ಮಂಗಳೂರು | ಬಡವರ ಕೆಲಸದ ಹಕ್ಕನ್ನು ಮೋದಿ ಸರಕಾರ ಕಿತ್ತುಕೊಂಡಿದೆ: ವಿಜಯ್ ಇಂದರ್ ಸಿಂಗ್ಲಾ
ಮಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವು ಸುಧಾರಣೆ ಹೆಸರಲ್ಲಿ ವಿಶ್ವದ ಅತಿ ದೊಡ್ಡ ಉದ್ಯೋಗ ಖಾತರಿ ಯೋಜನೆಯಾಗಿರುವ ಮನ್ರೇಗಾವನ್ನು ಕೊಲೆ ಮಾಡಿದೆ. ಬಡವರನ್ನು ಕೆಲಸದ ಹಕ್ಕನ್ನು ಕಸಿದುಕೊಂಡಿದೆ ಎಂದು ಎಐಸಿಸಿ ಜಂಟಿ ಖಜಾಂಚಿ, ಮಾಜಿ ಸಂಸದ ವಿಜಯ್ ಇಂದರ್ ಸಿಂಗ್ಲಾ ಹೇಳಿದ್ದಾರೆ.
ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಮನ್ರೇಗಾ ಗಾಂಧೀಜಿಯವರ ಗ್ರಾಮ ಸ್ವರಾಜ್ಯ, ಕಾರ್ಮಿಕರ ಘನತೆ ಮತ್ತು ವಿಕೇಂದ್ರಿಕೃತ ಅಭಿವೃದ್ಧಿಯ ದೃಷ್ಟಿಕೋನದ ಜೀವಂತ ಸಾಕಾರವಾಗಿದೆ. ಆದರೆ ಗಾಂಧೀಜಿ ಹೆಸರನ್ನು ಮೋದಿ ಸರಕಾರವು ಅಳಿಸಿ ಹಾಕಿದೆ ಎಂದರು.
ಮನ್ರೇಗಾ ಕೇಂದ್ರ ಸರಕಾರದ ಯೋಜನೆಯಾಗಿರುವುದರಿಂದ ಶೇ.100ರಷ್ಟು ಅನುದಾನವನ್ನು ಕೇಂದ್ರ ಸರಕಾರವೇ ನೀಡುತ್ತಿದೆ. ಆದರೆ ಇದೀಗ ಕೇಂದ್ರ ಸರಕಾರವು ಈ ಯೋಜನೆಯಲ್ಲಿ ಶೇ.40ರಷ್ಟು ಹಣವನ್ನು ರಾಜ್ಯ ಸರಕಾರ ಭರಿಸುವಂತೆ ಒತ್ತಡ ಹಾಕಲು ಪ್ರಯತ್ನಿಸುತ್ತಿದೆ ಎಂದು ಆಪಾದಿಸಿದರು.
ನರೇಂದ್ರ ಮೋದಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಮೊದಲ ದಿನದಿಂದಲೂ ಮನ್ರೇಗಾ ಬಗ್ಗೆ ವಿರೋಧ ವ್ಯಕ್ತಪಡಿಸುತ್ತಲು ಆರಂಭಿಸಿದ ಅವರು, ತಮ್ಮ ಅಧಿಕಾರದ ಅವಧಿಯಲ್ಲಿ ಮನ್ರೇಗಾವನ್ನು ವ್ಯವಸ್ಥಿತವಾಗಿ ದುರ್ಬಲಗೊಳಿಸುವ ಮೂಲಕ ಬಡವರಿಗೆ ತೊಂದರೆ ಮಾಡಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಮನ್ರೇಗಾವನ್ನು ಮುಗಿಸಲು ಮೋದಿ ಸರಕಾರ ನಡೆಸಿರುವ ಯತ್ನದ ವಿರುದ್ಧ ವಿಪಕ್ಷಗಳು ಲೋಕಸಭೆಯಲ್ಲಿ ಧ್ವನಿ ಎತ್ತಿದರೂ ಫಲಕಾರಿಯಾಗಲಿಲ್ಲ ಎಂದರು
ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಬಿ ರಮಾನಾಥ ರೈ., ವಿಧಾನ ಪರಿಷತ್ ಸದಸ್ಯರಾದ ಡಾ.ಮಂಜುನಾಥ ಭಂಡಾರಿ ಮತ್ತು ಐವನ್ ಡಿ ಸೋಜ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ.ಹರೀಶ್ ಕುಮಾರ್, ಮಾಜಿ ಶಾಸಕ ಜೆ. ಆರ್.ಲೋಬೊ, ಪ್ರಮುಖರಾದ ಎಂ.ಎ.ಗಪೂರ್, ಪದ್ಮರಾಜ್ ಆರ್ ಪೂಜಾರಿ, ಇನಾಯತ್ ಅಲಿ, ಶಶೀಧರ ಹೆಗ್ಡೆ, ಸದಾಶಿವ ಉಳ್ಳಾಲ, ಸುರೇಂದ್ರ ಕಂಬಳಿ, ಎಸ್.ಅಪ್ಪಿ , ವಿಶ್ವಾಸ್ ಕುಮಾರ್ ದಾಸ್ ಮತ್ತಿತರರು ಉಪಸ್ಥಿತರಿದ್ದರು.
