ಮಂಡ್ಯ ಚುನಾವಣೆ ರೀತಿಯಲ್ಲಿ ಕುತಂತ್ರ:ನಿಖಿಲ್

Spread the love

ಮಂಡ್ಯ ಚುನಾವಣೆ ರೀತಿಯಲ್ಲಿ ಕುತಂತ್ರ:ನಿಖಿಲ್

ರಾಮನಗರ: ಮಂಡ್ಯ ಚುನಾವಣೆ ರೀತಿಯಲ್ಲಿಯೇ ನನ್ನ ವಿರುದ್ಧ ಕುತಂತ್ರ ಮಾಡಲಾಗುತ್ತಿದೆ ಎಂದು ರಾಮನಗರ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಆರೋಪಿಸಿದರು.

ತಾಲೂಕಿನ ಅವ್ವೇರಹಳ್ಳಿ ಗ್ರಾಮದಲ್ಲಿ ಬಿಜೆಪಿ ತೊರೆದು ಜೆಡಿಎಸ್ ಸೇರ್ಪಡೆಯಾದ ಮುಖಂಡರನ್ನು ಪಕ್ಷಕ್ಕೆ ಬರಮಾಡಿಕೊಂಡು ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆಯಲ್ಲಿ ಜೆಡಿಎಸ್ ಮತಗಳನ್ನು ವಿಭಜನೆ ಮಾಡಲು ಕಾಂಗ್ರೆಸ್-ಬಿಜೆಪಿ ನಾಯಕರು ಒಳಒಪ್ಪಂದ ಮಾಡಿಕೊಂಡಿದ್ದಾರೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ನನಗೆ ಮತ ಹಾಕದಿದ್ದರೂ ಪರವಾಗಿಲ್ಲ ಬಿಜೆಪಿಗೆ ಮತಹಾಕಿ ಎಂದು ಹೇಳುತ್ತಿದ್ದಾರೆ. ಕೆಲವು ಕಡೆ ಬಿಜೆಪಿಯವರು ಕೂಡ ಕಾಂಗ್ರೆಸ್‌ಗೆ ಮತ ಹಾಕುವಂತೆ ಪ್ರಚಾರ ಮಾಡುತ್ತಿರುವುದು ಬಹಿರಂಗವಾಗಿದೆ ಎಂದು ದೂರಿದರು.

ಜೆಡಿಎಸ್ ಮತಗಳನ್ನು ವಿಭಜನೆ ಮಾಡಲು ಹಿಂದಿನ ಮಂಡ್ಯದ ಚುನಾವಣೆ ರೀತಿಯಲ್ಲಿಯೇ ಇಲ್ಲಿಯೂ ಕಾಂಗ್ರೆಸ್-ಬಿಜೆಪಿ ನಾಯಕರು ಕುತಂತ್ರ ಮಾಡುತ್ತಿದ್ದಾರೆ. ನಾನು ಎಲ್ಲವನ್ನೂ ಬಹಿರಂಗವಾಗಿ ಚರ್ಚೆ ಮಾಡೋದಿಲ್ಲ. ಇದಕ್ಕೆ ಕ್ಷೇತ್ರದ ಮತದಾರರೇ ತಕ್ಕ ಉತ್ತರ ಕೊಡುತ್ತಾರೆ. ಇದರಿಂದ ಬೇಸತ್ತಿರುವ ಸ್ವಾಭಿಮಾನಿ ಬಿಜೆಪಿ ಕಾರ್ಯಕರ್ತರು ನಮ್ಮ ಪಕ್ಷವನ್ನು ಸೇರ್ಪಡೆ ಆಗುತ್ತಿದ್ದಾರೆ ಎಂದರು.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹಾಗೂ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿರವರ ನಾಯಕತ್ವವನ್ನು ಮೆಚ್ಚಿ ಹಾಗೂ ಜೆಡಿಎಸ್ ಪಕ್ಷದ ಸಿದ್ದಾಂತವನ್ನು ಒಪ್ಪಿ ಬಿಜೆಪಿಯವರು ಯುವಕನಿಗೆ ಶಕ್ತಿ ತುಂಬಲು ಪಕ್ಷಕ್ಕೆ ಬಂದಿದ್ದಾರೆ. ಬಿಜೆಪಿ-ಕಾಂಗ್ರೆಸ್ ಅನೈತಿಕ ಹೊಂದಾಣಿಕೆ ಮಾಡಿಕೊಂಡು ಮಂಡ್ಯದಂತೆ ಇಲ್ಲಿಯೂ ಕುತಂತ್ರದ ರಾಜಕಾರಣ ನಡೆಯುತ್ತಿರುವುದನ್ನು ಜೆಡಿಎಸ್ ಸೇರಿದ ಬಿಜೆಪಿ ಕಾರ್ಯಕರ್ತರೇ ತಿಳಿಸಿದ್ದಾರೆ ಎಂದರು.

