ಮಂಗಳೂರು | ರ್ಯಾಗಿಂಗ್ ಪ್ರಕರಣ: ಶ್ರೀನಿವಾಸ ವಿವಿಯ ಐವರು ವಿದ್ಯಾರ್ಥಿಗಳ ಬಂಧನ
ಮಂಗಳೂರು: ನಗರದ ಪಾಂಡೇಶ್ವರದಲ್ಲಿರುವ ಶ್ರೀನಿವಾಸ ವಿಶ್ವವಿದ್ಯಾನಿಲಯದ ಇಬ್ಬರು ಕಿರಿಯ ವಿದ್ಯಾರ್ಥಿಗಳ ಮೇಲೆ ರ್ಯಾಗಿಂಗ್ ನಡೆಸಿದ ಒಂಭತ್ತು ಮಂದಿ ಹಿರಿಯ ವಿದ್ಯಾರ್ಥಿಗಳ ಪೈಕಿ ಐವರನ್ನು ಪಾಂಡೇಶ್ವರ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಬಂಧಿತ ವಿದ್ಯಾರ್ಥಿಗಳನ್ನು ಪಯ್ಯನ್ನೂರಿನ ರೆಹಾನ್ ಎಂಪಿ, ತ್ರಿಕರಿಪುರದ ಉವೈಸ್, ಕಲ್ಲಿಕೋಟೆಯ ಆದಿಲ್, ಕಣ್ಣೂರಿನ ರೋಹನ್ ರೌನೂಶ್ ಮತ್ತು ನಾಸಿದ್ ಅಮೀರ್ ಎಂದು ಗುರುತಿಸಲಾಗಿದೆ. ಎಲ್ಲರೂ 19ರ ಹರೆಯದ ವಿದ್ಯಾರ್ಥಿಗಳಾಗಿದ್ದಾರೆ. ಈ ಪ್ರಕರಣದಲ್ಲಿ ಇನ್ನೂ ನಾಲ್ಕು ಮಂದಿ ವಿದ್ಯಾರ್ಥಿಗಳ ಬಂಧನವಾಗಲು ಬಾಕಿಯಿದ್ದು, ಅವರ ಬಂಧನಕ್ಕೆ ಪ್ರಕ್ರಿಯೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶ್ರೀನಿವಾಸ ವಿಶ್ವವಿದ್ಯಾನಿಲಯದ ಬಿಬಿಎ ಪೋರ್ಟ್ ಶಿಪ್ಪಿಂಗ್ ಲಾಜೆಸ್ಟಿಕ್ ಪ್ರಥಮ ವರ್ಷದ 19ರ ಹರೆಯದ ಇಬ್ಬರು ವಿದ್ಯಾರ್ಥಿಗಳ ಮೇಲೆ ಆ.19ರಂದು ಹಿರಿಯ ವಿದ್ಯಾರ್ಥಿಗಳಾದ ನಾಸಿದ್ ಅಮೀರ್, ಆದಿಲ್ ಎಂ., ಅರ್ಶಕ್, ಅನೀಶ್, ಉವೈಸ್, ರೋಹನ್ ರೌನೂಶ್, ಆದಿಲ್ ವಿ.ಪಿ., ರೆಹಾನ್ ಎಂ.ಪಿ, ಸಿನಾನ್ ಎಂಬವರು ಸೇರಿ ಬೈಕ್ನಲ್ಲಿ ಅಪಹರಿಸಿ ಮನೆಯೊಂದರ ಕೊಠಡಿಯಲ್ಲಿ ಕೂಡಿ ಹಾಕಿ ಹಲ್ಲೆ ಮಾಡಿರುವುದಾಗಿ ಸೆ.23ರಂದು ಪಾಂಡೇಶ್ವರ ಠಾಣೆಗೆ ದೂರು ನೀಡಲಾಗಿತ್ತು. ಅದರಂತೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಕಾರ್ಯಾಚರಣೆ ಆರಂಭಿಸಿ ಶುಕ್ರವಾರ ಐವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
