ಮಕ್ಕಳ ಮಾಹಿತಿ, ಭಾವಚಿತ್ರ ಬಹಿರಂಗ ಅಪರಾಧ

Spread the love

ಮಕ್ಕಳ ಮಾಹಿತಿ, ಭಾವಚಿತ್ರ ಬಹಿರಂಗ ಅಪರಾಧ

ಬೆಂಗಳೂರು: ಬಾಲನ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣೆ)ತಿದ್ದುಪಡಿ ಕಾಯ್ದೆ 2021ರ ಕಲಂ 74ರಲ್ಲಿ ಮಕ್ಕಳ ಮಾಹಿತಿಯನ್ನು ಹಾಗೂ ಭಾವಚಿತ್ರವನ್ನು ಬಹಿರಂಗಪಡಿಸುವುದು ಶಿಕ್ಷಾರ್ಹ ಅಪರಾಧವಾಗಿದೆ ಎಂದು ಮಕ್ಕಳ ರಕ್ಷಣಾ ನಿರ್ದೇಶನಾಲಯವು ಬಾಲನ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣೆ) ಆದೇಶ ನೀಡಿದೆ.

ಮಕ್ಕಳ ರಕ್ಷಣಾ ನಿರ್ದೇಶನಾಲಯದ ನಿರ್ದೇಶಕರು ಇತ್ತೀಚೆಗೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಅಪ್ತಾಪ್ರ ಬಾಲಕೀಯ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಕುರಿತು ಮಾಧ್ಯಮಗಳಲ್ಲಿ ಭಿತ್ತರಿಸಿದ ವರದಿಗಳಲ್ಲಿ ಮಗುವಿನ ಛಾಯಾಚಿತ್ರ ಹಾಗೂ ಹೆಸರು ಪ್ರಕಟಿಸಿರುವುದರ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ಬಾಲನ್ಯಾಯ(ಮಕ್ಕಳ ಪಾಲನೆ ಮತ್ತು ರಕ್ಷಣೆ)ತಿದ್ದುಪಡಿ ಕಾಯ್ದೆ 2021ರ ಕಲಂ 74ರಲ್ಲಿ ಮಕ್ಕಳ ಮಾಹಿತಿಯನ್ನು ಹಾಗೂ ಭಾವಚಿತ್ರವನ್ನು ಬಹಿರಂಗಪಡಿಸುವುದು ಶಿಕ್ಷಾರ್ಹ ಅಪರಾಧವಾಗಿರುತ್ತದೆ. ಅಲ್ಲದೇ ತಿದ್ದುಪಡಿ ಕಾಯ್ದೆ ಕಲಂ 75ರಲ್ಲಿ ಮಕ್ಕಳ ಮಾಹಿತಿಯನ್ನು ಬಹಿರಂಗಪಡಿಸಿದ್ದಲ್ಲಿ ಶಿಕ್ಷೆಗೆ ಒಳಪಡಿಸುವ ಹಾಗೂ ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಅಧಿನಿಯಮ 2012 ಕಲಂ 23(2)ರಲ್ಲಿಯೂ ಸಹ ಮಕ್ಕಳ ಗುರುತನ್ನು ಬಹಿರಂಗಪಡಿಸುವುದನ್ನು ನಿಷೇಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಅಧಿನಿಯಮ 2012ರಲ್ಲಿ ಅತ್ಯಾಚಾರ ಎಂಬ ಶಬ್ದದ ಬಳಕೆ ಇರುವುದಿಲ್ಲ; ಅದರ ಬದಲಿಗೆ ಅಧಿನಿಯಮದಲ್ಲಿಯೇ ಲೈಂಗಿಕ ಅಪರಾಧ ಎಂಬ ಪದವನ್ನು ಉಲ್ಲೇಖಿಸಲಾಗಿದೆ ಎಂದು ತಿಳಿಸಿರುವ ಅವರು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯಗಳು ನಡೆದ ಸಂದರ್ಭಗಳಲ್ಲಿ ಮಕ್ಕಳಿಗೆ ಸಲ್ಲದ ಶಬ್ದಗಳನ್ನು ಬಳಸದಂತೆ ಹಾಗೂ ಮಕ್ಕಳ ಹೆಸರು, ಭಾವಚಿತ್ರವನ್ನು ಪ್ರಕಟಿಸದಂತೆ ಹಾಗೂಮಕ್ಕಳ ಗುರುತುಗಳನ್ನು ತಿಳಿಸುವ ಯಾವುದೇ ವಿವರಗಳನ್ನು ಪ್ರಕಟಿಸಬಾರದು ಎಂದು ಅವರು ತಿಳಿಸಿದ್ದಾರೆ.

ಮಕ್ಕಳ ನ್ಯಾಯ(ಮಕ್ಕಳ ಪೋಷಣೆ ಮತ್ತು ರಕ್ಷಣೆ) ಕಾಯಿದೆ-2015ರ ಪ್ರಕಾರ ಬಾಲಪರಾಧಿ ಶಬ್ದ ಬಳಕೆ ಇಲ್ಲ;ಬದಲಾಗಿ ಕಾನೂನಿನೊಂದಿಗೆ ಸಂಘರ್ಷದಲ್ಲಿರುವಗ ಮಕ್ಕಳು ಎಂದು ಬಳಸಬೇಕು. ರಿಮ್ಯಾಂಡ್ ಹೋಂ ಶಬ್ದ ಬಳಕೆಗೆ ಬದಲಾಗಿ ವೀಕ್ಷಣಾಲಯ ಬಳಸಬೇಕು ಎಂದು ಅವರು ತಿಳಿಸಿದ್ದಾರೆ.

ಯಾವುದೇ ದಿನಪತ್ರಿಕೆ, ಮ್ಯಾಗಜೀನ್ ಅಥವಾ ದೃಶ್ಯ ಮಾಧ್ಯಮದಲ್ಲಿ ಕಾನೂನು ಕಟ್ಟಳೆಯನ್ನು ಎದುರಿಸುತ್ತಿರುವ ಅಥವಾ ಪೋಷಣೆ, ರಕ್ಷಣೆ, ಹಾಗೂ ಸೇವೆಯ ಅಗತ್ಯವಿರುವ ಮಗುವಿನ ವಿಚಾರಣೆಗೆ ಸಂಬಂಧಿಸಿದ ವರದಿಯಲ್ಲಿ ಮಗುವಿನ ಯಾವುದೇ ಗುರುತು ಬಹಿರಂಗ ಪಡಿಸುವಂತಿಲ್ಲ. ಹಾಗೂ ಮಗುವಿನ ಭಾವಚಿತ್ರಗಳನ್ನು ಪ್ರಕಟಿಸುವಂತಿಲ್ಲ. ಈ ಸೆಕ್ಷನ್‍ನನ್ನು ಉಲ್ಲಂಘಿಸುವ ಯಾವುದೇ ವ್ಯಕ್ತಿಗೆ 6 ತಿಂಗಳವರೆಗೆ ಶಿಕ್ಷೆ ಮತ್ತು 2 ಲಕ್ಷದವರೆಗೆ ದಂಡ ವಿಧಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.


Spread the love