ಮಂಗಳೂರು ವಿಮಾನ ದುರಂತ: ದಕ ಜಿಲ್ಲಾಡಳಿತದಿಂದ ಶ್ರದ್ದಾಂಜಲಿ

Spread the love

ಮಂಗಳೂರು ವಿಮಾನ ದುರಂತ: ದಕ ಜಿಲ್ಲಾಡಳಿತದಿಂದ ಶ್ರದ್ದಾಂಜಲಿ

ಮಂಗಳೂರು:  ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಳೆದ 13 ವರ್ಷಗಳ ಹಿಂದೆ ಸಂಭವಿಸಿದ ವಿಮಾನ ದುರಂತದಲ್ಲಿ ಅಗಲಿದವರ ಸ್ಮರಣಾರ್ಥ ಜಿಲ್ಲಾಡಳಿತದಿಂದ ತಣ್ಣೀರುಬಾವಿಯ ಹುತಾತ್ಮರ ಸ್ಮಾರಕದಲ್ಲಿ ಮೇ.22ರ ಸೋಮವಾರ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್, ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ, ಸಹಾಯಕ ಆಯುಕ್ತ ರಾಜು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕಿಶೋರ್ ಕುಮಾರ್ ಸೇರಿದಂತೆ ಜಿಲ್ಲಾ ಮಟ್ಟದ ಹಲವು ಅಧಿಕಾರಿಗಳು ಪುಷ್ಪ ನಮನ ಸಲ್ಲಿಸಿದರು.

2010ರ ಮೇ 22ರಂದು ಬೆಳಗ್ಗೆ ದುಬೈನಿಂದ ಬಂದ ಏರ್ ಇಂಡಿಯಾ ವಿಮಾನ ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ರನ್ ವೇಯಲ್ಲಿ ನಿಲ್ಲದೇ ಸೂಚನಾ ಗೋಪುರದ ಕಂಬಗಳಿಗೆ ಡಿಕ್ಕಿಯಾಗಿ ಅದನ್ನು ತುಂಡರಿಸಿ ಆಳ ಪ್ರದೇಶಕ್ಕೆ ಉರುಳಿ ದುರಂತ ಸಂಭವಿಸಿತ್ತು. ಆ ವೇಳೆ ವಿಮಾನದಲ್ಲಿ 166 ಪ್ರಯಾಣಿಕರಿದ್ದರು. ಅಪಘಾತದಲ್ಲಿ 158 ಮಂದಿ ಸಾವನ್ನಪ್ಪಿದ್ದು, 8 ಮಂದಿ ಬದುಕುಳಿದಿದ್ದರು.

ಸಾವನ್ನಪ್ಪಿದ 158 ಮಂದಿಯಲ್ಲಿ 12 ಮಂದಿಯ ಮೃತದೇಹದ ಗುರುತು ಪತ್ತೆಯಾಗಿರಲಿಲ್ಲ. ಗುರುತು ಪತ್ತೆಯಾಗದವರ ಮೃತದೇಹವನ್ನು ತಣ್ಣೀರು ಬಾವಿಯ ನದಿತೀರದಲ್ಲಿ ಅಂತ್ಯಸಂಸ್ಕಾರ ನಡೆಸಲಾಗಿತ್ತು. ಆ ಬಳಿಕ ಇದೇ ಸ್ಥಳದಲ್ಲಿ ಸ್ಮಾರಕವೊಂದನ್ನು ನಿರ್ಮಿಸಲಾಗಿತ್ತು. ಇಂದು ಜಿಲ್ಲಾಡಳಿತದಿಂದ ವಿಮಾನ ದುರಂತದಲ್ಲಿ ಸಾವನ್ನಪ್ಪಿದವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

2010ರ ಮೇ 22 ರಂದು ಸಂಭವಿಸಿದ ವಿಮಾನ ದುರಂತದಲ್ಲಿ ನೂರಾರು ಜನ ಮೃತ ಪಟ್ಟಿದ್ದಾರೆ, ಅವರ ಸ್ಮರಣಾರ್ಥ ಈ ಈ ಸ್ಮಾರಕ ನಿರ್ಮಿಸಲಾಗಿದೆ, ಸರ್ಕಾರದ ಎಲ್ಲಾ ಇಲಾಖೆಗಳ ವತಿಯಿಂದ ಹುತಾತ್ಮರಾದವರಿಗೆ ಗೌರವವನ್ನು ಸಲ್ಲಿಸುವುದು ಕರ್ತವ್ಯ ಹಾಗಾಗಿ ಈ ದಿನ ನಾವು ಪುಷ್ಪ ಗುಚ್ಚವನ್ನು ಅರ್ಪಿಸಿ ಅವರ ಆತ್ಮಕ್ಕೆ ಶಾಂತಿ ಕೋರಿ ಅವರ ಕುಟುಂಬಗಳಿಗೆ ಧೈರ್ಯ ನೀಡುವ ಮೂಲಕ ಅವರೊಂದಿಗೆ ಜಿಲ್ಲಾಡಳಿತ ಸದಾ ಇರುತ್ತದೆ ಎಂಬುದನ್ನು ತಿಳಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ರವಿಕುಮಾರ್.ಎಂ.ಆರ್ ತಿಳಿಸಿದರು.

ವಿಮಾನ ದುರಂತದಲ್ಲಿ ಸಾವನ್ನಪ್ಪಿದ ಮಹಿಳೆಯೊಬ್ಬರ ತಂದೆ ಹರಿಶ್ಚಂದ್ರ ಈ ಸಂದರ್ಭದಲ್ಲಿ ಮಾತನಾಡಿ, ದುಬೈನಿಂದ ಬರುತ್ತಿದ್ದ ಮಗಳನ್ನು ಕರೆದುಕೊಂಡು ಬರಲು ಹೋಗುತ್ತಿದ್ದಾಗ ಅಪಘಾತವಾದ ಸುದ್ದಿ ಬಂತು. ಅದರಲ್ಲಿ ಇದ್ದ ಮಗಳು ಮೃತಪಟ್ಟಿದ್ದಳು. ಆಕೆಯ ಉಂಗುರದ ಮೂಲಕ ಮೃತದೇಹವನ್ನು ಗುರುತು ಹಿಡಿಯಲಾಯಿತು. 13 ವರ್ಷವಾದರೂ ನೆನಪು ಮಾಸಿಲ್ಲ ಎಂದರು.

ಶ್ರದ್ದಾಂಜಲಿ ಅರ್ಪಣಾ ಕಾರ್ಯಕ್ರಮದಲ್ಲಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳು ಹಾಗೂ ನವ ಮಂಗಳೂರು ಬಂದರು ಪ್ರಾಧಿಕಾರದ ಅಧಿಕಾರಿಗಳು ಭಾಗವಹಿಸಿದ್ದರು.


Spread the love

Leave a Reply

Please enter your comment!
Please enter your name here