ಮಂಗಳೂರು | ವಿಪತ್ತು ನಿರ್ವಹಣೆಗೆ ಅನುದಾನದ ಕೊರತೆ ಇಲ್ಲ : ಸಚಿವ ಯು.ಟಿ. ಖಾದರ್
ಮಂಗಳೂರು: ಪ್ರಕೃತಿ ವಿಕೋಪವನ್ನು ಎದುರಿಸಲು ಸರಕಾರ ಬೇಕಾದಷ್ಟು ಅನುದಾನವನ್ನು ನೀಡಿದೆ. ಅನುದಾನದ ಕೊರತೆ ಇಲ್ಲ.ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳು ದ.ಕ. ಜಿಲ್ಲೆಯ ಪ್ರತಿಯೊಂದು ತಾಲೂಕಿಗೂ ತಲಾ 44 ಲಕ್ಷ ರೂ. ಗಳಂತೆ ಒಟ್ಟು 1.5 ಕೋಟಿ ರೂ. ಒದಗಿಸಿದ್ದಾರೆ. ಇನ್ನು ಅಗತ್ಯ ಇದ್ದರೆ ಸರಕಾರ ಅನುದಾನ ಒದಗಿಸುತ್ತದೆ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.
ದ.ಕ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರವಿವಾರ ನಡೆದ ವಿಪತ್ತು ನಿರ್ವಹಣೆ ಮತ್ತು ಕುಡಿಯುವ ನೀರಿನ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರಾಕೃತಿಕ ವಿಕೋಪದಿಂದ ತೊಂದರೆಗೊಳಗಾದ ಪ್ರದೇಶಗಳಿಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ತಕ್ಷಣ ಧಾವಿಸಿ ಅಗತ್ಯದ ಕ್ರಮಕೈಗೊಳ್ಳಬೇಕು. ಸ್ಥಳಕ್ಕೆ ತೆರಳದೆ ಕೇವಲ ಯಾರಿಂದಲೂ ಫೋಟೊ ತೆಗೆಸಿಕೊಂಡು ಬಳಿಕ ಅನುದಾನ ನೀಡುವ ನಿಟ್ಟಿನಲ್ಲಿ ಪ್ರಕ್ರಿಯೆ ನಡೆಸುವುದು ಸರಿಯಲ್ಲ ಎಂದು ಹೇಳಿದರು.
ಪ್ರಾಕೃತಿಕ ವಿಕೋಪ ನಮ್ಮ ಕೈಯಲ್ಲಿಲ್ಲ. ಆದರೆ ಇದರಿಂದಾಗಿ ತೊಂದರೆಗೊಳಗಾದವರಿಗೆ ಜನಪ್ರತಿನಿಧಿಗಳು, ಅಧಿಕಾರಿಗಳು, ಸಾರ್ವಜನಿಕರು ಸಂತ್ರಸ್ತರ ಕಷ್ಟಗಳಿಗೆ ಸ್ಪಂದಿಸಲು ಶ್ರಮಿಸಬೇಕು ಎಂದು ಕರ್ನಾಟಕ ಸರಕಾರದ ಆರೋಗ್ಯ ಸಚಿವ ಯು.ಟಿ. ಖಾದರ್ ಹೇಳಿದರು.
ರಾಜ್ಯಮಟ್ಟದಲ್ಲಿ ಮಾಡಿದ ನಿಯಮಗಳು ಕೆಲವೊಂದು ಜಿಲ್ಲೆಗೆ ಹೊಂದಿಕೆಯಾಗುವುದಿಲ್ಲ. ಹೀಗಾಗಿ ನಿಯಮ ವ್ಯಾಪ್ತಿ ಯಲ್ಲಿ ಸಮಸ್ಯೆಗೆ ಪರಿಹಾರ ಕಂಡುಹಿಡಿಯಲು ಶ್ರಮಿಸಬೇಕಾಗಿದೆ ಎಂದರು.
