ಮಂಡ್ಯ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಬದ್ಧ:ಸಿಎಂ ಬೊಮ್ಮಾಯಿ

Spread the love

ಮಂಡ್ಯ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಬದ್ಧ:ಸಿಎಂ ಬೊಮ್ಮಾಯಿ

ಕೆ.ಆರ್.ಪೇಟೆ: ಮಂಡ್ಯ ಜಿಲ್ಲೆಯ ಸಮಗ್ರ ಅಭಿವೃದ್ದಿಗೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಮಹಾಕುಂಭಮೇಳದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ, ಬಾಲಮಹದೇಶ್ವರರ ದೇವಾಲಯ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ನುಡಿದಂತೆ ನಮ್ಮ ಸರ್ಕಾರ ನಡೆದಿದೆ. ಮಂಡ್ಯದ ಮೈಷುಗರ್ ಕಾರ್ಖಾನೆ ಈಗಾಗಲೇ ಪ್ರಾರಂಭವಾಗಿದ್ದು, ಮುಂದಿನ ದಿನಗಳಲ್ಲಿ ಎಥೆನಾಲ್, ವಿದ್ಯುತ್ ಉತ್ಪಾದನೆ ಘಟಕಗಳನ್ನು ಆರಂಭಿಸಿ ರೈತರಿಗೆ ಸಹಕಾರಿಯಾಗಲು ಬದ್ಧರಾಗಿದ್ದೇವೆ. ಕೆರೆಕಟ್ಟೆಗಳು, ಮನೆಗಳು, ರೈತರ ಬೆಳೆಗಳು ನಾಶವಾಗಿದ್ದು, ಇವುಗಳಿಗೆ ಹಿಂದೆ ಒಂದು ವರ್ಷದ ನಂತರ ಪರಿಹಾರ ನೀಡಲಾಗುತ್ತಿತ್ತು, ಈಗ ಕೇವಲ ಒಂದು ತಿಂಗಳಿನಲ್ಲಿ ಸಂಕಷ್ಟಕ್ಕೆ ಒಳಗಾದವರಿಗೆ ಖಾತೆಗೆ ನೇರವಾಗಿ ಪರಿಹಾರದ ಮೊತ್ತವನ್ನು ಜಮಾ ಮಾಡಲಾಗುತ್ತಿದೆ. ಜೊತೆಗೆ ಮಂಡ್ಯ ಜಿಲ್ಲೆಯ ಹಾಗೂ ಕೆ.ಆರ್.ಪೇಟೆ ತಾಲ್ಲೂಕಿನ ರಸ್ತೆ ಅಭಿವೃದ್ಧಿಗೆ ಶೀಘ್ರವಾಗಿ ಅನುದಾನ ನೀಡುವುದಾಗಿ ಭರವಸೆ ನೀಡಿದರು. ಮಂಡ್ಯ ಜಿಲ್ಲೆಯ ಮೂಲಕ ಹಾದು ಹೋಗಿರುವ ಮೈಸೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನೀರು ನಿಲ್ಲದಂತೆ ಸಂಬಂಧಪಟ್ಟ ಅಧಿಕಾರಿಗಳ ಸಭೆ ನಡೆಸಿ ಸೂಕ್ತ ಕ್ರಮ ವಹಿಸಲಾಗುವುದು.

ಮಳವಳ್ಳಿಯಲ್ಲಿ 10 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮಾಡಿ ಸಂಪಿಗೆ ಹಾಕಿ ಅಮಾನುಷವಾಗಿ ಹತ್ಯೆ ಮಾಡಿರುವ ಘಟನೆ ಮನುಷ್ಯತ್ವ ಇರುವ ನಾಗರೀಕ ಸಮಾಜ ತಲೆ ತಗ್ಗಿಸುವಂತಹ ವಿಚಾರವಾಗಿದೆ. ಮನುಷ್ಯತ್ವ ಇರುವ ಯಾರೂ ಮಾಡದೇ ಇರುವ ಕ್ಷಮಿಸಲಾಗದ ಪಾಪದ ಕೆಲಸ ಮಾಡಿರುವ ಆರೋಪಿಗೆ ಕಠಿಣ ಶಿಕ್ಷೆಯಾಗಬೇಕು. ಈ ಮೂಲಕ ಮುಂದೆ ಯಾರೂ ಸಹ ಇಂತಹ ಪಾಪದ ಕೆಲಸಕ್ಕೆ ಕೈಹಾಕದಂತೆ ನೋಡಿಕೊಳ್ಳಬೇಕಾಗಿದೆ. ಮಳವಳ್ಳಿಯ ಸಂತ್ರಸ್ಥ ಕುಟುಂಬಕ್ಕೆ ಸರ್ಕಾರದ ವತಿಯಿಂದ 10 ಲಕ್ಷ ರೂ ಪರಿಹಾರ ನೀಡುವುದಾಗಿ ಘೋಷಣೆ ಮಾಡಿದರು.

ಹಾಸನ ಜಿಲ್ಲೆಯ ಅರಸೀಕೆರೆಯ ಬಳಿ ಭಾನುವಾರ ಮುಂಜಾನೆ ಟ್ಯಾಂಕರ್ ಮತ್ತು ಬಸ್ ಅಪಘಾತವಾಗಿದ್ದು ಸುಮಾರು 9 ಜನ ಮೃತಪಟ್ಟಿದ್ದಾರೆ. ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ.ಗಳ ಪರಿಹಾರ ಘೋಷಿಸಿದರು.

ಕಾರ್ಯಕ್ರಮದ ದಿವ್ಯ ಸಾನಿದ್ಯ ವಹಿಸಿದ್ದ ಸುತ್ತೂರು ಕ್ಷೇತ್ರದ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ ಕುಂಭಮೇಳಗಳು ಉತ್ತರ ಭಾರತದ ನಡೆಯುತ್ತಿದ್ದವು. ಆದರೆ ಮೊದಲ ಬಾರಿಗೆ ಆದಿಚುಂಚನಗಿರಿ ಕ್ಷೇತ್ರದ ಪದ್ಮಭೂಷಣ ಡಾ.ಬಾಲಗಂಗಾಧರನಾಥಸ್ವಾಮೀಜಿ ನೇತೃತ್ವದಲ್ಲಿ ಟಿ. ನರಸೀಪುರದಲ್ಲಿ ಕುಂಭಮೇಳ ನಡೆಸಲಾಗಿತ್ತು. ಈಗ ಪ್ರತಿ ಮೂರು ವ?ಕ್ಕೊಮ್ಮೆ ಕುಂಭಮೇಳ ನಡೆಯುತ್ತಿದೆ. 2013ರಲ್ಲಿ ಪ್ರಥಮ ಬಾರಿಗೆ ಕೆ.ಆರ್.ಪೇಟೆಯ ತ್ರಿವೇಣಿ ಸಂಗಮದಲ್ಲಿ ಪ್ರಥಮ ಕುಂಭಮೇಳ ನಡೆದಿತ್ತು. ಈಗ 9ವರ್ಷಗಳ ನಂತರ ಮಹಾಕುಂಭಮೇಳವು ಸಚಿವ ನಾರಾಯಣಗೌಡ ಹಾಗೂ ಕೆ.ಗೋಪಾಲಯ್ಯ ಅವರ ನೇತೃತ್ವದಲ್ಲಿ ನಡೆಯುತ್ತಿದೆ ಎಂದರು.


Spread the love