ಮಂಗಳೂರು ಸೈಂಟ್ ಅಲೋಶಿಯಸ್ ಕಾಲೇಜಿನ ಮಾಜಿ ಪ್ರಾಂಶುಪಾಲ ಫಾ. ಸ್ವೀಬರ್ಟ್ ಡಿಸಿಲ್ವಾ ನಿಧನ
ಮಂಗಳೂರು: ಸೇಂಟ್ ಅಲೋಶಿಯಸ್ ಕಾಲೇಜಿನ ಮಾಜಿ ಪ್ರಾಂಶುಪಾಲರಾದ ಫಾ. ಸ್ವೀಬರ್ಟ್ ಡಿಸಿಲ್ವಾ ಎಸ್ಜೆ (68) ಅವರು ಹೃದಯಾಘಾತದಿಂದ ಗುರುವಾರ ನಿಧನ ಹೊಂದಿದರು.

ಉಡುಪಿ ಜಿಲ್ಲೆಯ ಉದ್ಯಾವರ ಮೂಲದವರಾದ ಅವರು ಪ್ರಾಥಮಿಕ ಶಿಕ್ಷಣವನ್ನು ಉದ್ಯಾವರದಲ್ಲಿ ಮುಗಿಸಿ, ನಂತರ ಮಂಗಳೂರಿನ ಸೇಂಟ್ ಅಲೋಶಿಯಸ್ ಕಾಲೇಜಿನಲ್ಲಿ ಬಿಎಸ್ಸಿ ಪದವಿ ಪಡೆದಿದ್ದರು. ಬಳಿಕ ಚೆನ್ನೈನ ಲೊಯೊಲಾ ಕಾಲೇಜಿನಲ್ಲಿ ಎಂಎಸ್ಸಿ ಹಾಗೂ ಮದ್ರಾಸ್ ಕ್ರಿಶ್ಚಿಯನ್ ಕಾಲೇಜ್, ತಂಬಾರಮ್ನಲ್ಲಿ ಎಂಫಿಲ್ ಪದವಿಯನ್ನು ಪೂರ್ಣಗೊಳಿಸಿದ್ದರು. ಪುಣೆಯ ಜ್ಞಾನ ದೀಪ ವಿದ್ಯಾಪೀಠದಲ್ಲಿ ತತ್ತ್ವಶಾಸ್ತ್ರ (ಥಿಯಾಲಜಿ) ಮತ್ತು ಚೆನ್ನೈನ ಸತ್ಯ ನಿಲಯಂ, ಸೇಕ್ರೆಡ್ ಹಾರ್ಟ್ ಕಾಲೇಜಿನಲ್ಲಿ ತತ್ವಶಾಸ್ತ್ರ ಶಿಕ್ಷಣ ಪಡೆದಿದ್ದರು.
2007ರಿಂದ 2017ರವರೆಗೆ ಸೇಂಟ್ ಅಲೋಶಿಯಸ್ ಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದ ಫಾ. ಡಿಸಿಲ್ವಾ ಅವರು ಕಾಲೇಜಿನ ಶೈಕ್ಷಣಿಕ ಹಾಗೂ ಆಡಳಿತಾತ್ಮಕ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ್ದರು.
ಫಾ. ಸ್ವೀಬರ್ಟ್ ಡಿಸಿಲ್ವಾ ಅವರು ಸೇಂಟ್ ಜೋಸಫ್ ಯೂನಿವರ್ಸಿಟಿ (ಬೆಂಗಳೂರು)ಯ ಮಾಜಿ ರೆಕ್ಟರ್ ಮತ್ತು ಪ್ರೋ-ಚಾನ್ಸಲರ್ ಆಗಿ ಕಾರ್ಯನಿರ್ವಹಿಸಿದ್ದರು. ಅದಕ್ಕೂ ಮೊದಲು ಸೇಂಟ್ ಜೋಸಫ್ ಕಾಲೇಜ್ ಆಫ್ ಲಾ ಸಂಸ್ಥೆಯ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದರು. ಪ್ರಸ್ತುತ ಅವರು ಬೆಂಗಳೂರಿನ ಅರೂಪೇ ನಿವಾಸದ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದರು.
ಶೈಕ್ಷಣಿಕ ಕ್ಷೇತ್ರದಲ್ಲಿ ಹಲವು ದಶಕಗಳಿಂದ ಸೇವೆ ಸಲ್ಲಿಸಿದ್ದ ಅವರು, ಅತ್ಯಂತ ಗೌರವಾನ್ವಿತ ಮತ್ತು ಪ್ರಭಾವಶೀಲ ಶಿಕ್ಷಣ ತಜ್ಞರಾಗಿ ಪರಿಗಣಿಸಲ್ಪಟ್ಟಿದ್ದರು.