*ಗೋಲು ಹೊಡೆಯಬೇಕು: ಅಧಿಕಾರಿಗಳು ಯಾವುದೇ ಸಮಸ್ಯೆಯನ್ನು ಫುಟ್ಬಾಲ್ನಲ್ಲಿ ಚೆಂಡನ್ನು ಪಾಸ್ ಮಾಡಿ ದಾಗೆ ಮಾಡಬಾರದು. ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು. ನಿಂತು ಗೋಲು ಹೊಡೆಯಬೇಕು ಎಂದು ಸಲಹೆ ನೀಡಿದರು.
*ಮಳೆಯ ಕೊರತೆ: ಮಳೆ ಮಾರ್ಚ್ 1ರಿಂದ ಮೇ 31ರ ತನಕ ಪೂರ್ವ ಮುಂಗಾರು ವಾಡಿಕೆಗಿಂತ ಶೇ 32ರಷ್ಟು ಕಡಿಮೆಯಾಗಿದೆ. ಕಳೆದ ಏಳು ದಿನಗಳಿಂದ ಚೆನ್ನಾಗಿ ಮಳೆಯಾಗಿದ್ದರೂ ವಾಡಿಕೆಗಿಂತ ಕಡಿಮೆ ಇದೆ. ಜನವರಿ 1ರಿಂದ ಜುಲೈ 4ರ ತನಕ 785.7 ಮಿ.ಮೀ ಮಳೆಯಾಗಿದೆ. ವಾಡಿಕೆ ಮಳೆ 1,338.07 ಮಿ.ಮಿ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಜೂನ್ನಲ್ಲಿ ಮಳೆಯಾಗದ ಕಾರಣ ಭತ್ತದ ನಾಟಿಗೆ ಸಮಸ್ಯೆಯಾಗಿದೆ. ತಗ್ಗುಪ್ರದೇಶದಲ್ಲಿ ಕೃಷಿಗೆ ಅನುಕೂಲ ವಾಗಿದ್ದರೂ, ಎತ್ತರ ಪ್ರದೇಶದಲ್ಲಿ ಕೃಷಿಗೆ ನೀರಾವರಿಯ ಅಗತ್ಯತೆ ಇದೆ. ಬೀಜ ಬೇಕಾದಷ್ಟು ಇದೆ. ಗೊಬ್ಬರದ ಕೊರತೆಇಲ್ಲ ಎಂದು ಕೃಷಿ ಅಧಿಕಾರಿ ಹೇಳಿದರು.
ಮಳೆಯಿಂದ ಅಥವಾ ಹವಾಮಾನದ ವೈಫರಿತ್ಯದಿಂದಾಗಿ ಭತ್ತದ ಕೃಷಿಗೆ ಹಾನಿಯಾದರೆ ಅಧಿಕಾರಿಗಳು ತಕ್ಷಣ ಹಾನಿಗೊಳಗಾದ ಪ್ರದೇಶಕ್ಕೆ ತೆರಳಿ ಸಮೀಕ್ಷೆ ನಡೆಸಿ ವರದಿ ಮಾಡಬೇಕು ಎಂ ಖಾದರ್ ಸೂಚಿಸಿದರು.
ಮಳೆ ಇಲ್ಲದೆ ಕಾರಣದಿಂದಾಗಿ ಕರಿಮೆಣಸಿನ ಬೆಳೆಗೆ ತೊಂದರೆ ಆಗಿದೆ. ಅಡಿಕೆಗೆ ಏನು ಆಗಿಲ್ಲ ಎಂದು ತೋಟಗಾರಿಕಾ ಅಧಿಕಾರಿಗಳು ತಿಳಿಸಿದರು.
ಅಡಿಕೆಗೆ ಕೆ.ಜಿಗೆ ಎಷ್ಟು ರೇಟ್ ಇದೆ ? ಎಂದು ಸಚಿವ ಖಾದರ್ ಕೇಳಿದಾಗ ಅಧಿಕಾರಿ ತಪ್ಪಾಗಿ ದರ ಜಾಸ್ತಿ ಹೇಳಿ ಕ್ಷಮಿಸಿ ಎಂದಾಗ ‘‘ ಅಷ್ಟೊಂದು ರೇಟ್ ಇದ್ದರೆ ಎಲ್ಲರೂ ಅಡಿಕೆ ಬೆಳೆಯಲು ಆರಂಭಿಸುತ್ತಾರಲ್ಲ’’ ಎಂದು ಖಾದರ್ ಅಧಿಕಾರಿಯನ್ನು ಎಚ್ಚರಿಸಿದರು.
