ಮಡಿಕೇರಿಯ ಪ್ರಮುಖ ಆಕರ್ಷಣೆ ರಾಜಾಸೀಟ್

Spread the love

ಮಡಿಕೇರಿಯ ಪ್ರಮುಖ ಆಕರ್ಷಣೆ ರಾಜಾಸೀಟ್

ದೂರದಲ್ಲಿ ಮುಗಿಲೆತ್ತರಕ್ಕೆ ಬೆಳೆದು ಪೈಪೋಟಿ ನೀಡಲೇನೋ ಎಂಬಂತೆ ನಿಂತಿರುವ ಗಿರಿಶಿಖರಗಳು… ಅವುಗಳ ನಡುವಿನ ಇಳಿಜಾರಿನಲ್ಲಿ ಬೆಳೆದು ನಿಂತಹೆಮ್ಮರಗಳು… ಕಾಫಿ, ಏಲಕ್ಕಿ ತೋಟಗಳ ನಡುವಿನ ಗದ್ದೆ ಬಯಲುಗಳು… ಕೆಳಗಿನ ಕಂದಕದ ಅಂಕುಡೊಂಕಾದ ರಸ್ತೆಯಲ್ಲಿ ಸಾಗಿ ಬರುವ ವಾಹನಗಳು… ಪಕ್ಕದ ಗುಡ್ಡದಲ್ಲಿ ಒತ್ತೊತ್ತಾಗಿ ಎದ್ದು ನಿಂತ ಜನವಸತಿಗಳು… ಇದು ಮಡಿಕೇರಿಯ ರಾಜಾಸೀಟ್ ನಲ್ಲಿ ಕಾಣಸಿಗುವ ಸುಂದರ ದೃಶ್ಯಗಳು.

ಇವತ್ತು ಸುಂದರ ಉದ್ಯಾನವನವಾಗಿ ಕಂಗೊಳಿಸುವ ರಾಜಾಸೀಟ್ ಒಂದು ಕಾಲದಲ್ಲಿ ಬ್ರಿಟೀಷರ ಮಸಣವಾಗಿತ್ತು. ಕಾಲಕ್ರಮೇಣ ಇಲ್ಲಿದ್ದ ಬ್ರಿಟೀಷರ ಶವಪೆಟ್ಟಿಗೆಗಳನ್ನು ಬೇರೆಡೆಗೆ ಸ್ಥಳಾಂತರಿಸಿ ಉದ್ಯಾನವನ್ನು ಅಭಿವೃದ್ಧಿಗೊಳಿಸಲಾಯಿತು ಎಂದು ಹೇಳಲಾಗುತ್ತಿದೆ.

ಈ ಉದ್ಯಾನಕ್ಕೆ ರಾಜಾಸೀಟ್ ಎಂಬ ಹೆಸರು ಹೇಗೆ ಬಂತೆಂಬುವುದರ ಬಗ್ಗೆ ಇತಿಹಾಸದ ಪುಟಗಳನ್ನು ತಿರುವಿದರೆ ಒಂದಷ್ಟು ಮಾಹಿತಿ ದೊರೆಯುತ್ತದೆ. ಹಿಂದೆ ಚಿಕ್ಕವೀರರಾಜನ ಕಾಲದಲ್ಲಿ ರಾಜ ಸಂಜೆಯ ಸಮಯದಲ್ಲಿ ಅರಮನೆಯಿಂದ ರಾಣಿಯೊಂದಿಗೆ ವಿಹಾರ ಹೊರಟು ನಗರದಂಚಿಗೆ ಬಂದು ಕುಳಿತು ದಿನನಿತ್ಯ ಸೂರ್ಯಾಸ್ತಮಾನದ ಸುಂದರ ದೃಶ್ಯಗಳನ್ನು ನೋಡುತ್ತಿದ್ದಂತೆ. ರಾಜ ಕುಳಿತು ನೋಡುತ್ತಿದ್ದ ಸ್ಥಳವೇ ಮುಂದೆ ರಾಜಾಸೀಟ್ ಆಯಿತು. ಬ್ರಿಟೀಷರ ಆಡಳಿತಾವಧಿಯಲ್ಲಿ ಇಲ್ಲೊಂದು ಸಿಮೆಂಟ್ ಹಾಗೂ ಹೆಂಚು ಬಳಸಿ ನಾಲ್ಕು ಕಮಾನುಗಳುಳ್ಳ ಭವ್ಯ ಮಂಟಪವನ್ನು ನಿರ್ಮಿಸಲಾಯಿತು. ಈ ಮಂಟಪ ಅಂದಿನಿಂದ ಇಂದಿನವರೆಗೆ ರಾಜಾಸೀಟಿನ ಪ್ರಮುಖ ಆಕರ್ಷಣೆಯಾಗಿದೆ.

