ಮಂಗಳೂರು ಬಂದರಿನಲ್ಲಿ ಲಂಗರು ಹಾಕಿದ ಬೋಟ್ಗಳು: ಊರಿನತ್ತ ಕಾರ್ಮಿಕರು
ಹರಾಜಿನ ಕೂಗು, ಬೋಟ್ ಗಳ ಎಂಜಿನ್ಗಳ ಸದ್ದು, ಟೆಂಪೋ – ಲಾರಿಗಳ ಓಡಾಟ ಹಾಗೂ ಕಾರ್ಮಿಕರ ಗದ್ದಲಗಳಿಂದ ಗಿಜಿಗುಡುತ್ತಿದ್ದ ಮಂಗಳೂರಿನ ಮೀನುಗಾರಿಕ ದಕ್ಕೆ ಇದೀಗ ಸ್ತಬ್ಧವಾಗಿದೆ. ವಾರ್ಷಿಕ ಮೀನುಗಾರಿಕೆ ಋತು ಅಂತ್ಯಗೊಂಡಿರುವ ಹಿನ್ನೆಲೆಯಲ್ಲಿ ಬಂದರಿನ ಬಹುತೇಕ ಚಟುವಟಿಕೆಗಳು ಸ್ಥಗಿತಗೊಂಡಿದ್ದು, ಬಂದರು ಪ್ರದೇಶದಲ್ಲಿ ನೀರವ ಮೌನವಿದೆ.
ರಾಜ್ಯದಲ್ಲಿ ಜೂ. 1ರಿಂದ ಜು.31ರ ವರೆಗೆ ಎರಡು ತಿಂಗಳ ಕಾಲ ಯಾಂತ್ರೀಕೃತ ಹಾಗೂ ಟ್ರಾಲ್ ಬೋಟ್ ಗಳ ಮೀನುಗಾರಿಕೆಗೆ ನಿಷೇಧ ಜಾರಿಯಲ್ಲಿದೆ. ಪ್ರಸ್ತುತ ಬಂದರಿನಲ್ಲಿ ಬೋಟ್ ಗಳಿಂದ ಮೀನು ತುಂಬಿಸುವ ಬಾಕ್ಸ್ ಗಳನ್ನು ತೆಗೆದು ದಕ್ಕೆಯಲ್ಲಿ ಜೋಡಿಸಿಡುವ ಕೊನೆಯಹಂತದ ಕೆಲವನ್ನು ಕೆಲವು ಕಾರ್ಮಿಕರು ಮಾಡುತ್ತಿದ್ದಾರೆ. ಟೆಂಪೋ, ಆಟೋ, ದ್ವಿಚಕ್ರ ವಾಹನ ಸಂಚಾರದಿಂದ ದಟ್ಟನೆ ಉಂಟಾಗುತ್ತಿದ್ದ ದಕ್ಕೆ ಪ್ರವೇಶಿಸುವ ರಸ್ತೆಗಳು ಖಾಲಿಯಾಗಿವೆ. ಚಾ- ತಿಂಡಿ ಅಂಗಡಿಗಳು ಗ್ರಾಹಕರಿಲ್ಲದೆ ಬಹುತೇಕ ಮುಚ್ಚಿವೆ.
ಸಾಮಾನ್ಯ ದಿನಗಳಲ್ಲಿ ಬೆಳಗ್ಗೆಯಿಂದಲೇ ನೂರಾರು ಆಗಮನ- ನಿರ್ಗಮನ ಆಗುತ್ತಿರುತ್ತವೆ. ಆದರೆ ಈಗ ಜೆಟ್ಟಿಯಲ್ಲಿ ನೂರಾರು ಬೋಟ್ಗಳು ಲಂಗರು ಹಾಕಿವೆ. ಒಂದು ಮತ್ತು ಎರಡನೇ ಹಂತದಲ್ಲಿ ಸ್ಥಳವಾಕಾಶ ಸಾಕಾಗದೆ, ಮೂನೇ ಹಂತ, ಬೆಂಗ್ರೆ, ಬತ್ತೇರಿ, ಕೂಳೂರು ಭಾಗಕ್ಕೂ ಕೆಲವು ಬೋಟ್ ಗಳನ್ನು ನಿಲ್ಲಿಸಲಾಗಿದೆ. ಬೋಟ್ಗಳ ದುರಸ್ತಿ, ಬಣ್ಣ ಬಳಿಯುವುದು ಹಾಗೂ ನಿರ್ವಹಣ ಕಾರ್ಯಗಳೂ ಆರಂಭವಾಗಿದ್ದು, ಮುಂದಿನ ಋತುವಿಗೆ ಸಜ್ಜಾಗಲು ಸಮಯ ಬಳಸಿಕೊಳ್ಳಲಾಗುತ್ತಿದೆ.
