ಮಚ್ಚೂರು ಕ್ರಾಸ್ ಬಳಿ ಎನ್ಎಚ್–169 ರಸ್ತೆ ದುರಸ್ತಿ: 30 ದಿನ ವಾಹನ ಸಂಚಾರಕ್ಕೆ ಬದಲಿ ಮಾರ್ಗ
ಮಂಗಳೂರು: ಮಂಗಳೂರು ತಾಲೂಕಿನ ಬಜಪೆ ಎಡಪದವಿನ ಮಚ್ಚೂರು ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ–169ರಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವತಿಯಿಂದ ರಸ್ತೆ ದುರಸ್ತಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಮಂಗಳೂರು–ಮೂಡಬಿದ್ರೆ ಹಾಗೂ ಮೂಡಬಿದ್ರೆ–ಮಂಗಳೂರು ನಡುವಿನ ಹಳೆಯ ರಸ್ತೆಯಲ್ಲಿ ಘನ ವಾಹನಗಳ ಓಡಾಟದಿಂದ ಬಿರುಕು ಬಿಟ್ಟು, ಕೆಲವೆಡೆ ರಸ್ತೆ ಕುಸಿತ ಪ್ರಾರಂಭವಾಗಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮಾಹಿತಿ ಪ್ರಕಾರ, ಫೆ.12ರಿಂದ ಮಾ.13ರವರೆಗೆ (30 ದಿನಗಳ ಕಾಲ) ರಸ್ತೆ ದುರಸ್ತಿ ಕಾಮಗಾರಿ ನಡೆಯಲಿದ್ದು, ಈ ಅವಧಿಯಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ವಾಹನ ಸಂಚಾರಕ್ಕೆ ಬದಲಿ ಮಾರ್ಗಗಳನ್ನು ವ್ಯವಸ್ಥೆ ಮಾಡಲಾಗಿದೆ.
ಬದಲಿ ಮಾರ್ಗಗಳ ವಿವರ:
1️⃣ ಲಾರಿಗಳ ಸಂಚಾರ:
ಮೂಡಬಿದ್ರೆ ಕಡೆಯಿಂದ ಮಂಗಳೂರು ಕಡೆಗೆ ಬರುವ ಲಾರಿಗಳು ವಿದ್ಯಾಗಿರಿ ಮುಲ್ಕಿ ಕ್ರಾಸ್ನಲ್ಲಿ ಬಲಕ್ಕೆ ತಿರುಗಿ ಕಿನ್ನಿಗೋಳಿ ರಸ್ತೆ ಮೂಲಕ ಪಕ್ಷಿಕೆರೆ ಕ್ರಾಸ್ನಲ್ಲಿ ಬಲಕ್ಕೆ ತಿರುಗಿ ಮುಲ್ಕಿ ಜಂಕ್ಷನ್–ಸುರತ್ಕಲ್ ಮೂಲಕ ಮಂಗಳೂರು ಕಡೆಗೆ ಸಂಚರಿಸಬೇಕು.
ಮಂಗಳೂರು ಕಡೆಯಿಂದ ಮೂಡಬಿದ್ರೆ ಕಡೆಗೆ ಸಂಚರಿಸುವ ಲಾರಿಗಳು ಇದೇ ಮಾರ್ಗ ಬಳಸಬೇಕು.
2️⃣ ಇತರ ಲಘು ವಾಹನಗಳು:
ಮೂಡಬಿದ್ರೆ ಕಡೆಯಿಂದ ಮಂಗಳೂರು ಕಡೆಗೆ ಸಂಚರಿಸುವ ಲಘು ವಾಹನಗಳು ವಿದ್ಯಾಗಿರಿ ಮುಲ್ಕಿ ಕ್ರಾಸ್ನಲ್ಲಿ ಬಲಕ್ಕೆ ತಿರುಗಿ ಕಿನ್ನಿಗೋಳಿ ರಸ್ತೆ ಮೂಲಕ ಮೂರುಕಾವೇರಿ–ಕಟೀಲು–ಪೆರ್ಮುದೆ–ಬಜಪೆ ಮಾರ್ಗವಾಗಿ ಅಥವಾ ಪಕ್ಷಿಕೆರೆ ಕ್ರಾಸ್ನಲ್ಲಿ ಎಡಕ್ಕೆ ತಿರುಗಿ ಹಳೆಯಂಗಡಿ–ಸುರತ್ಕಲ್ ಮೂಲಕ ಮಂಗಳೂರು ಕಡೆಗೆ ಸಂಚರಿಸಬೇಕು.
