ಮಂಗಳೂರು: ಸ್ಟೇಟ್‌ಬ್ಯಾಂಕ್‌ ಬಸ್ಸು ನಿಲ್ದಾಣದಲ್ಲಿ ನವಜಾತ ಶಿಶು ಪತ್ತೆ

Spread the love

ಮಂಗಳೂರು: ಸ್ಟೇಟ್‌ಬ್ಯಾಂಕ್‌ ಬಸ್ಸು ನಿಲ್ದಾಣದಲ್ಲಿ ನವಜಾತ ಶಿಶು ಪತ್ತೆ
 

ಮಂಗಳೂರು: ನಗರದ ಸ್ಟೇಟ್‌ಬ್ಯಾಂಕ್‌ ಸರ್ವಿಸ್‌ ಬಸ್‌ ನಿಲ್ದಾಣದಲ್ಲಿ ಹೆತ್ತವರು ಬಿಟ್ಟು ಹೋದ ನವಜಾತ ಶಿಶುವೊಂದು ಗುರುವಾರ ಪತ್ತೆಯಾಗಿದ್ದು, ವೆನ್ಲಾಕ್‌ನ ಆಸ್ಪತ್ರೆಯ ಮಕ್ಕಳ ಚಿಕಿತ್ಸಾ ವಿಭಾಗದಲ್ಲಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಮಗುವಿನ ಆರೋಗ್ಯದಲ್ಲಿ ಏರುಪೇರಾಗಿದ್ದು, ತಲೆಯಲ್ಲಿ ಸಣ್ಣ ಸಣ್ಣ ಗಾಯಗಳಿವೆ. ಪತ್ತೆಯಾದ ವೇಳೆ ಮೂಗಿಗೆ ಟ್ಯೂಬ್‌ ಹಾಕಿದ ಸ್ಥಿತಿಯಲ್ಲಿತ್ತು. ಫಿಟ್ಸ್‌ ಕೂಡಾ ಇರುವುದು ತಿಳಿದು ಬಂದಿದೆ. ಗಂಡು ಮಗುವಾಗಿದ್ದು, ಜನಿಸಿ ಸುಮಾರು ಒಂದು ವಾರ ಆಗಿರಬಹುದು ಎಂದು ವೆನ್ಲಾಕ್‌ ಆಸ್ಪತ್ರೆಯ ಮಕ್ಕಳ ಚಿಕಿತ್ಸಾ ವಿಭಾಗದ ವೈದ್ಯರಾದ ಡಾ| ಬಾಸಿತ್‌ ತಿಳಿಸಿದ್ದಾರೆ.

ಮಧ್ಯಾಹ್ನದ ಸಮಯದಲ್ಲಿ ಸರ್ವಿಸ್‌ ಬಸ್‌ ನಿಲ್ದಾಣದಲ್ಲಿ ಒಬ್ಬ ಗಂಡಸು ಹಾಗೂ ಹೆಂಗಸಿನೊಂದಿಗೆ ಈ ಮಗುವನ್ನು ಸ್ಥಳೀಯರು ನೋಡಿದ್ದಾರೆ. ಸಂಜೆ ವೇಳೆಗೆ ಮಗುವನ್ನು ಅಲ್ಲೇ ಇದ್ದ ಲೈಟ್‌ ಕಂಬವೊಂದರ ಬುಡದಲ್ಲೇ ಇರಿಸಿ ತೆರಳಿದ್ದರು. ಅಲ್ಲಿ ಕೇವಲ ಮಗು ಮಾತ್ರ ಇರುವುದನ್ನು ನೋಡಿದ ಚಾಲಕರು ಪೊಲೀಸರಿಗೆ ತಿಳಿಸಿದ್ದಾರೆ.

ಮಗು ಪತ್ತೆಯಾದ ಮಾಹಿತಿ ತಿಳಿಯುತ್ತಿದ್ದಂತೆ ಪಾಂಡೇಶ್ವರ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮಗುವನ್ನು ಲೇಡಿಗೋಷನ್‌ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ತಪಾಸಣೆ ನಡೆಸಿ ವೆನ್ಲಾಕ್‌ಗೆ ದಾಖಲಿಸಲಾಗಿದೆ. ಮಗುವನ್ನು ಯಾರು ಬಿಟ್ಟು ಹೋಗಿದ್ದಾರೆ ಎನ್ನುವ ಕುರಿತಂತೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.


Spread the love