ಮಂಗಳೂರು: ಪೆಟ್ರೋಲ್ ಹಾಗೂ ಡಿಸೇಲ್ ಬೆಲೆ ಏರಿಕೆ ವಿರೋಧಿಸಿ ಪ್ರತಿಟನೆ

Spread the love

ಮಂಗಳೂರು: ಪೆಟ್ರೋಲ್ ಹಾಗೂ ಡಿಸೇಲ್ ಬೆಲೆ ಏರಿಕೆ ವಿರೋಧಿಸಿ ಪ್ರತಿಟನೆ

ಮಂಗಳೂರು: ಪೆಟ್ರೋಲ್ ಹಾಗೂ ಡಿಸೇಲ್ ಬೆಲೆ ಏರಿಕೆ ವಿರೋಧಿಸಿ ಕೇಂದ್ರ ಸರ್ಕಾರದ ವಿರುದ್ಧ ಮಂಗಳೂರು ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಎ.ಸಿ.ವಿನಯರಾಜ್ ನೇತೃತ್ವದಲ್ಲಿ ಸೋಮವಾರ ನಗರದ ಬಲ್ಮಠ ಪೆಟ್ರೋಲ್ ಬಂಕ್ ಎದುರುಗಡೆ ಪ್ರತಿಟನೆ ನಡೆಯಿತು.

ಈ ವೇಳೆ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಮ.ನ.ಪಾ ವಿರೋಧ ಪಕ್ಷದ ನಾಯಕ ಎ.ಸಿ.ವಿನಯರಾಜ್, 2014ರಲ್ಲಿ ಕೇಂದ್ರದ ಕಾಂಗ್ರೆಸ್ ಸರ್ಕಾರ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಸರಾಸರಿ 120 ಅಮೇರಿಕನ್ ಡಾಲರ್ ಇದ್ದರೂ ದೇಶವಾಸಿಗಳಿಗೆ ಹೊರೆಯಾಗದಂತೆ ಪೆಟ್ರೋಲ್ ಮತ್ತು ಡೀಸೆಲ್ ಅನ್ನು 72 ರೂ.ಮತ್ತು 61 ರೂ. ಗೆ ಸಬ್ಸಿಡಿ ಬೆಲೆಯಲ್ಲಿ ನೀಡಿತ್ತು. ಆ ಸಂದರ್ಭದಲ್ಲಿ ಪೆಟ್ರೀಲ್ ಮೇಲಿನ ಸುಂಕ ಒಂಭತ್ತುವರೆ ರೂ. ಹಾಗೂ ಡಿಸೇಲ್ ಮೇಲಿನ ಸುಂಕ ಮೂರುವರೆ ರೂ. ಇತ್ತು. ಆದರೆ ಇಂದು ಮೋದಿ ಸರ್ಕಾರ ಈ ಸುಂಕಗಳನ್ನು ಏರಿಸಿ ಪೆಟ್ರೋಲ್ ಗೆ 38 ರೂ/ಹಾಗೂ ಡೀಸೆಲ್ ಗೆ 28 ರೂ. ಏರಿಕೆ ಮಾಡಿರುತ್ತದೆ. ಇದಲ್ಲದೆ, ರಾಜ್ಯ ಸರ್ಕಾರ ಕೂಡ ಭಾರೀ ಸುಂಕ ಹಾಕಿರುವ ಕಾರಣ ದೇಶದಲ್ಲಿ ದೇಶದಲ್ಲಿ ಪೆಟ್ರೋಲ್ ಬೆಲೆ 100 ರೂ. ದಾಟಿದೆ ಹಾಗೂ ಮಂಗಳೂರಿನಲ್ಲಿ ಡೀಸೆಲ್ ಬೆಲೆ 92 ರೂ. ಆಗಿದೆ. ಇದರಿಂದ ಸರಕು ಸಾಗಾಣೆ ವೆಚ್ಚ ಜಾಸ್ತಿಯಾಗಿ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಈಗಾಗಲೇ ಕೊರೋನಾ ಮಾಹಾಮಾರಿಯಿಂದ ಲಾಕ್ ಡೌನ್ ಜಾರಿ ಮಾಡಿರುವುದರಿಂದ ಎಲ್ಲಾ ವರ್ಗದ ಜನ ಆರ್ಥಿಕವಾಗಿ ದುರ್ಬಲರಾಗಿರುವ ಸಂದರ್ಭ ಜೀವನ ನಡೆಸುವುದೇ ಕಷ್ಟಕರವಾಗಿದೆ. ಅಡುಗೆ ಅನಿಲದ ಬೆಲೆ 2014ರಲ್ಲಿ 400 ರೂ. ಇದ್ದುದನ್ನು 850 ರೂ. ಏರಿಕೆ ಮಾಡಲಾಗಿರುತ್ತದೆ. 2014ರಲ್ಲಿ ಸೈಕಲ್ ಸವಾರಿ, ಎತ್ತಿನಗಾಡಿ ಸವಾರಿ ಹಾಗೂ ಮಾರ್ಗದಲ್ಲಿ ಅಡುಗೆ ಮಾಡಿದ ಬಿಜೆಪಿ ನಾಯಕರು ಯಾಕೆ ಮೌನವಹಿಸಿದ್ದಾರೆ ಎಂದು ಪ್ರಶ್ನಿಸಿದರು, ಈ ಹೋರಾಟ ಮುಂದಿನದಿನಗಳಲ್ಲಿ ನಿರಂತರವಾಗಿ ನಡೆಯಲಿದೆ ಎಂದರು.

