹೊರವಲಯದ ಮಳವೂರು ಕೆಂಜಾರ್ ವ್ಯಾಪ್ತಿಯಲ್ಲಿ ಹರಿಯುವ ಪಾಲ್ಗುಣಿ ನದಿ ಈಗ ಸ್ಮಶಾನದಂತಾಗಿದೆ. ಎಲ್ಲಿ ನೋಡಿದರೂ ಸತ್ತು ತೇಲುತ್ತಿರುವ ಜಲಚರಗಳ ರಾಶಿ. ಇತ್ತೀಚೆಗಷ್ಟೇ ಕಪ್ಪು ಬಣ್ಣಕ್ಕೆ ತಿರುಗಿದ್ದ ನದಿ ನೀರು, ನಿನ್ನೆ ರಾತ್ರಿಯ ವೇಳೆಗೆ ಮೀನುಗಳ ಪಾಲಿಗೆ ವಿಷವಾಗಿ ಪರಿಣಮಿಸಿದೆ. ಇದಕ್ಕೆ ಕಾರಣ ಇಲ್ಲಿನ ಕೈಗಾರಿಕೆಗಳಿಂದ ಹರಿದುಬರುತ್ತಿರುವ ವಿಷಕಾರಿ ತ್ಯಾಜ್ಯ ಎನ್ನುವುದು ಸ್ಥಳೀಯರ ನೇರ ಆರೋಪ. ವರ್ಷಗಳಿಂದ ಈ ಸಮಸ್ಯೆ ಇದೆ. ನದಿ ನೀರು ಪೂರ್ತಿ ಕಪ್ಪಾಗಿದೆ. ಬರೀ ನದಿ ಮಾತ್ರವಲ್ಲ, ನಮ್ಮ ಮನೆಯ ಬಾವಿ ನೀರು ಕೂಡ ಕಲುಷಿತಗೊಂಡಿದೆ. ಯಾರೂ ನಮ್ಮ ಕಷ್ಟ ಕೇಳುವವರಿಲ್ಲ.” ಎಂದು ಅಳಲು ತೋಡಿಕೊಳುತ್ತಾರೆ ಸ್ಥಳೀಯರು
ಇದು ಕೇವಲ ಮಳವೂರು ಭಾಗದ ಕಥೆಯಲ್ಲ, ಬಜಪೆ ಪಂಚಾಯತ್ ವ್ಯಾಪ್ತಿಯ ಹಲವು ನದಿ ಮೂಲಗಳು ಇಂದು ಮಾಲಿನ್ಯದ ಸುಳಿಗೆ ಸಿಲುಕಿವೆ. ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಪಂಚಾಯತ್ ಈಗ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು, ಬೀದಿಗಿಳಿದು ಹೋರಾಟ ಮಾಡುವ ಎಚ್ಚರಿಕೆ ನೀಡಿದೆ.
ಘಟನೆ ತಿಳಿಯುತ್ತಿದ್ದಂತೆಯೇ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಉಪ ಪರಿಸರ ಅಧಿಕಾರಿ ಡಾ. ಮಹೇಶ್ವರಿ ಸಿಂಗ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪಚ್ಚನಾಡಿ ಎಸ್.ಟಿ.ಪಿ ಪ್ಲಾಂಟ್‌ನಿಂದ ಸಂಸ್ಕರಿಸದ ತ್ಯಾಜ್ಯ ನೀರನ್ನು ನೇರವಾಗಿ ನದಿಗೆ ಬಿಡಲಾಗುತ್ತಿದೆಯೇ ಎಂಬ ಸಂಶಯ ವ್ಯಕ್ತವಾಗಿದ್ದು, ಅಧಿಕಾರಿಗಳು ನದಿ ಮತ್ತು ಬಾವಿ ನೀರಿನ ಮಾದರಿಗಳನ್ನು ಸಂಗ್ರಹಿಸಿದ್ದಾರೆ.
ಒಟ್ಟಿನಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ಪ್ರಕೃತಿಯನ್ನು ಬಲಿ ಕೊಡಲಾಗುತ್ತಿದೆ. ಪಾಲಿಕೆಯ ನಿರ್ಲಕ್ಷ್ಯ ಮತ್ತು ಕೈಗಾರಿಕೆಗಳ ಲಾಭದ ಆಸೆಗೆ ಇವತ್ತು ಜೀವನಾಡಿ ಪಾಲ್ಗುಣಿ ಕಲುಷಿತಗೊಂಡಿದೆ. ಸತ್ತ ಮೀನುಗಳು ಅಧಿಕಾರಿಗಳ ಕಣ್ಣು ತೆರೆಸುತ್ತವೆಯೇ ಅಥವಾ ಜನರು ಮತ್ತಷ್ಟು ಸಂಕಷ್ಟ ಅನುಭವಿಸಬೇಕೇ ಎನ್ನುವುದನ್ನು ಕಾದುನೋಡಬೇಕಿದೆ.
