
ಮಡಿಕೇರಿಯಲ್ಲಿ ನಾಪತ್ತೆಯಾಗಿದ್ದ ಇಬ್ಬರು ವಿದ್ಯಾರ್ಥಿನಿಯರು ಮಲ್ಪೆಯಲ್ಲಿ ನೀರುಪಾಲು, ಓರ್ವಳ ರಕ್ಷಣೆ
ಉಡುಪಿ: ಮಡಿಕೇರಿಯಿಂದ ನಾಪತ್ತೆಯಾಗಿದ್ದ ಇಬ್ಬರು ಬಾಲಕಿಯರು ಮಲ್ಪೆ ಸಮುದ್ರ ತೀರದಲ್ಲಿ ಶನಿವಾರ ತಡರಾತ್ರಿ ನೀರುಪಾಲಾದ ಘಟನೆ ನಡೆದಿದ್ದು ಅವರಲ್ಲಿ ಒಬ್ಬಾಕೆ ಮೃತಪಟ್ಟು ಇನ್ನೊಬ್ಬಾಕೆಯನ್ನು ರಕ್ಷಿಸಲಾಗಿದೆ.
ಮೃತ ಬಾಲಕಿಯನ್ನು ಮಾನ್ಯ ಎಂದು ಗುರುತಿಸಲಾಗಿದ್ದು, ಇನ್ನೋರ್ವ ಬಾಲಕಿ ಯಶಸ್ವಿನಿ ಎಂಬಾಕೆಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾಳೆ.
ಪ್ರಾಥಮಿಕ ಮಾಹಿತಿಗಳ ಪ್ರಕಾರ ಮಾನ್ಯ ಮತ್ತು ಯಶಸ್ವಿನಿ ಮಡಿಕೇರಿಯ ಖಾಸಗಿ ಪಿಯು ಕಾಲೇಜಿನಲ್ಲಿ ಓದುತ್ತಿದ್ದು ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದರು ಎನ್ನಲಾಗಿದೆ. ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೇ ಆರಂಭಗೊಂಡಿತ್ತು.
ಶನಿವಾರ ತಡರಾತ್ರಿ ಮಲ್ಪೆ ತೀರದಲ್ಲಿ ಇಬ್ಬರು ಬಾಲಕಿಯರು ನೀರಿಗೆ ಬಿದ್ದಿದ್ದಾರೆ ಎಂಬ ಮಾಹಿತಿ ತಿಳಿದು ಮುಳುಗು ತಜ್ಞ ಈಶ್ವರ್ ಮಲ್ಪೆ ಸ್ಥಳಕ್ಕೆ ಧಾವಿಸಿ ಇಬ್ಬರನ್ನು ನೀರಿನಿಂದ ಮೇಲಕ್ಕೆತ್ತಿದ್ದು ಇದರಲ್ಲಿ ಮಾನ್ಯ ಸ್ಥಳದಲ್ಲೇ ಮೃತಪಟ್ಟಿದ್ದು ಯಶಸ್ವಿನಿ ಎಂಬಾಕೆಯನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.