ಬಳಿಕ ಮಾತನಾಡಿದ ಮಾಜಿ ಶಾಸಕ ಜೆ.ಆರ್.ಲೋಬೊ, ತೈಲ ದರ ಕಡಿಮೆಮಾಡುತ್ತೇವೆಂದು ಸುಳ್ಳು ಹೇಳಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಸತತವಾಗಿ 7 ವರ್ಷಗಳಿಂದ ತೈಲ ಬೆಲೆಯನ್ನು ಏರಿಕೆ ಮಾಡುತ್ತಲೇ ಬಂದಿದೆ. ತೈಲದ ಮೇಲಿನ ಸಬ್ಸಿಡಿ ರದ್ದು ಮಾಡಿ ಬಡವರ ಜೀವನದಲ್ಲಿ ಚೆಲ್ಲಾಟವಾಡಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ನೋಡುವುದಾದರೆ ಶೇ.275 ರಷ್ಟು ಹೆಚ್ಚಿನದ್ದಾಗಿ ಸುಂಕ ವಿಧಿಸುತ್ತಿದೆ. ತೈಲ ಬೆಲೆಯ ಮೇಲೆ ಇಷ್ಟೊಂದು ಹೆಚ್ಚಿನ ತೆರಿಗೆ ಹಾಕಿದ ದೇಶ ಜಗತ್ತಿನಲ್ಲಿ ಬೇರೊಂದಿಲ್ಲ. ನಮ್ಮ ನೆರೆಯ ರಾಷ್ಟ್ರಾಗಳಲ್ಲಿ ತೈಲದ ದರ ಭಾರತಕ್ಕಿಂತಲೂ ಕಡಿಮೆ ಇದೆ. ಅಡುಗೆ ಅನಿಲ ದರವನ್ನು ಕೂಡ ಏರಿಕೆ ಮಾಡಿ ಜನರನ್ನು ಇನ್ನಷ್ಟು ಸಂಕಷ್ಟಕ್ಕೆದೂಡಿದೆ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ನಗರ ಬ್ಲಾಕ್ ಅಧ್ಯಕ್ಷರಾದ ಪ್ರಕಾಶ್ ಬಿ. ಸಾಲ್ಯಾನ್, ಮ.ನ.ಪಾ ಸದಸ್ಯರಾದ ಪ್ರವೀಣ್ ಚಂದ್ರ ಆಳ್ವ, ಜೆಸಿಂತಾ ವಿಜಯ್ ಆಲ್ಫ್ರೆಡ್, ಝೀನತ್ ಸಂಶುದ್ದೀನ್, ಅನಿಲ್ ಪೂಜಾರಿ, ಮಾಜಿ ಸದಸ್ಯರುಗಳಾದ ರತಿಕಲಾ, ಶೈಲ, ಅಲ್ಪಸಂಖ್ಯಾತ ವಿಭಾಗದ ರಾಜ್ಯ ಉಪಾಧ್ಯಕ್ಷ ಎ.ಸಿಜಯರಾಜ್, ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳಾದ ನೀರಜ್ ಚಂದ್ರಪಾಲ್, ಎ.ಸಿ ಮ್ಯಾಥ್ಯು, ಗಿರೀಶ್ ಶೆಟ್ಟಿ, ಚೇತನ್ ಪೂಜಾರಿ, ಕ್ಲಫರ್ಡ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಂತಲಾ ಗಟ್ಟಿ, ಮಂಜುಳಾ ನಾಯ್ಕ್, ಗೀತಾ ಪ್ರವೀಣ್, ರೈಲ್ವೇ ಪ್ರವೀಣ್, ಸತೀಶ್ ಬಲ್ಮಠ, ಸುರೇಶ್ ಬಲ್ಮಠ, ವಿತಾಲಿಶ್ ಫೆರಾವೊ ಮತ್ತಿತರರು ಉಪಸ್ಥಿತರಿದ್ದರು.

ದಕ್ಷಿಣ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಅನಿಲ್ ಪೂಜಾರಿ ಸ್ವಾಗತಿಸಿ, ನಗರ ಬ್ಲಾಕ್ ಯುವ ಕಾಂಗ್ರೆಸ್ ರಾಕೇಶ್ ದೇವಾಡಿಗ ವಂದಿಸಿದರು.


Spread the love