
ಮಂಗಳೂರು: ಹಾಸ್ಟೆಲ್ ನಲ್ಲಿ ಆಹಾರ ಸೇವಿಸಿದ ನೂರಾರು ವಿದ್ಯಾರ್ಥಿಗಳು ಅಸ್ವಸ್ಥ – ಆಸ್ಪತ್ರೆಗೆ ದಾಖಲು
ಮಂಗಳೂರು: ನಗರದ ಹಾಸ್ಟೆಲೊಂದರಲ್ಲಿ ಸೋಮವಾರ ರಾತ್ರಿ ವಿಷಾಹಾರ ಸೇವನೆಯಿಂದ ನೂರಾರು ವಿದ್ಯಾರ್ಥಿಗಳು ಅಸ್ವಸ್ಥಗೊಂಡ ಘಟನೆ ನಡೆದಿದೆ.
ನಗರದ ಖಾಸಗಿ ನರ್ಸಿಂಗ್ ಕಾಲೇಜಿಗೆ ಸೇರಿದ ಶಕ್ತಿನಗರದಲ್ಲಿರುವ ಹಾಸ್ಟೆಲ್‌ನಲ್ಲಿಈ ದುರ್ಘಟನೆ ಸಂಭವಿಸಿದೆ. ಭಾನುವಾರ ರಾತ್ರಿ ಸೇವಿಸಿದ ಆಹಾರ ಕಲುಶಿತವಾಗಿರುವ ಸಾಧ್ಯತೆ ಇದ್ದು, ಭಾನುವಾರ ಮುಂಜಾನೆಯಿಂದಲೇ ಹಲವು ವಿದ್ಯಾರ್ಥಿಗಳಲ್ಲಿ ವಾಂತಿ, ತಲೆ ಸುತ್ತುವಿಕೆ ಕಂಡು ಬಂದಿದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸೋಮವಾರ ಮಧ್ಯಾಹ್ನ ಹಾಗೂ ರಾತ್ರಿ ಮತ್ತಷ್ಟು ವಿದ್ಯಾರ್ಥಿಗಳು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದರು.
ಎಜೆ ಆಸ್ಪತ್ರೆಯಲ್ಲಿ 52, ಕೆಎಂಸಿ ಜ್ಯೋತಿ ಆಸ್ಪತ್ರೆಯಲ್ಲಿ 18, ಯುನಿಟಿ ಆಸ್ಪತ್ರೆಯಲ್ಲಿ 14, ಸಿಟಿ ಆಸ್ಪತ್ರೆಯಲ್ಲಿ 8, ಮಂಗಳ ಆಸ್ಪತ್ರೆಯಲ್ಲಿ 3, ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ 42 ಮಂದಿ ವಿದ್ಯಾರ್ಥಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಸ್ಥಮಂಗಳೂರು ನಗರ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್, ಕೇಂದ್ರ ಉಪವಿಭಾಗ ಎಸಿಪಿ ರಾಜೇಂದ್ರ ಕುಮಾರ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಘಟನೆಯ ಕುರಿತು ಪ್ರತಿಕ್ರಿಯಿಸಿದ ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಸೋಮವಾರ ಊಟ ಸೇವಿಸಿದ ಮಕ್ಕಳು ಅಸ್ವಸ್ಥಗೊಂಡಿದ್ದು ಅವರನ್ನು ನಗರದ ಎಜೆ ಆಸ್ಪತ್ರೆ, ಕೆಎಮ್ ಸಿ ಆಸ್ಪತ್ರೆ, ಫಾದರ್ ಮುಲ್ಲರ್ ಆಸ್ಪತ್ರೆ, ಯುನಿಟಿ ಆಸ್ಪತ್ರೆ ಸಹಿತ ಹಲವು ಆಸ್ಪತ್ರೆಗಗಳಿಗೆ ದಾಖಲಿಸಲಾಗಿದ್ದು ಘಟನೆಗೆ ನೈಜ ಕಾರಣ ಏನು ಎನ್ನುವುದು ತನಿಖೆಯಿಂದ ತಿಳಿಯಲಿದೆ ಎಂದರು.