ಕರಾವಳಿಯಲ್ಲಿ ಮೀನುಗಾರಿಕೆ ಸ್ಥಗಿತವಾಗಿರುವುದರಿಂದ ಇನ್ನು ಹೊರ ರಾಜ್ಯಗಳಿಂದ ಮೀನು ಬರಬೇಕಾಗಿದೆ. ಗುಜರಾತ್, ಚೆನ್ನೈ ಮೊದಲಾದೆಡೆಗಳಿಂದ ಮೀನುಗಳು ಬರುತ್ತವೆ. ಐಸ್ ಹಾಕಿ ತಂದು ಇಲ್ಲಿ ಮಾರಾಟ ಮಾಡುವುದರಿಂದ ತಾಜಾ ಆಗಿರುವುದಿಲ್ಲ. ಜತೆಗೆ ದರವೂ ಹೆಚ್ಚಿರುತ್ತದೆ. ಮಳೆಗಾಲ ಆರಂಭವಾದ ಬಳಿಕ ನಾಡದೋಣಿ ಮೀನುಗಾರಿಕೆ ಆರಂಭವಾಗಲಿದೆಯಾದರೂ, ಹೆಚ್ಚಿನ ಪ್ರಮಾಣದಲ್ಲಿ ಮೀನು ದೊರೆಯುವುದಿಲ್ಲ. ಸಿಕ್ಕರೂ ಸ್ಥಳೀಯವಾಗಿಯೇ ಮಾರಾಟವಾಗಿ ಬಿಡುತ್ತದೆ. ಮಾರುಕಟ್ಟೆಗೆ ಬರುವ ಪ್ರಮಾಣವೂ ಕಡಿಮೆ ಎನ್ನುತ್ತಾರೆ ಮೀನುಗಾರರು.
ಬೋಟುಗಳಲ್ಲಿಮೀನುಗಾರಿಕೆ, ದಕ್ಕೆಯಲ್ಲಿ ಲೋಡಿಂಗ್- ಅನ್ ಲೋಡಿಂಗ್ ನಡೆಸುವ ಶೇ.90ರಷ್ಟು ಮಂದಿ ಹೊರ ರಾಜ್ಯವರು. ಜಾರ್ಖಂಡ್, ಬಿಹಾರ, ಒಡಿಶಾ, ತಮಿಳುನಾಡು, ಆಂಧ್ರ ಮೊದಲಾದೆಡೆಗಳಿಂದ ಬಂದು ಇಲ್ಲಿ ಕೆಲಸ ಮಾಡುತ್ತಾರೆ. ಮೀನುಗಾರಿಕೆ ರಜೆಯಿಂದಾಗಿ ಅವರೆಲ್ಲ ಊರುಗಳಿಗೆ ಮರಳಿದ್ದಾರೆ. ಎರಡು ತಿಂಗಳ ಬಳಿಕ ವಾಪಸಾಗಲಿದ್ದಾರೆ. ಮೀನುಕಾರ್ಮಿಕರು ಮಾತ್ರವಲ್ಲದೆ, ಐಸ್ ಫ್ಯಾಕ್ಟರಿ ಸಿಬಂದಿ, ಮೀನು ಸಾಗಾಟ ವಾಹನ ಚಾಲಕರು, ಮೀನು ಸಂಸ್ಕರಣಾ ಘಟಕಗಳ ಕಾರ್ಮಿಕರು ಹೀಗೆ ಎಲ್ಲರೂ ಪರ್ಯಾಯ ಉದ್ಯೋಗ ಮಾಡಬೇಕಾಗಿದೆ.