*ಮಳೆಮಾಪನ ಕೇಂದ್ರಗಳು ಸರಿಯಾಗಿಲ್ಲ: ಜಿಲ್ಲೆಯಲ್ಲಿ ಕೆಲವು ಕಡೆ ಮಳೆ ಮಾಪನ ಕೇಂದ್ರಗಳು ಕೆಲವು ಕಡೆ ಸರಿಯಾಗಿಲ್ಲ ಎಂಬ ದೂರು ಇದೆ ಎಂದು ಸಚಿವ ಖಾದರ್ ಗಮನ ಸೆಳೆದಾಗ ಜಿಲ್ಲೆಯಲ್ಲಿ 274ಮಳೆಮಾಪನ ಕೇಂದ್ರಗಳಿದ್ದು, ಅವುಗಳಲ್ಲಿ 108 ಸರಿಯಾಗಿದೆ ಎಂದು ಎಡಿಸಿ ರಾಜು ಕೆ ತಿಳಿಸಿದರು.
ಮಳೆಮಾಪನ ಸರಿಯಾಗಿಲ್ಲದಿದ್ದರೆ ಕೃಷಿಗೆ ಸಮಸ್ಯೆಯಾಗುತ್ತದೆ ಎಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಮತ್ತು ‘ ಮಳೆಮಾಪನ ಸರಿಯಾಗಿಲ್ಲದ ಕಾರಣದಿಂದಾಗಿ ನಮ್ಮ ಜಿಲ್ಲೆಯಲ್ಲಿ ರೈತರಿಗೆ ತೊಂದರೆಯಾಗಿದೆ. ಅವರಿಗೆ ಸರಕಾರ ದಿಂದ ಸಿಗಬೇಕಾದ ಬೆಳೆ ವಿಮೆಯಲ್ಲಿ ತಾರತಮ್ಯ ಆಗಿದೆ ’ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಸಭೆಯ ಗಮನ ಸೆಳೆದರು.
*88 ಸಂಭವನೀಯ ಭೂ ಕುಸಿತ ಪ್ರದೇಶ: ದ.ಕ.ಜಿಲ್ಲೆಯಲ್ಲಿ 88 ಸಂಭನೀಯ ಭೂಕುಸಿತ ಪ್ರದೇಶ ಮತ್ತು 92 ಪ್ರವಾಹ ಪೀಡಿತ ಪ್ರದೇಶವೆಂದು ಗುರುತಿಸಲಾಗಿದೆ ಎಂದು ಜಿಲ್ಲಾಧಿಕಾರಿ ದರ್ಶನ್ ಎಚ್ವಿ ತಿಳಿಸಿದರು.
ನಾಗುರಿನಲ್ಲಿ ಜು.1ರಂದು ನಡೆದ ತಡೆಗೋಡೆ ಕುಸಿತ ಪ್ರಕರಣದ ಬಗ್ಗೆ ಎಫ್ಐಆರ್ ಆಗಿದೆ. ತಾಂತ್ರಿಕ ವರದಿ ಸರಕಾರಕ್ಕೆ ಸಲ್ಲಿಕೆಯಾಗಿದೆ. ಜಾಗದ ಮಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಅವರು ಹೇಳಿದರು.
ಮಂಗಳೂರು ನಗರದಲ್ಲಿ ಕೆಲವು ಕಡೆ ತಗ್ಗು ಪ್ರದೇಶದಲ್ಲಿ ಹಂಚಿಕೆ ಮಾಡಲಾದ ಸರಕಾರಿ ನಿವೇಶನದಲ್ಲಿ ಮನೆ ಕಟ್ಟಿ ವಾಸುತ್ತಿದ್ದಾರೆ. ಈ ಜಮೀನಿನ ಮೇಲಿನ ಜಾಗ ಖಾಸಗಿಯವರದ್ದು, ಒಂದು ವೇಳೆ ಅಲ್ಲಿ ಭೂಕುಸಿತ ಉಂಟಾಗಿ ಕೆಳಗಿನ ಪ್ರದೇಶದಲ್ಲಿರುವ ಮನೆಗೆ ಬಿದ್ದು ಮನೆ ಹಾನಿಗೊಂಡರೆ ಅದಕ್ಕೆ ಯಾರು ಜವಾಬ್ದಾರರು ? ಎಂದು ವಿಧಾನ ಪರಿಷತ್ ಐವನ್ ಡಿ ಸೋಜ ಪ್ರಶ್ನಿಸಿದರು.
