ಮಂಗಳೂರು : ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್‍ಗೆ ನಡೆಯುವ ಚುನಾವಣೆಯಲ್ಲಿ ಮರುಮತದಾನ ಉಂಟಾಗುವಂತಹ ಘಟನೆಗಳಿಗೆ ಆಸ್ಪದ ನೀಡದೆ ಶಾಂತಿ ಹಾಗೂ ಸುಸೂತ್ರವಾದ ಮತದಾನಕ್ಕೆ ಗಂಭೀರವಾಗಿ ತೊಡಗಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಅವರು ತಹಶೀಲ್ದಾರ್‍ಗಳಿಗೆ ಸೂಚಿಸಿದ್ದಾರೆ.
ಅವರು ಮಂಗಳವಾರ ತಮ್ಮ ಕಚೇರಿಯಲ್ಲಿ ವಿಧಾನಪರಿಷತ್ ಚುನಾವಣೆ ಸಂಬಂಧ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ತಹಶೀಲ್ದಾರ್‍ಗಳ ಸಭೆ ನಡೆಸಿ ಮಾತನಾಡಿದರು. ಅಭ್ಯರ್ಥಿಗಳ ಚುನಾವಣಾ ಖರ್ಚುವೆಚ್ಚದ ಮೇಲೆ ಮಿತಿ ಇರದಿದ್ದರೂ, ಮತದಾರರ ಪ್ರಭಾವ ಮತ್ತು ಓಲೈಕೆ ಬೀರುವ ಅಂಶಗಳ ಅಥವಾ ಆಮಿಷ ಒಡ್ಡುವಂತಹ ಪ್ರಕರಣಗಳಾಗದಂತೆ ಮೇಲೆ ತಹಶೀಲ್ದಾರ್‍ಗಳು ನಿಗಾ ಇಡಬೇಕು. ಅಭ್ಯರ್ಥಿಗಳು ಮತದಾನ ಮಾಡುವ ಬೂತ್‍ಗಳಲ್ಲಿ, ಶಾಸಕರು, ಸಂಸದರ ಬೂತ್‍ಗಳಲ್ಲಿ ಹಾಗೂ 40ಕ್ಕಿಂತ ಹೆಚ್ಚಿನ ಮತದಾರರು ಇರುವ ಬೂತ್‍ಗಳಲ್ಲಿ ಹೆಚ್ಚುವರಿ ಪೊಲೀಸ್ ಭದ್ರತೆ ಏರ್ಪಡಿಸಲಾಗುವುದು ಎಂದು ಅವರು ಹೇಳಿದರು.
ಮತದಾನ ಕೇಂದ್ರಗಳ ವ್ಯಾಪ್ತಿಯಲ್ಲಿ ಮೊಬೈಲ್ ಬಳಕೆಗೆ ಆಸ್ಪದ ನೀಡಬಾರದು. ಮತದಾನ ಪ್ರಕ್ರಿಯೆ ಆರಂಭವಾದ ಮಾಹಿತಿಯನ್ನು ಜಿಲ್ಲಾ ಚುನಾವಣಾ ಕಚೇರಿಗೆ ನೀಡುವುದು ಮುಖ್ಯವಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಮತದಾನ ಪ್ರಕ್ರಿಯೆ ಮುಕ್ತಾಯದ ನಂತರ ಆಯಾ ತಾಲೂಕು ಕೇಂದ್ರಗಳಿಗೆ ಮತಪೆಟ್ಟಿಗೆಯನ್ನು ತಂದು ಬಳಿಕ, ಅಲ್ಲಿಂದ ಮಂಗಳೂರಿನಲ್ಲಿರುವ ಮತ ಎಣಿಕೆ ಕೇಂದ್ರದಲ್ಲಿ ಇಡಲಾಗುವುದು. ನಂತರ ಮತ ಎಣಿಕೆ ಕೇಂದ್ರವನ್ನು ಪೊಲೀಸ್ ಇಲಾಖೆಯ ಸುಪರ್ದಿಗೆ ವಹಿಸಲಾಗುವುದು ಎಂದು ಎ.ಬಿ. ಇಬ್ರಾಹಿಂ ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶರಣಪ್ಪ ಮಾತನಾಡಿ, ನಕ್ಸಲ್ ಪ್ರದೇಶ ಸೇರಿದಂತೆ ಪ್ರಮುಖ ಮತದಾನ ಕೇಂದ್ರಗಳಿಗೆ ಹೆಚ್ಚಿನ ಭದ್ರತೆ ನೀಡಲಾಗುವುದು. ಚುನಾವಣೆಗೆ ಸಂಬಂಧಿಸಿದ ಭದ್ರತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದರು.
ಸಭೆಯಲ್ಲಿ ದ.ಕ. ಅಪರ ಜಿಲ್ಲಾಧಿಕಾರಿ ಕುಮಾರ್, ಉಡುಪಿ ಅಪರ ಜಿಲ್ಲಾಧಿಕಾರಿ ಕೆ. ಚನ್ನಬಸಪ್ಪ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ತಹಶೀಲ್ದಾರ್‍ಗಳು, ಚುನಾವಣಾ ತಹಶೀಲ್ದಾರ್‍ಗಳು ಭಾಗವಹಿಸಿದ್ದರು.