ಮಂಗಳೂರು | ಸಮುದ್ರದಲ್ಲಿ ಅಪಾಯಕ್ಕೆ ಸಿಲುಕಿದ್ದ 31 ಮೀನುಗಾರರ ರಕ್ಷಣೆ
ಮಂಗಳೂರು: ನವಮಂಗಳೂರು ಬಂದರ್ ನಿಂದ 100 ನಾಟಿಕಲ್ ಮೈಲು ದೂರದ ಅರಬ್ಬೀ ಸಮುದ್ರದಲ್ಲಿ ಶನಿವಾರ ಅಪಾಯಕಾರಿ ಸ್ಥಿತಿಯಲ್ಲಿದ್ದ ಬೋಟ್ ವೊಂದನ್ನು ಪತ್ತೆ ಹಚ್ಚಿದ ಇಂಡಿಯನ್ ಕೋಸ್ಟ್ ಗಾರ್ಡ್ 31 ಮೀನುಗಾರರನ್ನು ರಕ್ಷಿಸಿದೆ.
ಅ.24ರಂದು ಗೋವಾ ತೀರದಲ್ಲಿ ಕಾಣಿಸಿಕೊಂಡಿದ್ದ ಈ ಬೋಟ್ ಬಳಿಕ ಕಾಣೆಯಾಗಿತ್ತು. ಮಾಹಿತಿ ಪಡೆದ ಕೋಸ್ಟ್ಗಾರ್ಡ್ ಅಧಿಕಾರಿಗಳು ಸಿಬ್ಬಂದಿ ಮೂಲಕ ಹುಡುಕಾಟ ಆರಂಭಿಸಿದರೂ ಪ್ರಯೋಜನವಾಗಲಿಲ್ಲ. ಕೆಲವು ದಿನದಿಂದ ಸುರಿಯುವ ಭಾರೀ ಮಳೆ, ಗಾಳಿಗೆ ಸಮುದ್ರ ಪ್ರಕ್ಷುಬ್ಧಗೊಂಡಿತ್ತು. ಈ ವೇಳೆ ಮೀನುಗಾರಿಕೆಗೆ ತೆರಳಿದ್ದ ಬೋಟ್ ನಾಪತ್ತೆಯಾಗಿತ್ತು. ಬೋಟ್ ಪತ್ತೆಗೆ ಪ್ರಯತ್ನಿಸಿದರೂ ಫಲಿಸಿರಲಿಲ್ಲ. ಅಂತಿಮವಾಗಿ ಕೊಚ್ಚಿಯಿಂದ ಏರ್ ಕ್ರಾಫ್ಟ್ ತರಿಸಿ ಹುಡುಕಾಟ ಮುಂದುವರಿಸಲಾಯಿತು. ಶನಿವಾರ ಅಪಾಯಕ್ಕೆ ಸಿಲುಕಿದ್ದ ಬೋಟ್ ಅನ್ನು ಪತ್ತೆಹಚ್ಚಲಾಗಿದ್ದು, ಅದರಲ್ಲಿದ್ದ 31 ಮೀನುಗಾರರನ್ನು ರಕ್ಷಿಸಲಾಗಿದೆ ಎಂದು ಕೋಸ್ಟ್ ಗಾರ್ಡ್ ಪ್ರಕಟನೆ ತಿಳಿಸಿದೆ.
