ಮಂಡ್ಯದಲ್ಲಿ ಭೀಕರ ಅಪಘಾತ: ಇತ್ತೀಚೆಗಷ್ಟೇ ಮದುವೆಯಾದ ನವ ಜೋಡಿ ಸೇರಿ ಮೂವರ ದುರ್ಮರಣ

Spread the love

ಮಂಡ್ಯದಲ್ಲಿ ಭೀಕರ ಅಪಘಾತ: ಇತ್ತೀಚೆಗಷ್ಟೇ ಮದುವೆಯಾದ ನವ ಜೋಡಿ ಸೇರಿ ಮೂವರ ದುರ್ಮರಣ

ಮಂಡ್ಯ: ಜಿಲ್ಲೆಯ ನಾಗಮಂಗಲದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನವ ಜೋಡಿ ಸೇರಿ ಮೂವರು ಸಾವಿಗೀಡಾಗಿದ್ದು, ಇನ್ನೊಬ್ಬರ ಸ್ಥಿತಿ ಚಿಂತಾಜನವಾಗಿದೆ. ಕೆಂಪನಕೊಪ್ಪು ಗೇಟ್ ಬಳಿ ಖಾಸಗಿ ಬಸ್ ಮತ್ತು‌ ಕಾರಿನ ಮಧ್ಯೆ ಡಿಕ್ಕಿಯಾಗಿ ದುರ್ಘಟನೆ ನಡೆದಿದೆ.

ಸೋಮವಾರಪೇಟೆ ಮೂಲದ ಸುದೀಪ್(35), ಶ್ರೀಜಾ(30) ಹಾಗೂ ತಂಗಮ್ಮ (55) ಮೃತ ದುರ್ದೈವಿಗಳು .ಬಸ್ ಚಾಲಕ ಹಾಗೂ ಬಸ್ ನಲ್ಲಿದ್ದ ನಾಲ್ವರಿಗೆ ಗಾಯವಾಗಿದೆ.

ಮೃತರೆಲ್ಲರೂ ಕೊಡಗಿನ ಸೋಮವಾರ ಪೇಟೆಯವರು ಎಂದು ತಿಳಿದುಬಂದಿದೆ. ಕಾರಿನಲ್ಲಿದ್ದ ನಾಲ್ಕು ಮಂದಿಯಲ್ಲಿ ಮೂವರು ಮೃತಪಟ್ಟಿದ್ದಾರೆ. ಇನ್ನೋರ್ವ ಯುವತಿಯ ಸ್ಥಿತಿ ಗಂಭೀರವಾಗಿದ್ದು, ಬಿಜಿಎಸ್​ ಆಸ್ಪತ್ರೆಗೆ ದಾಖಲಿಸಲಾಗಿದೆ. ನಾಗಮಂಗಲ ಸರ್ಕಾರಿ ಆಸ್ಪತ್ರೆಗೆ ಮೃತದೇಹಗಳನ್ನು ರವಾನಿಸಲಾಗಿದೆ. ಬೆಳ್ಳೂರು ಕಡೆಗೆ ತೆರಳುತ್ತಿದ್ದ ಬಸ್, ಮೈಸೂರು ಕಡೆಗೆ ಹೋಗುತ್ತಿದ್ದ ಕಾರಿನ ನಡುವೆ ಡಿಕ್ಕಿಯಾಗಿದೆ ಎಂದು ತಿಳಿದುಬಂದಿದೆ.

ಕೆಲ ದಿನಗಳ ಹಿಂದೆಯಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಸುದೀಪ್ ಹಾಗೂ ಶ್ರೀಜಾ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಎಳ್ಳ ಅಮವಾಸ್ಯೆ ಹಿನ್ನೆಲೆ ಇಂದು ಆದಿಚುಂಚನಗಿರಿ ಕ್ಷೇತ್ರಕ್ಕೆ ತೆರಳಿ, ಅಲ್ಲಿ ಪೂಜೆ ಮುಗಿಸಿ ವಾಪಸ್ ಸೋಮವಾರ ಪೇಟೆಗೆ ಬರುವಾಗ ಅಪಘಾತ ಸಂಭವಿಸಿದೆ. ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love