ತೋಟಗಾರಿಕಾ ಇಲಾಖೆಯ ಅಧೀನದಲ್ಲಿರುವ ರಾಜಾಸೀಟ್‌ನಲ್ಲಿ ಕಾರಂಜಿ, ಕೃತಕ ಜಲಪಾತಗಳನ್ನು ಕೂಡ ನಿರ್ಮಿಸಿ ಪ್ರವಾಸಿಗರ ವೀಕ್ಷಣೆಗೆ ಅನುವು ಮಾಡಿಕೊಡಲಾಗಿದೆ. ರಾಜಾಸೀಟಿನ ಬಳಿಯಲ್ಲಿಯೇ ಪುಟಾಣಿ ರೈಲು ಕೂಡ ಇದೆ. ರೈಲು ಸಂಪರ್ಕವನ್ನೇ ಕಾಣದ ಕೊಡಗಿಗೆ ಇದೇ ಏಕೈಕ ರೈಲು. ಈ ರೈಲನ್ನು ನೋಡಿ ಇಲ್ಲಿನ ಮಕ್ಕಳು ರೈಲಿನ ಕಲ್ಪನೆ ಮಾಡಿಕೊಳ್ಳುತ್ತಾರೆ. ಕಾವೇರಿ ಪಟ್ಟಣದಿಂದ ಹೊರಡುವ ರೈಲು ಬ್ರಹ್ಮಗಿರಿ ಕಣಿವೆಗಾಗಿ ಸಾಗುತ್ತದೆ. ಈ ರೈಲು ಕೊಡಗಿಗೆ ಬಂದು ಮೂರು ದಶಕಗಳು ಕಳೆದಿವೆ. ಮೊದಲಿಗೆ ಗಾಲ್ಫ್‌ಗ್ರೌಂಡ್ ಬಳಿ ಸ್ಥಾಪನೆ ಮಾಡಲಾಗಿತ್ತಾದರೂ ಮಡಿಕೇರಿ ಪಟ್ಟಣದಿಂದ ಹೊರವಲಯದಲ್ಲಿದ್ದುದರಿಂದ ಅಲ್ಲಿಗೆ ಜನರು ತೆರಳದ ಕಾರಣ ರಾಜಾಸೀಟ್ ಬಳಿಗೆ ಸ್ಥಳಾಂತರಿಸಲಾಗಿದೆ. ಅಲ್ಲಿಂದ ಇಲ್ಲಿಯ ತನಕ ಇದು ರಾಜಾಸೀಟ್‌ನ ಪ್ರಮುಖ ಆಕರ್ಷಣೆಯಾಗಿದೆ. ಇದರ ಉಸ್ತುವಾರಿಯನ್ನು ನಗರಸಭೆಯೇ ನೋಡಿಕೊಳ್ಳುತ್ತಿದೆ.

ನಿಸರ್ಗ ರಮಣೀಯತೆಯನ್ನು ತನ್ನ ಒಡಲಲ್ಲಿ ತುಂಬಿಕೊಂಡಿರುವ ರಾಜಾಸೀಟ್ ನಿಸರ್ಗ ಪ್ರೇಮಿಗಳನ್ನು ಸದಾ ತನ್ನತ್ತ ಸೆಳೆಯುತ್ತದೆ.


Spread the love