ಮಂಗಳೂರು ಕಡೆಯಿಂದ ಮೂಡಬಿದ್ರೆ ಕಡೆಗೆ ಸಂಚರಿಸುವ ಲಘು ವಾಹನಗಳು ಕೂಡ ಇದೇ ಮಾರ್ಗವನ್ನು ಅನುಸರಿಸಬೇಕು.
3️⃣ ಸಾರ್ವಜನಿಕ ರೂಟ್ ಬಸ್ಸುಗಳು ಮತ್ತು ಸ್ಥಳೀಯ ಲಘು ವಾಹನಗಳು (ಮೂಡಬಿದ್ರೆ → ಮಂಗಳೂರು):
ದಡ್ಡಿ ಕ್ರಾಸ್ ಬಳಿ ಬಲಕ್ಕೆ ತಿರುಗಿ ಪುಮಾರ್ ಪದವು ಕ್ರಾಸ್–ಮಂಜನ ಕಟ್ಟೆ ಕ್ರಾಸ್–ಅರ್ಜುನಕೋಡಿ–ಈಶ್ವರಕಟ್ಟೆ ಕ್ರಾಸ್–ಮುಚ್ಚೂರು ಕ್ರಾಸ್ ಬಳಿ ಬಲಕ್ಕೆ ತಿರುಗಿ ಕೈಕಂಬ–ಗುರುಪುರ ಮೂಲಕ ಮಂಗಳೂರು ಕಡೆಗೆ ಸಂಚರಿಸಬೇಕು.
4️⃣ ಸಾರ್ವಜನಿಕ ರೂಟ್ ಬಸ್ಸುಗಳು ಮತ್ತು ಸ್ಥಳೀಯ ಲಘು ವಾಹನಗಳು (ಮಂಗಳೂರು → ಮೂಡಬಿದ್ರೆ):
ಗುರುಪುರ–ಕೈಕಂಬ ಮೂಲಕ ಗಂಜಿಮಠದಿಂದ ಮುಚ್ಚೂರು ಕ್ರಾಸ್ ಬಳಿ ಎಡಕ್ಕೆ ತಿರುಗಿ ಈಶ್ವರಕಟ್ಟೆ ಕ್ರಾಸ್–ಅರ್ಜುನಕೋಡಿ–ಮಂಜನ ಕಟ್ಟೆ ಕ್ರಾಸ್–ಪುಮಾರ್ ಪದವು ಕ್ರಾಸ್–ದಡ್ಡಿ ಕ್ರಾಸ್ ಮೂಲಕ ಮೂಡಬಿದ್ರೆ ಕಡೆಗೆ ಸಂಚರಿಸಬೇಕು.
5️⃣ ಮಂಗಳೂರು–ಮೂಡಬಿದ್ರೆ–ಕಾರ್ಕಳ ಕಡೆಗೆ ಸಂಚರಿಸುವ ಲಾರಿಗಳು:
ಎಲ್ಲಾ ಲಾರಿಗಳು ರಾಷ್ಟ್ರೀಯ ಹೆದ್ದಾರಿ–66 ಮೂಲಕ ಸುರತ್ಕಲ್–ಮುಲ್ಕಿ–ಪಡುಬಿದ್ರೆ ಮಾರ್ಗವಾಗಿ ಕಾರ್ಕಳ ಕಡೆಗೆ ಸಂಚರಿಸಬೇಕು.
ರಸ್ತೆ ದುರಸ್ತಿ ಹಾಗೂ ಮಾರ್ಗ ಬದಲಾವಣೆ ಅವಧಿಯಲ್ಲಿ ವಾಹನ ಸಂಚಾರಕ್ಕೆ ಕೆಲವೊಂದು ಅಡಚಣೆಗಳು ಉಂಟಾಗುವ ಸಾಧ್ಯತೆ ಇರುವುದರಿಂದ, ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವಂತೆ ಮನವಿ ಮಾಡಲಾಗಿದೆ.
