ಮಡಿಕೇರಿ ಜ. ತಿಮ್ಮಯ್ಯ ವೃತ್ತದಲ್ಲಿ ಪ್ರತಿಭಟನೆ ಬೇಡ

Spread the love

ಮಡಿಕೇರಿ ಜ. ತಿಮ್ಮಯ್ಯ ವೃತ್ತದಲ್ಲಿ ಪ್ರತಿಭಟನೆ ಬೇಡ

ಮಡಿಕೇರಿ: ನಗರದ ಹೃದಯಭಾಗವಾಗಿರುವ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಪ್ರತಿಭಟನೆ ನಡೆಸಲು ಅವಕಾಶ ನೀಡದಂತೆ ನಗರ ಕಾಂಗ್ರೆಸ್ ಸಮಿತಿಯ ಅಲ್ಪಸಂಖ್ಯಾತರ ಘಟಕ ಜಿಲ್ಲಾಡಳಿತಕ್ಕೆ ನಗರಾಧ್ಯಕ್ಷ ಕೆ.ಜಿ.ಪೀಟರ್ ಅವರ ನೇತೃತ್ವದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ ಅವರ ಮೂಲಕ ಮನವಿ ಸಲ್ಲಿಸಿದೆ.

ವಾರದ ಶುಕ್ರವಾರ ದಿನ ಮಡಿಕೇರಿ ನಗರದಲ್ಲಿ ಪ್ರತಿಭಟನೆ, ಪ್ರತಿಭಟನಾ ಮೆರವಣಿಗೆಗೆ ಅನುಮತಿ ನೀಡದಂತೆ ಮನವಿಯಲ್ಲಿ ತಿಳಿಸಿದ್ದಾರೆ. ದೇಶದ ಹೆಮ್ಮೆಯ ವೀರಸೇನಾನಿ, ಕೊಡಗಿನ ಶಿಸ್ತಿನ ಪುತ್ರ ಜನರಲ್ ಕೆ.ಎಸ್.ತಿಮ್ಮಯ್ಯ ಅವರ ಪ್ರತಿಮೆ ಇರುವ ವೃತ್ತ ಮಡಿಕೇರಿ ನಗರದಲ್ಲಿದೆ. ಇದು ಅತ್ಯಂತ ಗೌರವಯುತ ಪ್ರದೇಶವಾಗಿದೆ, ಆದರೆ ಇತ್ತೀಚಿನ ದಿನಗಳಲ್ಲಿ ಈ ವೃತ್ತದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳಿಂದಾಗಿ ಅಗೌರವದ ವಾತಾವರಣ ಸೃಷ್ಟಿಯಾಗುತ್ತಿದೆ. ಕೊಡಗಿನ ಶಿಸ್ತಿನ ವಾತಾವರಣಕ್ಕೆ ಧಕ್ಕೆಯಾಗುತ್ತಿದೆ. ವೃತ್ತದ ಪಕ್ಕದಲ್ಲೇ ಜಿಲ್ಲಾ ಆಸ್ಪತ್ರೆ ಇದೆ, ಅಲ್ಲದೆ ಮೈಸೂರು, ಮಂಗಳೂರು ಹೆದ್ದಾರಿಯೂ ಹಾದು ಹೋಗುತ್ತದೆ.

ಜನರಲ್ ತಿಮ್ಮಯ್ಯ ವೃತ್ತದಲ್ಲಿ ಪ್ರತಿಭಟನೆ ಅಥವಾ ರಸ್ತೆ ತಡೆ ಪ್ರತಿಭಟನೆ ನಡೆಸುವುದರಿಂದ ಆಸ್ಪತ್ರೆಗೆ ರೋಗಿಗಳನ್ನು ಸಕಾಲದಲ್ಲಿ ಕರೆದೊಯ್ಯಲು ಸಾಧ್ಯವಾಗುತ್ತಿಲ್ಲ. ತುರ್ತು ಚಿಕಿತ್ಸೆಗಾಗಿ ಆಂಬ್ಯುಲೆನ್ಸ್ ನಲ್ಲಿ ಬರುವ ಅಥವಾ ಮೈಸೂರು, ಮಂಗಳೂರು ಆಸ್ಪತ್ರೆಗೆ ತೆರಳುವ ರೋಗಿಗಳು ಗಂಟೆಗಟ್ಟಲೆ ರಸ್ತೆಯಲ್ಲೇ ಬಾಕಿಯಾದ ಉದಾಹರಣೆಗಳಿವೆ. ಅಲ್ಲದೆ ನೂರಾರು ವಾಹನಗಳು ಕಿಲೋಮೀಟರ್ ನಷ್ಟು ದೂರ ಸಾಲುಗಟ್ಟಿ ನಿಂತಿರುತ್ತವೆ. ವಿಮಾನ ನಿಲ್ದಾಣಕ್ಕೆ ತೆರಳುವವರಿಗೆ ಸಮಯಕ್ಕೆ ಸರಿಯಾಗಿ ತಲುಪಲು ಸಾಧ್ಯವಾಗುತ್ತಿಲ್ಲ. ಅಗತ್ಯ ವಸ್ತುಗಳನ್ನು ಸಕಾಲದಲ್ಲಿ ತಲುಪಿಸಲು ಲಾರಿ ಚಾಲಕರುಗಳಿಗೆ ಅಸಾಧ್ಯವಾಗಿದೆ. ಬಸ್ ಪ್ರಯಾಣಿಕರಂತು ಗಂಟೆಗಟ್ಟಲೆ ಬಸ್ ನಲ್ಲೇ ಉಳಿಯುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಸರ್ಕಾರಿ ನೌಕರರಿಗೆ, ಆಸ್ಪತ್ರೆ ಸಿಬ್ಬಂದಿಗಳಿಗೆ ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗಲು ಸಾಧ್ಯವಾಗುತ್ತಿಲ್ಲ.

ಜನರಲ್ ತಿಮ್ಮಯ್ಯ ವೃತ್ತದಲ್ಲಿ ಪ್ರತಿಭಟನೆ ನಡೆಸುವವರು ಮತ್ತು ಇತರರು ಮುಖಾಮುಖಿಯಾಗುವುದರಿಂದ ಘರ್ಷಣೆಗಳು ನಡೆಯುತ್ತಿದೆ, ಅಲ್ಲದೆ ಸಾರ್ವಜನಿಕ ಶಾಂತಿಭಂಗವಾಗುತ್ತಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿಗಳ ಗಮನ ಸೆಳೆದಿದ್ದಾರೆ.


Spread the love

Leave a Reply

Please enter your comment!
Please enter your name here