ಕನಕಪುರದಲ್ಲಿ ಆರ್.ಅಶೋಕ್ ಮತ್ತು ಡಿ.ಕೆ.ಶಿವಕುಮಾರ್ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಸುಮ್ಮನೆ ಕಾಟಾಚಾರಕ್ಕೆ ಬಂದು ಕನಕಪುರದಲ್ಲಿ ಅರ್ಜಿ ಹಾಕಿದ್ದಾರೆ. ಗೆಲ್ಲುವ ವಿಶ್ವಾಸ ಇದ್ದಿದ್ದರೆ ಕನಕಪುರದಲ್ಲಿ ಮಾತ್ರ ಸ್ಪರ್ಧೆ ಮಾಡಬೇಕಿತ್ತು ಎಂದು ಸಚಿವ ಅಶೋಕ್ ಹೇಳಿಕೆಗೆ ನಿಖಿಲ್ ತಿರುಗೇಟು ನೀಡಿದರು.

ಸಚಿವ ಅಶೋಕ್ ರವರು ಚುನಾವಣೆಯನ್ನು ನಿಜವಾಗಿ ಎದುರಿಸುವುದಿದ್ದರೇ ಕನಕಪುರ ಕ್ಷೇತ್ರದಿಂದ ಮಾತ್ರ ಸ್ಪರ್ಧಿಸಬೇಕಾಗಿತ್ತು. ಪದ್ಮನಾಭನಗರ ಮತ್ತು ಕನಕಪುರ ಎರಡೂ ಕ್ಷೇತ್ರದಿಂದ ಸ್ಪರ್ಧೆ ಮಾಡಿರುವುದು ಹೊಂದಾಣಿಕೆ ಅಲ್ಲದೆ ಮತ್ತೇನು ಎಂದು ಪ್ರಶ್ನಿಸಿದರು. ಕನಕಪುರದಲ್ಲಿ ಬಿಜೆಪಿ ನೆಲೆಯೇ ಇಲ್ಲ. ಅಲ್ಲಿನ ಕಾರ್ಯಕರ್ತರಿಗೆ ನಾವು ರಕ್ಷಣೆ ನೀಡುತ್ತಾ ಬಂದಿದ್ದೇವೆ. ಬಿಜೆಪಿಯಿಂದ ನಾವು ಕಲಿಯುವುದು ಏನು ಇಲ್ಲ ಎಂದು ಕಿಡಿಕಾರಿದರು.

ಇದೇ ವೇಳೆ ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ ಮಾಜಿ ನಿರ್ದೇಶಕ ಕಾಡನಕುಪ್ಪೆ ರಾಘವೇಂದ್ರ, ಕೈಲಾಂಚ ಹೋಬಳಿ ಬಿಜೆಪಿ ಘಟಕ ಅಧ್ಯಕ್ಷ ಅವ್ವೇರಹಳ್ಳಿ ಪ್ರಶಾಂತ್, ಉಪಾಧ್ಯಕ್ಷ ಅಂಜನಾಪುರ ಕಿರಣ್, ಮರಳವಾಡಿ ಚಂದ್ರಣ್ಣ, ತಾಲೂಕು ಯುವ ಮೋರ್ಚಾ ಅಧ್ಯಕ್ಷ ರಾಜೇಶ್, ದೇವರದೊಡ್ಡಿ ರವಿನಾಯಕ, ಬನ್ನಿಕುಪ್ಪೆ ಈಶ್ವರಯ್ಯ, ಹೊಸದೊಡ್ಡಿ ರಾಕೇಶ್, ಅವ್ವೇರಹಳ್ಳಿ ಸತೀಶ್, ಅನಿತಾ, ನೆಲಮಲೆ ಮಹಾಲಕ್ಷ್ಮೀ, ಅಗರ ಕುಮಾರ್, ಮಶ್, ಸ್ವಾಮಿಗೌಡ ಸೇರಿದಂತೆ ಅನೇಕರು ಬಿಜೆಪಿ ತೊರೆದು ಜೆಡಿಎಸ್ ಸೇರ್ಪಡೆಯಾದರು.


Spread the love