ಮಂಡ್ಯದ ಗ್ರಾಪಂಗಳನ್ನು ತಂಬಾಕು ಮುಕ್ತಗೊಳಿಸಿ:ಎಡಿಸಿ

Spread the love

ಮಂಡ್ಯದ ಗ್ರಾಪಂಗಳನ್ನು ತಂಬಾಕು ಮುಕ್ತಗೊಳಿಸಿ:ಎಡಿಸಿ

ಮಂಡ್ಯ: ಜಿಲ್ಲೆಯ ಪ್ರತಿ ತಾಲ್ಲೂಕಿನ ಒಂದು ಗ್ರಾಮ ಪಂಚಾಯಿತಿ ತಂಬಾಕು ಮುಕ್ತವಾಗುವಂತೆ ಕ್ರಮವಹಿಸಿ ಎಂದು ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ಶೈಲಜ ಹೇಳಿದರು.

ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ವತಿಯಿಂದ ನಡೆದ 2021-22 ನೇ ಸಾಲಿನ ಜಿಲ್ಲಾಮಟ್ಟದ ಮೊದಲ ತ್ರೈಮಾಸಿಕ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ತಂಬಾಕು ನಿಯಂತ್ರಣ ಮಾಡುವಲ್ಲಿ ಮಂಡ್ಯ ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಪಡೆದಿದ್ದು, ಅದು ಕುಗ್ಗದಿರಲಿ, ಮನೆ ಕಟ್ಟುವುದಕ್ಕಿಂತಲೂ ಕಟ್ಟಿದ ಮನೆಯನ್ನು ಉಳಿಸಿಕೊಂಡು ಹೋಗುವುದು ಮುಖ್ಯ ಎಂದರು.

ಜಿಲ್ಲಾ‌ ಸರ್ವೇಕ್ಷಣಾಧಿಕಾರಿಗಳು ಹಾಗೂ ಜಿಲ್ಲೆಯ ಎಲ್ಲಾ ಸರ್ಕಾರಿ ಅಧಿಕಾರಿಗಳು ಆಗಸ್ಟ್ 1 ರೊಳಗೆ ಪ್ರತಿ ತಾಲ್ಲೂಕಿನ ಒಂದು ಗ್ರಾಮ ಪಂಚಾಯಿತಿ ತಂಬಾಕು ಮುಕ್ತವಾಗುವಂತೆ ಕ್ರಮವಹಿಸಿ. ‌ತಂಬಾಕು ಸೇವನೆ ನಿಯಂತ್ರಣದಲ್ಲಿ ಆರಕ್ಷಕ ಇಲಾಖೆಯ ಸಹಾಯದಿಂದ ನಿರಂತರ ಕೋಪ್ಟಾ ದಾಳಿ ನಡೆಸಿ ಎಲ್ಲಾ ಅಂಗಡಿಗಳ ಮುಂದೆ ಸೆಕ್ಷನ-4 ಮತ್ತು 6ಎ ಪ್ರದರ್ಶಿಸಲು ಕಟ್ಟುನಿಟ್ಟಾಗಿ‌ ಸೂಚಿಸಿ, ಸರ್ಕಾರಿ ಕಛೇರಿ ಸೇರದಂತೆ ಎಲ್ಲಾ ಸಾರ್ವಜನಿಕ‌‌ ಸಂಸ್ಥೆಗಳಲ್ಲಿ ತಂಬಾಕು ನಿಷೇಧ ಜಾಹೀರಾತನ್ನು ಪ್ರದರ್ಶಿಸಬೇಕು ಹಾಗೂ ಸೆಕ್ಷನ್-7ರ ಉಲ್ಲಂಘಿತರ ಮೇಲೆ ಪ್ರಕರಣ ದಾಖಲಿಸಿ ವಸ್ತುಗಳನ್ನು ನಿಯಮಾನುಸಾರ ಜಪ್ತಿ ಮಾಡಲು ಕ್ರಮವಹಿಸಬೇಕು ಎಂದರು.

ಪಂಚಾಯತ್ ರಾಜ್ ಇಲಾಖೆಯು ಗ್ರಾಮಮಟ್ಟದಲ್ಲಿ ಮತ್ತು ನಗರಾಭಿವೃದ್ಧಿ ಇಲಾಖೆಯು ನಗರ ಮಟ್ಟದಲ್ಲಿ ನಿರಂತರ ಅರಿವು ಮೂಡಿಸುತ್ತಾ ತಂಬಾಕು ನಿಯಂತ್ರಣದ ಬಗ್ಗೆ ಗ್ರಾಮ ಮಟ್ಟದ ಸಮನ್ವಯ ಸಮಿತಿ ಸಭೆ ನಡೆಸಬೇಕು ಎಂದರು.

ಶಿಕ್ಷಣ ಇಲಾಖೆಯು ಶಾಲಾ ಮಟ್ಟದಲ್ಲಿ ಸಮಿತಿ ರಚಿಸಿ ಮಕ್ಕಳಿಗೆ ಅರಿವು ಮೂಡಿಸಿ ವಿದ್ಯಾಸಂಸ್ಥೆಗಳ ಸುತ್ತಮುತ್ತ 100 ಮೀಟರ್ ಅಂತರದಲ್ಲಿ ಯಾವುದೇ ರೀತಿಯ ತಂಬಾಕು ಸೇವನೆ ಹಾಗೂ ಮಾರಾಟ ಮಾಡುವಂತಿಲ್ಲ, ನಿಯಮ‌ ಉಲ್ಲಂಘಿಸಿದವರ ವಿರುದ್ಧ ಕ್ರಮ ವಹಿಸಬೇಕು. ಆರೋಗ್ಯ ಇಲಾಖೆಯು ಜಿಲ್ಲೆಯನ್ನು ತಂಬಾಕು ಮುಕ್ತಗೊಳಿಸಲು ನಿರಂತರ ಕಾರ್ಯಾಚರಣೆ ನಡೆಸಿ ವಿವಿಧ ಇಲಾಖೆಗಳ ಸಮನ್ವಯ ಏರ್ಪಡಿಸಿ ಅಗತ್ಯ ಕ್ರಮ ಕೈಗೊಳ್ಳಿ ಎಂದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ. ಧನಂಜಯ್, ರೆಡ್ ಕ್ರಾಸ್ ಮುಖ್ಯಸ್ಥರಾದ ವೀರ ಶಿವಲಿಂಗಯ್ಯ, ಡಿವೈಎಸ್ ಪಿ ಮಂಜುನಾಥ, ಜಿಪಂ ಉಪ ಕಾರ್ಯದರ್ಶಿ ಎನ್.ಡಿ ಪ್ರಕಾಶ್, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಲಹೆಗಾರರಾದ ತಿಮ್ಮರಾಜು, ಡಿಡಿಪಿಐ ಉಪ ಯೋಜನಾ ಸಮನ್ವಯಾಧಿಕಾರಿ ಲಕ್ಷ್ಮೀ, ತಾಲೂಕು ಆರೋಗ್ಯಾಧಿಕಾರಿ ಡಾ.ಜವರೇಗೌಡ, ಡಾ. ಅನಿಲ್ ಕುಮಾರ್, ಡಾ.ಸಂಜಯ್, ಡಾ. ಆಶಾಲತಾ ಮತ್ತಿತರರು ಇದ್ದರು.


Spread the love