ಮಡಿಕೇರಿಯಲ್ಲಿ ಪವಿತ್ರ ಮೃತ್ತಿಕೆ(ಮಣ್ಣು) ಸಂಗ್ರಹಣಾ ಕಾರ್ಯಕ್ಕೆ ಚಾಲನೆ

Spread the love

ಮಡಿಕೇರಿಯಲ್ಲಿ ಪವಿತ್ರ ಮೃತ್ತಿಕೆ(ಮಣ್ಣು) ಸಂಗ್ರಹಣಾ ಕಾರ್ಯಕ್ಕೆ ಚಾಲನೆ

ಮಡಿಕೇರಿ: ನಾಡಪ್ರಭು, ಆದರ್ಶ ಆಡಳಿತಗಾರ ಕೆಂಪೇಗೌಡರ 108 ಅಡಿ ಕಂಚಿನ ಪ್ರತಿಮೆ ಉದ್ಘಾಟನೆ ಸಂಬಂಧ ಪವಿತ್ರ ಮೃತ್ತಿಕೆ(ಮಣ್ಣು) ಸಂಗ್ರಹಣಾ ಕಾರ್ಯಕ್ಕೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಸಿ.ನಾಗೇಶ್, ಶಾಸಕರಾದ ಕೆ.ಜಿ.ಬೋಪಯ್ಯ, ಎಂ.ಪಿ.ಅಪ್ಪಚ್ಚುರಂಜನ್ ಅವರು ನಗರದ ಜಿಲ್ಲಾಡಳಿತ ಭವನ ಆವರಣದಲ್ಲಿ ಗುರುವಾರ ಚಾಲನೆ ನೀಡಿದರು.

ನಗರದ ಓಂಕಾರೇಶ್ವರ ದೇವಾಲಯ, ಕೋಟೆ ಹಾಗೂ ಗದ್ದಿಗೆಯಲ್ಲಿನ ಪವಿತ್ರ ಮೃತ್ತಿಕೆಯನ್ನು ನಾಡಪ್ರಭು ಕೆಂಪೇಗೌಡರ ರಥಯಾತ್ರೆ ವಾಹನದಲ್ಲಿ ಸಂಗ್ರಹಿಸಿಟ್ಟರು. ಬಳಿಕ ಪವಿತ್ರ ಮೃತ್ತಿಕೆ ಸಂಗ್ರಹಣೆ ವಾಹನವು ಜಿಲ್ಲೆಯ ವಿವಿಧ ಭಾಗಗಳಲ್ಲಿ ಸಂಚರಿಸಲಿದ್ದು, ಈ ವಾಹನಕ್ಕೆ ಹಸಿರು ನಿಶಾನೆ ತೋರಿಸಿದರು.

ಬಳಿಕ ಮಾತನಾಡಿದ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಸಿ.ನಾಗೇಶ್ ಅವರು ನವೆಂಬರ್ 11 ರಂದು ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಆವರಣದಲ್ಲಿ ನಿರ್ಮಿಸಿರುವ ೧೦೮ ಅಡಿ ಎತ್ತರದ ಪ್ರತಿಮೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಉದ್ಘಾಟಿಸಲಿದ್ದಾರೆ. ಆ ನಿಟ್ಟಿನಲ್ಲಿ ರಾಜ್ಯಾದ್ಯಂತ ಪವಿತ್ರ ಮಣ್ಣು ಸಂಗ್ರಹಣಾ ಕಾರ್ಯಕ್ಕೆ ಚಾಲನೆ ನೀಡಲಾಗಿದೆ ಎಂದು ಸಚಿವರು ಹೇಳಿದರು.

ಭಾರತದ ಸ್ವಾತಂತ್ರ್ಯ ಪೂರ್ವ ಸಂದರ್ಭದಲ್ಲಿ ರಾಷ್ಟ್ರ ಅಭಿವೃದ್ಧಿಗೆ ರಾಜ ಮಹಾರಾಜರ ಕೊಡುಗೆ ಅಪಾರವಾಗಿದೆ. ಆ ಸಾಲಿಗೆ ನಾಡಪ್ರಭು, ಆದರ್ಶ ಆಡಳಿತಗಾರ ಕೆಂಪೇಗೌಡರು ಒಬ್ಬರು, ಕೆಂಪೇಗೌಡರ ಆದರ್ಶ ಆಡಳಿತ ಪ್ರತಿಯೊಬ್ಬರ ಮನೆಗೆ ತಲುಪಬೇಕು. ಆ ನಿಟ್ಟಿನಲ್ಲಿ ಪವಿತ್ರ ಮೃತ್ತಿಕೆ ಸಂಗ್ರಹಿಸಲಾಗುತ್ತಿದೆ. ಶಿಕ್ಷಣ, ಆರೋಗ್ಯ, ಕೈಗಾರಿಕೆ, ನೀರಾವರಿ, ಹೀಗೆ ಹಲವು ಕ್ಷೇತ್ರಗಳಿಗೆ ಮೈಸೂರು ಮಹಾರಾಜರು ಸೇರಿದಂತೆ ನಾಡಪ್ರಭು ಕೆಂಪೇಗೌಡರು ಬೆಂಗಳೂರು ಪ್ರಾಂತ್ಯದಲ್ಲಿ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ರಾಷ್ಟ್ರದ ಪ್ರಥಮ ಗೃಹ ಸಚಿವರು ಹಾಗೂ ಉಕ್ಕಿನ ಮನುಷ್ಯ ಎಂದೇ ಖ್ಯಾತರಾದ ಸರ್ಧಾರ್ ವಲ್ಲಭಬಾಯ್ ಪಟೇಲ್ ಪ್ರತಿಮೆಯಂತೆ, ನಾಡಪ್ರಭು ಕೆಂಪೇಗೌಡರ ಪ್ರತಿಮೆಯನ್ನು ಸರ್ಕಾರದಿಂದ ನಿರ್ಮಿಸಲಾಗಿದ್ದು, ರಥ ಯಾತ್ರೆ ಮೂಲಕ ಪವಿತ್ರ ಮೃತ್ತಿಕೆಯನ್ನು ಸಂಗ್ರಹಿಸಲಾಗುತ್ತದೆ. ಜಿಲ್ಲೆಯಲ್ಲಿಯೂ ಚಾಲನೆ ನೀಡಲಾಗಿದೆ ಎಂದರು.

ಆದರ್ಶ ಆಡಳಿತಗಾರ ಕೆಂಪೇಗೌಡರ ರಥಯಾತ್ರೆ ಸಂದರ್ಭದಲ್ಲಿ ಮಡಿಕೇರಿ ನಗರ ಅಂಗನವಾಡಿ ಕೇಂದ್ರದ ಕಾರ್ಯಕರ್ತೆಯರು ಪೂರ್ಣಕುಂಭದೊಂದಿಗೆ ಸ್ವಾಗತಿಸಿದರು. ಚಾಲನೆ ಬಳಿಕ ನಗರದ ಜಿಲ್ಲಾಡಳಿತ ಭವನದಿಂದ ಮಂಗೇರಿರ ಮುತ್ತಣ್ಣ ವೃತ್ತ, ಜನರಲ್ ತಿಮ್ಮಯ್ಯ ವೃತ್ತದ ಮಾರ್ಗ ಜಿಲ್ಲೆಯ ವಿವಿಧ ಗ್ರಾಮಗಳಿಗೆ ಕಳುಹಿಸಿಕೊಡಲಾಯಿತು.


Spread the love