
ಮಕ್ಕಳನ್ನು ಮಕ್ಕಳ ಕೈಯ್ಯಿಂದಲೇ ದಂಡಿಸುವುದು ಅಪಾಯ ಶಿಕ್ಷಕ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಜೆ.ಪಿ ಹೆಗ್ಡೆ ಕಳವಳ
ಕುಂದಾಪುರ: ಶಿಕ್ಷಕರು ಮಕ್ಕಳಿಗೆ ಏನನ್ನು ಕಲಿಸುತ್ತಾರೊ ಅದು ಆ ಮಕ್ಕಳಲ್ಲಿ ಶಾಶ್ವತವಾಗಿ ಉಳಿಯುತ್ತದೆ. ಶಾಲೆಯಲ್ಲಿ ವಿದ್ಯಾರ್ಥಿಗಳನ್ನು ದಂಡಿಸಲಾಗದ ಶಿಕ್ಷಕಿ ಇನ್ನೊಬ್ಬ ಮಗುವಿನ ಬಳಿ ಹೊಡೆಸುವುದಿದೆ. ಹೊಡೆದ ಮಗುವಿನ ಪರಿಸ್ಥಿತಿ ಏನಾಗಬಹುದು, ಪೆಟ್ಟು ತಿಂದ ಮಗು ಏನಾಗಬಹುದು ಎಂದು ಆಲೋಚಿಸಿದರೆ ಭಯವಾಗುತ್ತದೆ. ಖಂಡಿತವಾಗಿಯೂ ಇದರ ಬಗ್ಗೆ ನಾವೆಲ್ಲರೂ ಆಲೋಚನೆ ಮಾಡಬೇಕು. ಕೊನೆಯಲ್ಲಿ ಕ್ಷಮೆ ಕೇಳಿದರೆ ಪರಿಹಾರ ಅಲ್ಲವೇ ಅಲ್ಲ. ಒಂದು ಮಗುವಿನಿಂದ ಇನ್ನೊಂದು ಮಗುವಿಗೆ ಹೊಡೆಸಿ ಭಾವನೆಗಳನ್ನು ಕೆದುಕಿದಾಗ ಅದು ಶಾಶ್ವತವಾಗಿ ದ್ವೇಷದ ಭಾವನೆ ಬೇರೂರುವಂತೆ ಮಾಡುತ್ತದೆ. ಆ ಪರಿಸ್ಥಿತಿ ನಿರ್ಮಾಣ ಮಾಡದ ಹಾಗೆ ನಾವೆಲ್ಲರೂ ನೋಡಿಕೊಳ್ಳಬೇಕು ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಕೆ. ಜಯಪ್ರಕಾಶ್ ಹೆಗ್ಡೆ ಕಳವಳ ವ್ಯಕ್ತಪಡಿಸಿದರು.
ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರ ಕುಂದಾಪುರ ವಲಯ, ಶಿಕ್ಷಕರ ದಿನಾಚರಣೆ ಸಮಿತಿ ಕುಂದಾಪುರ ಇವರ ಆಶ್ರಯದಲ್ಲಿ ಮಂಗಳವಾರ ನಗರದ ಆರ್.ಎನ್ ಶೆಟ್ಟಿ ಸಭಾಭವನದಲ್ಲಿ ನಡೆದ ಕುಂದಾಪುರ ವಲಯ ಮಟ್ಟದ ಶಿಕ್ಷಕರ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಒಳ್ಳೆಯ ನಾಗರಿಕರನ್ನು ಸಮಾಜಕ್ಕೆ ಕೊಡುವಂತಹ ಕೆಲಸ ಶಿಕ್ಷಣದ ಮೂಲಕ ಆಗಬೇಕು. ನಾವು ಮಕ್ಕಳಿಗೆ ಕಲಿಸುವುದನ್ನೇ ಶಿಕ್ಷಣ ಎಂದು ಭಾವಿಸುತ್ತೇವೆ. ಕೇವಲ ಅಕ್ಷರಭ್ಯಾಸ ಮಾತ್ರವೇ ಶಿಕ್ಷಣ ಅಲ್ಲ. ಅದು ಕೇವಲ ಶಿಕ್ಷಣದ ಭಾಗ. ಶಿಕ್ಷಣದಲ್ಲಿ ಕ್ರೀಡೆ, ಕಲೆ ಎಲ್ಲವೂ ಇದೆ. ಮಕ್ಕಳಿಗೆ ಯಾವುದರಲ್ಲಿ ಆಸಕ್ತಿ ಇದೆ ಅದರಲ್ಲಿ ಉತ್ತೇಜನ ಕೊಡುವಂತಹದು ತಂದೆ-ತಾಯಿಯಿಂದ ಆಗಬೇಕು. ತಂದೆ ತಾಯಿಗೆ ತಿಳಿಸುವಂತಹ ಕೆಲಸ ಶಿಕ್ಷಕರಿಂದ ಆಗಬೇಕಾಗುತ್ತದೆ ಶಿಕ್ಷಣ ಮತ್ತು ಆರೋಗ್ಯಕ್ಕೆ ಆದ್ಯತೆ ಕೊಟ್ಟಾಗ ಮಕ್ಕಳ ಭವಿಷ್ಯ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದರು.