ಸರಕಾರಿ ಜಾಗ ನಿವೇಶನ ಕೊಟ್ಟರೆ ಮಾತ್ರ ಸಾಲದು ಅಲ್ಲಿ ಕಟ್ಟಲಾದ ಮನೆಗಳಿಗೆ ತಡೆಗೋಡೆಯನ್ನು ಕಟ್ಟಿಕೊಡುವ ನಿಟ್ಟಿನಲ್ಲಿ ಕಂದಾಯ ಇಲಾಖೆ ಮತ್ತು ಮಹಾನಗರಪಾಲಿಕೆ ಗಮನ ಹರಿಸಲಿ ಎಂದು ಮಂಗಳೂರು ನಗರ ಶಾಸಕ ವೇದವ್ಯಾಸ ಕಾಮತ್ ಹೇಳಿದರು.
ಎನ್ಎಚ್ಎ , ಪಿಡಬ್ಲ್ಯುಡಿ ವಿರುದ್ಧ ಗರಂ: ರಾಷ್ಟ್ರೀಯ ಹೆದ್ದಾರಿಯಲ್ಲಿ ಪಂಪುವೆಲ್, ಕೊಟ್ಟಾರ,ನಂತೂರು, ಎಜೆ ಆಸ್ಪತ್ರೆಯ ಬಳಿ , ತೊಕ್ಕೊಟ್ಟು ಜಂಕ್ಷನ್ನ ಸಮಸ್ಯೆಯ ಬಗ್ಗೆ ಸಚಿವ ಖಾದರ್ ಗರಂ ಆಗಿ ಅಧಿಕಾರಿಗಳನ್ನು ತರಾಟೆಗೆ ತೆಗದುಕೊಂಡರು.
ಈ ಹಂತದಲ್ಲಿ ಎನ್ಎಚ್ಎ ಅಧಿಕಾರಿಗಳು ಕಾಮಗಾರಿಗೆ ಕೆಲವು ಇಲಾಖೆಗಳ ಅಸಹಕಾರ ಕಾರಣವಾಗಿದೆ. ನಂತೂರ್ನಲ್ಲಿ ಮೆಸ್ಕಾಂನ ಕಂಬ ತೆರವುಗೊಳಿಸಲು ವಿಳಂಬವಾಗಿದೆ. ಪಿಡಬ್ಲ್ಯುಡಿ ಅಸಹಾಕಾರ ಇದೆ ಎಂದು ಹೇಳಿದರು.
ನಂತೂರ್ನಲ್ಲಿ ರಾಷ್ಟ್ರೀಯ ಹೆದ್ದಾರಿಯ ಬದಿಯ ಹಳೆಯ ಕಟ್ಟಡವೊಂದು ರೋಡ್ ಕಟ್ಟಿಂಗ್ನಿಂದಾಗಿ ಅಪಾಯ ದಲ್ಲಿದೆ ಎಂದು ವಿಧಾನ ಪರಿಷತ್ ಐವನ್ ಡಿ ಸೋಜ ಧ್ವನಿಗೂಡಿಸಿದರು.
ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಪರಸ್ಪರ ಸಹಕಾರ ನೀಡಿದರೆ ಸಮಸ್ಯೆ ಬಗೆ ಹರಿಸಬಹುದು. ಪಿಡಬ್ಲ್ಯುಡಿ ಅಧಿಕಾರಿಗಳು ಯಾಕೆ ಮೌನ ವಹಿಸಿದ್ದಾರೆ. ಎನ್ಎಚ್ಎ ಮತ್ತು ಪಿಡಬ್ಲ್ಯುಡಿ ಅಧಿಕಾರಿಗಳು ಒಂದು ಕಡೆ ಕೂತು ಕೊಂಡು ಚರ್ಚಿಸಿ ಸಮಸ್ಯೆ ಬಗೆಹರಿಸಿ. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಜನಪ್ರತಿನಿಧಿಗಳು ಸಾರ್ವಜನಿಕರಿಂದ ಪೆಟ್ಟು ತಿನ್ನುವಂತಾಗಿದೆ ಎಂದು ಖಾದರ್ ಸೂಚನೆ ನೀಡಿದರು.
