
ಮಂಗಳೂರು: ಲಂಚಕ್ಕೆ ಬೇಡಿಕೆ- ಭೂಮಾಪಕರಿಗೆ 3 ವರ್ಷ ಸಜೆ, 20000 ರೂ ದಂಡ
ಮಂಗಳೂರು: ಜಮೀನಿನ ಅಳತೆ ಮಾಡಿ ನಕ್ಷೆ ತಯಾರಿಸಿಕೊಡುವುದಕ್ಕೆ ಲಂಚ ಕೇಳಿದ ಭೂಮಾಪಕರಿಗೆ 3 ವರ್ಷ ಸಜೆ ಹಾಗೂ 20000 ದಂಡ ವಿಧಿಸಿದ 3 ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಮಂಗಳೂರು ಆದೇಶ ಹೊರಡಿಸಿದೆ.
ಕುಮಾರಿ’ ಆಂಕಿತರವರು ದಿ: 15-03-2014 ರಂದು ಠಾಣೆಗೆ ಪಿರ್ಯಾದಿ ನೀಡಿದ್ದು, ಪಿರ್ಯಾದಿನಲ್ಲಿ ಕುಮಾರಿ ಅಂಕಿತರವರ ತಂದೆ: ಕೃಷ್ಣಪ್ಪ ರವರಿಗೆ ಸಂಬಂಧಿಸಿದ ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದಲ್ಲಿ ಜಮೀನು ಇದ್ದು ಸದರಿ ಜಮೀನಿನ ಅಳತೆ ಮಾಡಿ ನಕ್ಷೆ ತಯಾರಿಸಿ ಕೊಡುವ ಸಂಬಂಧ ಮತ್ತೂರು ಭೂಮಾಪನ ಇಲಾಖೆಯಲ್ಲಿ ಭೂಮಾಪಕನಾಗಿ ಕಾರ್ಯನಿರ್ವಹಿಸುತ್ತಿದ್ದ ಮಹಾದೇವ ನಾಯಕ್ ರವರು ಲಂಚದ ಹಣ ಕೈ ಬೇಡಿಕೆ ಇಟ್ಟ ಬಗ್ಗೆ ಕರ್ನಾಟಕ ಲೋಕಾಯುಕ್ತ ಪೊಲೀಸ್ ಠಾಣೆ ಮಂಗಳೂರು ಇಲ್ಲಿ ಮೊಕದ್ದಮೆ ದಾಖಲಾಗಿದ್ದು ಇರುತ್ತದೆ.
ಸದರಿ ಪ್ರಕರಣದಲ್ಲಿ ಘನ 3ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಮಂಗಳೂರು ಇದರ ನ್ಯಾಯಾಧೀಶರಾದ ಮಾನ್ಯ ಬಿ.ಬಿ. ಜಕಾತಿ ಇವರು ವಿಚಾರಣೆ ನಡೆಸಿ ದಿ:07-10-2022 ರಂದು ಅಂತಿಮ ತೀರ್ಪು ನೀಡಿದ್ದು, ತೀರ್ಪಿನಲ್ಲಿ ಆರೋಪಿ ಮಹಾದೇವ ನಾಯಕ್ ಭೂಮಾಪಕರು, ಪುತ್ತೂರು ಭೂಮಾಪನ ಶಾಖೆ ಇವರಿಗೆ 03 ವರ್ಷ 03 ತಿಂಗಳ ಸಾದಾ ಸಜೆ ಹಾಗೂ ರೂ 20,000-00 ದಂಡ ವಿಧಿಸಿದ್ದಿರುತ್ತದೆ. ಆರೋಪಿ ದಂಡ ಕಟ್ಟಲು ವಿಫಲರಾದಲ್ಲಿ 03 ತಿಂಗಳ ಸಾದಾ ಸಜೆಯನ್ನು ಆದೇಶಿಸಿ ಅಂತಿಮ ತೀರ್ಪು ಹೊರಡಿಸಿರುತ್ತದೆ.
ಸದರಿ ಪ್ರಕರಣದಲ್ಲಿ ಶ್ರೀ ಎಸ್.ವಿಜಯ್ ಪ್ರಸಾದ್, ಪೊಲೀಸ್ ನಿರೀಕ್ಷಕರು ಕರ್ನಾಟಕ ಲೋಕಾಯುಕ್ತ ಮಂಗಳೂರು ಹಾಲಿ ಪೊಲೀಸ್ ಉಪಾಧೀಕ್ಷಕರು, ಕಾರ್ಕಳ ಉಪ ವಿಭಾಗ, ಇವರು ತನಿಖೆ ನಡೆಸಿ, ಮಾನ್ಯ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದು, ಶ್ರೀ ರವೀಂದ್ರ ಮುಸ್ಲಿಮಾಡಿ, ವಿಶೇಷ ಸಾರ್ವಜನಿಕ ಅಭಿಯೋಜಕರು, ಕರ್ನಾಟಕ ಲೋಕಾಯುಕ್ತ ಸರ್ಕಾರದ ಪರವಾಗಿ ವಾದ ಮಂಡಿಸಿರುತ್ತಾರೆ.