ಮಂಗಳೂರು ಸಬ್ ಜೈಲಿನಲ್ಲಿ ಮಾಡೂರು ಯುಸುಫ್ ಹತ್ಯೆ ಪ್ರಕರಣ: ಐವರು ಆರೋಪಿಗಳು ದೋಷಿ
ಮಂಗಳೂರು: 2015ರಲ್ಲಿ ಮಂಗಳೂರು ಸಬ್ ಜೈಲಿನಲ್ಲಿ ನಡೆದ ಮಾಡೂರು ಯುಸುಫ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ಪ್ರಕಟಿಸಿದೆ. ಪ್ರಕರಣದಲ್ಲಿ ಐವರು ಆರೋಪಿಗಳು ದೋಷಿಗಳೆಂದು ನ್ಯಾಯಾಲಯ ತೀರ್ಪು ನೀಡಿದ್ದು, ನಾಲ್ವರನ್ನು ಆರೋಪದಿಂದ ಖುಲಾಸೆಗೊಳಿಸಿದೆ. ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸುವುದು ಬಾಕಿಯಿದೆ.
2015ರ ನವೆಂಬರ್ 2ರಂದು ಮಂಗಳೂರು ನಗರದ ಬರ್ಕೆ ಪೊಲೀಸ್ ಠಾಣಾ ವ್ಯಾಪ್ತಿಯ ಮಂಗಳೂರು ಸಬ್ ಜೈಲಿನಲ್ಲಿ ಮಾಡೂರು ಯುಸುಫ್ ಎಂಬಾತನನ್ನು ಹತ್ಯೆ ಮಾಡಲಾಗಿತ್ತು. ಈ ಸಂಬಂಧ ಬರ್ಕೆ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 92/2015ರ ಅಡಿಯಲ್ಲಿ ಭಾರತೀಯ ದಂಡ ಸಂಹಿತೆಯ (IPC) ಕಲಂ 143, 144, 147, 148, 353, 427, 302 ಹಾಗೂ 149ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ನಡೆಸಿದ ಅಂದಿನ ತನಿಖಾಧಿಕಾರಿ ಎಸಿಪಿ ತಿಲಕ್ ಚಂದ್ರ ಅವರು 2016ರ ಜನವರಿ 28ರಂದು ಪ್ರಕರಣಕ್ಕೆ ಸಂಬಂಧಿಸಿದಂತೆ 10 ಮಂದಿ ಆರೋಪಿಗಳ ವಿರುದ್ಧ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಪ್ರಕರಣವು SC No.151/2021ರಂತೆ ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಟ್ಟಿತ್ತು. ಸೆಪ್ಟೆಂಬರ್ 28, 2026ರಂದು ಪ್ರಕಟವಾದ ತೀರ್ಪಿನಲ್ಲಿ ಲಿತೇಶ್ ಪೂಜಾರಿ, ಶೋಭರಾಜ್, ಯುವರಾಜ್, ಪ್ರದೀಪ್ ಹಾಗೂ ಉಮೇಶ್ ಕೊಂಬಾರ್ ವಿರುದ್ಧದ ಆರೋಪಗಳು ಸಾಬೀತಾಗಿವೆ ಎಂದು ನ್ಯಾಯಾಲಯ ತೀರ್ಪು ನೀಡಿದೆ.
ಇನ್ನು ಶರಣ್ ಪೂಜಾರಿ, ಮಹೇಶ್ ಕುಮಾರ್ ಹಾಗೂ ಕಮಲಾಕ್ಷ ಪೂಜಾರಿ ಅವರನ್ನು ಆರೋಪಗಳಿಂದ ಖುಲಾಸೆಗೊಳಿಸಲಾಗಿದೆ. ಮತ್ತೋರ್ವ ಆರೋಪಿ ಸತೀಶ್ ಪೂಜಾರಿ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಅವರ ವಿರುದ್ಧದ ವಿಚಾರಣೆಯು ಅಂತ್ಯಗೊಂಡಿದೆ.
ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರು ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು. ಐವರು ಆರೋಪಿಗಳಿಗೆ ವಿಧಿಸಲಾಗುವ ಶಿಕ್ಷೆಯ ಪ್ರಮಾಣವನ್ನು ನ್ಯಾಯಾಲಯ ಪ್ರಕಟಿಸುವುದು ಬಾಕಿಯಿದೆ.