ಕುವೆಂಪು ಬರೆದ “ಸರ್ವಜನಾಂಗದ ಶಾಂತಿಯ ತೋಟ” ಎನ್ನುವ ಅರ್ಥಪೂರ್ಣ ಸಾಲುಗಳು ಕೇವಲ ನಾಡಗೀತೆಗಷ್ಟೇ ಸೀಮಿತವಾಗಿಬಿಟ್ಟಿದೆ. ಶಾಲೆಗಳಲ್ಲಿ ಮಕ್ಕಳ-ಮಕ್ಕಳ ಜೊತೆಗಿನ ಭಿನ್ನಾಭಿಪ್ರಾಯಗಳು ಬೆಳೆಯುತ್ತಿದೆ. ಕೆಲವು ಶಿಕ್ಷಕರ ಮಧ್ಯೆದಲ್ಲಿದ್ದ ಭಿನ್ನಾಭಿಪ್ರಾಯಗಳು ಮಕ್ಕಳ ಮೇಲೆ ಪರಿಣಾಮ ಬೀರುತ್ತಿದೆ. ಇದು ಎಲ್ಲಾ ಕಡೆಗಳಲ್ಲಿ ಆಗುತ್ತಿದೆ ಎಂದು ನಾನು ಹೇಳಲಾರೆ. ಇದರ ಬಗ್ಗೆ ಜಾಗೃತೆ ವಹಿಸದಿದ್ದರೆ ನಾವು ಒಳ್ಳೆಯ ನಾಗರಿಕರನ್ನು ಸಮಾಜಕ್ಕೆ ಕೊಡಲು ಸಾಧ್ಯವಿಲ್ಲ. ನಮ್ಮ ಚಿಂತನೆ ಬದಲಾಗಬೇಕು. ಶಾಲೆಯ ವಾತಾವರಣ ಸರಿಪಡಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ. ಸೌಹಾರ್ದಯುತ ವಾತಾವರಣ ನಿರ್ಮಾಣ ಮಾಡಲು ಸಣ್ಣ ಪ್ರಾಯದಲ್ಲೇ ಮಕ್ಕಳಿಗೆ ಕಲಿಸಿದಾಗ ಅದು ಶಾಶ್ವತವಾಗಿ ಉಳಿಯುತ್ತದೆ ಎಂದು ಕೆ. ಜಯಪ್ರಕಾಶ್ ಹೆಗ್ಡೆ ಹೇಳಿದರು.
ನಿವೃತ್ತ ಉಪನ್ಯಾಸಕ ಡಾ| ಶ್ರೀಕಾಂತ ರಾವ್ ಸಿದ್ದಾಪುರ ವಿಶೇಷ ಉಪನ್ಯಾಸ ನೀಡಿದರು. ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಶಶಿಧರ್ ಅಧ್ಯಕ್ಷತೆ ವಹಿಸಿದ್ದರು.
ನಿವೃತ್ತ ಶಿಕ್ಷಕರನ್ನು, ಕಳೆದ ಸಾಲಿನ ಜಿಲ್ಲಾ ಪ್ರಶಸ್ತಿ ಪುರಸ್ಕೃತರನ್ನು ಸನ್ಮಾನಿಸಲಾಯಿತು.
ಬಂಟರ ಯಾನೆ ನಾಡವರ ಸಂಘದ ಸಂಚಾಲಕ ಆವರ್ಸೆ ಸುಧಾಕರ ಶೆಟ್ಟಿ, ಪುರಸಭೆ ಸದಸ್ಯೆ ಪ್ರಭಾವತಿ ಶೆಟ್ಟಿ, ಕ್ಷೇತ್ರ ಸಮನ್ವಯಾಧಿಕಾರಿ ಅಶೋಕ್ ನಾಯಕ್, ಟೀಚರ್ಸ್ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಮೂರ್ತಿ ಎಂ.ಎನ್., ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಗಣೇಶ್ ಕುಮಾರ್ ಶೆಟ್ಟಿ, ಪ್ರೌಢಶಾಲಾ ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷೆ ಜ್ಯೋತಿ ಶೆಟ್ಟಿ, ಅನುದಾನಿತ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪ್ರದೀಪ್ ಕುಮಾರ್ ಶೆಟ್ಟಿ, ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪ್ರದೀಪ್ ಕುಮಾರ್ ಭಂಡಾರಿ, ಶಿಕ್ಷಕರ ಸಂಘದ ಜಿಲ್ಲಾ ಉಪಾಧ್ಯಕ್ಷ ಮಂಜುನಾಥ್ ಪಾಲ್, ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃ ನವೀನ್‌ಚಂದ್ರ ಹೆಗ್ಡೆ ತೊಂಬತ್ತು, ದೈಹಿಕ ಶಿಕ್ಷಣ ಪರಿವೀಕ್ಷಕ ರವೀಂದ್ರ ನಾಯಕ್ ಉಪಸ್ಥಿತರಿದ್ದರು.
ಕ್ಷೇತ್ರ ಶಿಕ್ಷಣಾಧಿಕಾರಿ ಶೋಭಾ ಶೆಟ್ಟಿ ಸ್ವಾಗತಿಸಿದರು. ಬಿಐಇಆರ್‌ಟಿ ಶಂಕರ ಕುಲಾಲ್, ಸಂತೋಷ್, ಸುಕನ್ಯಾ ನಿರ್ವಹಿಸಿದರು. ಸಹಿಪ್ರಾ ಶಾಲೆ ಕುಂದಾಪುರ ಶಿಕ್ಷಕಿ ಸುಮನಾ, ಕೋಡಿ ಉರ್ದು ಶಾಲೆಯ ಶಿಕ್ಷಕ ರಾಜೇಶ್ ಅವರಿಂದ ಯಕ್ಷಗಾನ ಭಾಗವತಿಕೆ ನಡೆಯಿತು.