ರಾಷ್ಟ್ರೀಯ ಹೆದ್ದಾರಿ ಇಲಾಖೆಯಲ್ಲಿ ಸಿಬ್ಬಂದಿಯ ಕೊರತೆ ಇದೆ. ನಾವು ಈ ಸಮಸ್ಯೆಯ ಬಗ್ಗೆ ಹಲವು ಸಭೆಗಳಲ್ಲಿ ಗಮನ ಸೆಳೆದಿದ್ದರೂ ಸಮಸ್ಯೆ ಬಗೆಹರಿದಿಲ್ಲ ಎಂದು ಅಧಿಕಾರಿ ಸಮಯ ಗಮನ ಸೆಳೆದರು.
‘ನಿಮ್ಮ ಸಮಸ್ಯೆ ಏನು ಬಗ್ಗೆ ಬರೆದು ತಿಳಿಸಿ ದಿಲ್ಲಿಯಲ್ಲಿ ಕೇಂದ್ರ ಸಾರಿಗೆ ಸಚಿವರನ್ನು ಭೇಟಿಯಾಗಿ ಅವರಿಗೆ ತಿಳಿಸಿ ಎಲ್ಲ ಸಮಸ್ಯೆಗಳನ್ನು ಬಗೆಹರಿಸೋಣ ಎಂದು ಸಚಿವ ಖಾದರ್ ತಿಳಿಸಿದರು.
ಕುಡಿಯುವವರಿಗೆ ಅವಕಾಶ ನೀಡಬೇಡಿ: ಮೆಸ್ಕಾಂನಲ್ಲಿ ರಾತ್ರಿ ಹೊತ್ತು ಜನರ ಸಮಸ್ಯೆ ಆಲಿಸಲು ಕುಡಿಯುವ ಚಟ ಇರುವವರನ್ನು ನಿಯೋಜಿಸಬೇಡಿ. ಅವರು ಸಮಸ್ಯೆ ಹೇಳಿದ ಜನರಲ್ಲಿ ಏನೆಲ್ಲಾ ಮಾತನಾಡುತ್ತಾರೆ. ಇಂಥವರಿಗೆ ಕೆಲಸ ಕೊಡುವಾಗ ಎಚ್ಚರವಹಿಸಬೇಕು. ಮೆಸ್ಕಾಂನ ಸಮಸ್ಯೆಯನ್ನು ಯಾರನ್ನು ಸಂಪರ್ಕಿಸಬೇಕು ಎಂಬ ಬಗ್ಗೆ ಮಾಹಿತಿ ನೀಡಿ ಎಂದು ಸಚಿವ ಖಾದರ್ ಸಲಹೆ ನೀಡಿದರು.
*ಅಪಾಯದಲ್ಲಿರುವ ಶಾಲಾ ಕೊಠಡಿಗಳ ವರದಿ ನೀಡಿ: 2026ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಮಳೆಯಿಂದಾಗಿ ಹಾನಿ ಗೊಳಗಾದ 91 ಪ್ರಾಥಮಿಕ ಶಾಲೆಗಳ ದುರಸ್ತಿಗೆ 150.00ಲಕ್ಷ ರೂ ಹಾಗೂ 115 ಅಂಗನವಾಡಿ ಕೇಂದ್ರಗಳ ದುರಸ್ಥಿಗೆ ರೂ. 250.00 ಲಕ್ಷಗಳ ಅನುದಾನವನ್ನು ಎನ್ಡಿಎಫ್ , ಎಸ್ಡಿಆರ್ಎಫ್ ಮಾರ್ಗಸೂಚಿಗಳನ್ವಯ ಬಿಡುಗಡೆ ಮಾಡಲು ಕ್ರಮ ವಹಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಕೆಲವು ಶಾಲೆಗಳಲ್ಲಿ ಕೊಠಡಿಗಳು ನಾದುರಸ್ಥಿಯಲ್ಲಿರುವ ಬಗ್ಗೆ ಪತ್ರಿಕೆಗಳಲ್ಲಿ ವರದಿ ಪ್ರಕಟವಾಗುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಡಾ.ಮಂಜುನಾಥ ಭಂಡಾರಿ ಗಮನ ಸೆಳೆದರು.
