ಮಂಗಳೂರು: ಲಾಲ್ಬಾಗ್ ಅಂಗಡಿಯಲ್ಲಿ ಅಕ್ರಮ ಇ-ಸಿಗರೇಟ್ ಮಾರಾಟ – ₹9.72 ಲಕ್ಷ ಮೌಲ್ಯದ ವಸ್ತುಗಳು ವಶಕ್ಕೆ
ಮಂಗಳೂರು, ಅಕ್ಟೋಬರ್ 6: ಮಂಗಳೂರು ನಗರದಲ್ಲಿ ನಿಷೇಧಿತ ಇ-ಸಿಗರೇಟ್ಗಳ ಅಕ್ರಮ ಮಾರಾಟ ಮತ್ತು ಸರಬರಾಜು ನಡೆಸುತ್ತಿದ್ದ ಅಂಗಡಿಯೊಂದರ ಮೇಲೆ ಪೊಲೀಸರು ದಾಳಿ ನಡೆಸಿ, ಒಟ್ಟು ₹9,72,745 ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಬರ್ಕೆ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಶ್ರೀ ಮೋಹನ್ ಕೊಟ್ಟಾರಿ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆ ವೇಳೆ, ಲಾಲ್ಬಾಗ್ನ ಸಾಯಿಬೀನ್ ಕಾಂಪ್ಲೆಕ್ಸ್ನ “ಆಮಂತ್ರಣ” ಎಂಬ ಅಂಗಡಿಯಲ್ಲಿ ಅಕ್ರಮ ಚಟುವಟಿಕೆ ನಡೆಯುತ್ತಿರುವುದು ಪತ್ತೆಯಾಗಿದೆ.
ಪೊಲೀಸರು ಅಂಗಡಿಯಲ್ಲಿ ದಾಳಿ ನಡೆಸಿದಾಗ, ವಿವಿಧ ಕಂಪನಿಗಳ 847 ಇ-ಸಿಗರೇಟ್ಗಳು (ಅಂದಾಜು ಮೌಲ್ಯ ₹4,43,125), 85% ಎಚ್ಚರಿಕಾ ಚಿತ್ರವಿಲ್ಲದೆ ಮಾರಾಟಕ್ಕಿಟ್ಟ ಸ್ವದೇಶಿ ಮತ್ತು ವಿದೇಶಿ ಕಂಪನಿಗಳ 10 ಪ್ಯಾಕ್ಗಳು (412 ಬಾಕ್ಸ್ಗಳು) ಹಾಗೂ ಹೆಚ್ಚುವರಿ 86 ಪ್ಯಾಕ್ ಸಿಗರೇಟ್ಗಳು (ಮೌಲ್ಯ ₹5,09,120), ಜೊತೆಗೆ ಹುಕ್ಕಾ ಸೇವನೆಗೆ ಬಳಸುವ 25 ಸಾಧನಗಳು (ಮೌಲ್ಯ ₹20,500) ವಶಕ್ಕೆ ಪಡೆಯಲಾಗಿದೆ.
ಒಟ್ಟು ₹9,72,745 ಮೌಲ್ಯದ ವಸ್ತುಗಳನ್ನು ಅಕ್ರಮವಾಗಿ ಸಂಗ್ರಹಿಸಿ ಸಾರ್ವಜನಿಕರಿಗೆ ಹಾಗೂ ಯುವಕರಿಗೆ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.
ಆರೋಪಿಗಳ ವಿವರಗಳು ಹೀಗಿವೆ:
1️⃣ ಸಂತೋಷ್ (32) – ವಾಸ: ಗಣೇಶ್ ಕೋಡಿ ಹೌಸ್, ಬಂಟ್ವಾಳ ತಾಲೂಕು
2️⃣ ಇಬ್ರಾಹಿಂ ಇರ್ಷಾದ್ (33) – ವಾಸ: ಜಾಮಿಯಾ ಮಸೀದಿ ಬಳಿ, ಕುದ್ರೋಳಿ, ಮಂಗಳೂರು
3️⃣ ಶಿವು ದೇಶಕೋಡಿ – “ಆಮಂತ್ರಣ” ಅಂಗಡಿಯ ಮಾಲಕ
ಮೇಲ್ಕಂಡ ಮೂವರ ವಿರುದ್ಧ ಬರ್ಕೆ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ಸಂಖ್ಯೆ 104/2025 ಅಡಿ Prohibition of Electronic Cigarettes Act 2019 (Sections 7 & 8) ಮತ್ತು COTPA (Cigarettes and Other Tobacco Products Act) 2015 (Section 20(2)) ಪ್ರಕಾರ ಪ್ರಕರಣ ದಾಖಲಿಸಲಾಗಿದೆ.
ತನಿಖೆಯನ್ನು ಬರ್ಕೆ ಪೊಲೀಸ್ ಠಾಣೆ ಮುಂದುವರೆಸುತ್ತಿದೆ.