ಮಂಗಳೂರು: ಲಂಚ ಸ್ವೀಕಾರದ ಆರೋಪ: ಗ್ರಾಮ ಕರಣಿಕರಿಗೆ 14 ವರ್ಷ ಸಜೆ

Spread the love

ಮಂಗಳೂರು: ಲಂಚ ಸ್ವೀಕಾರದ ಆರೋಪ: ಗ್ರಾಮ ಕರಣಿಕರಿಗೆ 14 ವರ್ಷ ಸಜೆ

ಮಂಗಳೂರು: ಅಕ್ರಮ ಸಕ್ರಮದ ಅರ್ಜಿ ವಿಲೇವಾರಿಗೆ ರೂ 60000 ಲಂಚದ ಬೇಡಿಕೆ ಇಟ್ಟ ಗ್ರಾಮ ಕರಣಿಕರಿಗೆ 3ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಮಂಗಳೂರು ನ್ಯಾಯಾಧೀಶರು 14 ವರ್ಷ ಸಾದಾ ಸಜೆ ಹಾಗೂ 70000 ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ.

ಆರೋಪಿ ಎಸ್.ಮಹೇಶ್, ಗ್ರಾಮಕರಣಿಕರು, ಮಂಡೆಕೋಲು ಗ್ರಾಮ, ಸುಳ್ಯ ತಾಲೂಕು, ದ.ಕ ಜಿಲ್ಲೆ ಇವರು ಫಿರ್ಯಾದುದಾರರಾದ  ಗೋಪಾಲಕೃಷ್ಣ, ಮಂಡೆಕೋಲು ಸುಳ್ಯರವರ ಅಕ್ರಮ ಸಕ್ರಮದ ಅರ್ಜಿಯ ವಿಲೇವಾರಿಗೆ ರೂ 60,000/- ಲಂಚದ ಹಣದ ಬೇಡಿಕೆಯೊಡ್ಡಿದ್ದು, ದಿ: 07-06-2016 ರಂದು ರೂ. 45,000/- ವನ್ನು ಲಂಚದ ಹಣವಾಗಿ ಸ್ವೀಕರಿಸುವ ಸಮಯ ಟ್ರ್ಯಾಪ್ ಆಗಿ ಭ್ರಷ್ಟಾಚಾರ ನಿಗ್ರಹ ದಳ ಪೊಲೀಸ್ ಠಾಣೆ ಮಂಗಳೂರು ಇಲ್ಲಿ ಅ.ಕ್ರ 02/2016 ಕಲಂ 7, 13(1) (ಡಿ) ಜೊತೆಗೆ 13(2) ಭ್ರಷ್ಟಾಚಾರ ತಡೆ ಕಾಯ್ದೆ, 1988 ರೀತಿಯ ಪ್ರಕರಣ ದಾಖಲಾಗಿರುವುದಾಗಿದೆ.

ಸದ್ರಿ ಪ್ರಕರಣದ ವಿಚಾರಣೆಯನ್ನು 3ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಮಂಗಳೂರು ಇದರ ನ್ಯಾಯಾಧೀಶರಾದ ಮಾನ್ಯ ಬಿ.ಬಿ. ಜಕಾತಿ ಇವರು ವಿಚಾರಣೆ ನಡೆಸಿ ದಿ:02-03-2023 ರಂದು ಅಂತಿಮ ತೀರ್ಪು ನೀಡಿದ್ದು, ತೀರ್ಪಿನಲ್ಲಿ ಆರೋಪಿ ಶ್ರೀ ಎಸ್.ಮಹೇಶ್, ಗ್ರಾಮಕರಣೀಕರು, ಇವರಿಗೆ 14 ವರ್ಷಗಳ ಸಾದಾ ಸಜೆ ಹಾಗೂ ರೂ 70,000/- ದಂಡ ವಿಧಿಸಿದ್ದು, ಆರೋಪಿಯು ದಂಡ ಕಟ್ಟಲು ವಿಫಲನಾದಲ್ಲಿ ಮತ್ತೆ 08 ತಿಂಗಳ ಕಾಲ ಸಾದಾ ಸಜೆಗೆ ಆದೇಶಿಸಿ ಅಂತಿಮ ತೀರ್ಪು ಹೊರಡಿಸಿರುತ್ತದೆ.

ಸದರಿ ಪ್ರಕರಣದಲ್ಲಿ ಪ್ರಕರಣದ ತನಿಖೆಯನ್ನು  ದಿನಕರ ಶೆಟ್ಟಿ, ಪೊಲೀಸ್ ನಿರೀಕ್ಷಕರು, ಇವರು ಕೈಗೊಂಡು, ಯೋಗೀಶ್ ಕುಮಾರ್, ಪೊಲೀಸ್ ನಿರೀಕ್ಷಕರು, ಪೊಲೀಸ್ ಠಾಣೆ ಮಂಗಳೂರು ಇವರು ತನಿಖೆಯನ್ನು ಮುಂದುವರಿಸಿ ಆರೋಪಿಯ ವಿರುದ್ಧ ಘನ 3ನೇ ಹೆಚ್ಚುವರಿ ಜಿಲ್ಲಾ ಸತ್ರ ಮತ್ತು ವಿಶೇಷ ನ್ಯಾಯಾಲಯ, ಮಂಗಳೂರು ಇಲ್ಲಿಗೆ ದೋಷಾರೋಪಣ ಪತ್ರವನ್ನು ಸಲ್ಲಿಸಿದ್ದಿರುತ್ತದೆ. ಸದರಿ ಪ್ರಕರಣದಲ್ಲಿ ಶ್ರೀ ರವೀಂದ್ರ ಮುನ್ನಿಪಾಡಿ, ವಿಶೇಷ ಸಾರ್ವಜನಿಕ ಅಭಿಯೋಜಕರು, ಕರ್ನಾಟಕ ಲೋಕಾಯುಕ್ತ ಮಂಗಳೂರು ಇವರು ಸರ್ಕಾರದ ಪರವಾಗಿ ವಾದ ಮಂಡಿಸಿರುತ್ತಾರೆ.


Spread the love