ಈಗ ಎಷ್ಟು ಶಾಲೆಗಳಲ್ಲಿ ಶಾಲಾ ಕೊಠಡಿ ಕಟ್ಟಡಗಳು ಮತ್ತು ಆವರಣಗೋಡೆಗಳು ಅಪಾಯದಲ್ಲಿದೆ ಎಂಬ ಬಗ್ಗೆ ವರದಿ ನೀಡುವಂತೆ ಶಿಕ್ಷಣ ಇಲಾಖಾ ಅಧಿಕಾರಿಗಳು ಸಚಿವರು ಸೂಚಿಸಿದರು.
ಶ್ರೀಕ್ಷೇತ್ರ ಸುಬ್ರಹ್ಮಣ್ಯದಲ್ಲಿ ವೈದ್ಯರ ನೇಮಕವಾಗಲಿ: ಶ್ರೀಕ್ಷೇತ್ರ ಸುಬ್ರಹ್ಮಣ್ಯಕ್ಕೆ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರುವ ಹಿನ್ನೆಲೆಯಲ್ಲಿ ಸುಬ್ರಹ್ಮಣ್ಯದ ಸರಕಾರಿ ಆಸ್ಪತ್ರೆಯಲ್ಲಿ ರಾತ್ರಿ ಹೊತ್ತಿನಲ್ಲೂ ವೈದ್ಯರು ಬೇಕು ಎಂದು ಶಾಸಕಿ ಭಾಗೀರಥಿ ಮುರುಳ್ಯ ಮನವಿ ಮಾಡಿದರು.
ದೇವಸ್ಥಾನದ ಆಡಳಿತ ಸಮಿತಿಯಿಂದ ವೈದ್ಯರ ನೇಮಕವಾಗಲಿ. ಕ್ಷೇತ್ರಕ್ಕೆ ಕೋಟಿಗಟ್ಟಲೆ ಆದಾಯ ಬರುತ್ತದಲ್ಲ ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿದರು. ಆ ನಿಟ್ಟಿನಲ್ಲಿ ಗಮನ ಹರಿಸಿ ಎಂದು ಸಚಿವ ಖಾದರ್ ಅವರು ಆರೋಗ್ಯ ಇಲಾಖೆಗೆ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂಎ ಗಫೂರ್, ಸಿಇಒ ನರ್ವಾಡೆ ವಿನಾಯಕ ಕಾರ್ಬಾರಿ, ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ಸಿಎಚ್, ಜಿಲ್ಲಾ ಎಸ್ಪಿ ಡಾ. ಅರುಣ್, ಡಿಸಿಎಫ್ ರವಿಶಂಕರ್, ಮೂಡಾ ಅಧ್ಯಕ್ಷ ಸದಾಶಿವ ಉಳ್ಳಾಲ ಉಪಸ್ಥಿತರಿದ್ದರು.
ಕೃತಜ್ಞತಾ ಪತ್ರ: ನಗರದ ನಾಗೂರಿ ಬಳಿ ಬುಧವಾರ ಸಂಭವಿಸಿದ ತಡೆಗೋಡೆ ಕುಸಿತದಿಂದಾಗಿ ಮೃತಪಟ್ಟವರ ಕುಟುಂಬಸ್ಥರಿಗೆ ನೆರವಾದವರಿಗೆ ಆರೋಗ್ಯ ಸಚಿವ ಯು.ಟಿ. ಖಾದರ್ ಅವರು ಶ್ಲಾಘನೀಯ ಮತ್ತು ಕೃತಜ್ಞತಾ ಪತ್ರವನ್ನು ವಿತರಿಸಿದರು.
