ಮಡಿಕೇರಿ ಮಹಿಳಾ ದಸರಾದಲ್ಲಿ ಸಂಭ್ರಮಿಸಿದ ಮಹಿಳೆಯರು

Spread the love

ಮಡಿಕೇರಿ ಮಹಿಳಾ ದಸರಾದಲ್ಲಿ ಸಂಭ್ರಮಿಸಿದ ಮಹಿಳೆಯರು

ಮಡಿಕೇರಿ : ಬಲೂನ್ ಶೂಟ್, ಮದರಂಗಿ ಸ್ಪರ್ಧೆ, ಫ್ಯಾನ್ಸಿ ಡ್ರೆಸ್, ಮಹಿಳೆಯರು ತಯಾರಿಸಿದ ಗೃಹ ಬಳಕೆ ವಸ್ತುಗಳು ಹಾಗೂ ಆಹಾರ ಪದಾರ್ಥಗಳ ಪ್ರದರ್ಶನ ಮತ್ತು ಮಾರಾಟ, ಮಹಿಳಾ ಸಂತೆ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರಿಗೆ ಸನ್ಮಾನ.. ಇದು ಮಡಿಕೇರಿ ದಸರಾದಲ್ಲಿ ನಡೆದ ಮಹಿಳಾ ದಸರಾದಲ್ಲಿ ಕಂಡು ಬಂದ ದೃಶ್ಯಗಳು.

ನಗರದ ಗಾಂಧಿ ಮೈದಾನದ ಕಲಾಸಂಭ್ರಮ ವೇದಿಕೆಯಲ್ಲಿ ಶುಕ್ರವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ಮಡಿಕೇರಿ ದಸರಾ ಜನೋತ್ಸವ ಕಾರ್ಯಕ್ರಮದ ಪ್ರಯುಕ್ತ ನಡೆದ ಮಹಿಳಾ ದಸರಾ ಸಭಾ ಕಾರ್ಯಕ್ರಮಕ್ಕೆ ಗಣ್ಯರು ಹಾಗೂ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರ ಧರ್ಮಪತ್ನಿ ರೂಪಶ್ರೀ ಸತೀಶ್ ಅವರು ಚಾಲನೆ ನೀಡಿದ್ದು ವಿಶೇಷವಾಗಿತ್ತು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯೆ ವೀಣಾ ಅಚ್ಚಯ್ಯ ಅವರು ಮಾತನಾಡಿ ವರ್ಷಗಳ ಹಿಂದೆ ಜಿಲ್ಲೆಯ ಮೂರು ಉನ್ನತ ಸ್ಥಾನಗಳನ್ನು ಮಹಿಳೆಯರು ಅಲಂಕರಿಸಿದ್ದರು. ಇದು ಮಹಿಳೆಯರಿಗೆ ಹೆಮ್ಮೆಯ ವಿಷಯವಾಗಿದೆ. ಮಹಿಳೆಯರು ಪ್ರತಿಯೊಂದು ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಾಧನೆ ಮಾಡಿದ್ದಾರೆ ಎಂದು ಹೇಳಿದರು.

ಜಿಲ್ಲಾಧಿಕಾರಿ ಅವರ ಧರ್ಮಪತ್ನಿ ರೂಪಶ್ರೀ ಸತೀಶ್ ಅವರು ಮಾತನಾಡಿ ಮೈಸೂರು ಮತ್ತು ಮಡಿಕೇರಿ ದಸರಾ ಒಂದೊಂದು ವಿಶೇಷತೆಗಳಿಂದ ಕೂಡಿದೆ. ಮಡಿಕೇರಿ ದಸರಾ ಪ್ರತಿಯೊಬ್ಬರನ್ನು ಆಕರ್ಷಿಸುತ್ತಿದೆ ಎಂದರು.

ನಗರಸಭಾ ಮಾಜಿ ಸದಸ್ಯರಾದ ಮೋಂತಿ ಗಣೇಶ್ ಅವರು ಮಾತನಾಡಿ ಮಹಿಳೆಯರು ತಮ್ಮ ಮಕ್ಕಳಿಗೆ ದೇಶಭಕ್ತಿ ಹಾಗೂ ಸಮಾಜದ ಒಳಿತಿಗೆ ಸಹಕಾರಿಯಾಗುವಂತಹ ಒಳ್ಳೆಯ ಗುಣಗಳನ್ನು ಬೆಳೆಸುವಂತಾಗಬೇಕು ಎಂದರು.

ಜಿಲ್ಲೆಯೂ ಪ್ರವಾಸೋದ್ಯಮಕ್ಕೆ ಹೆಸರಾದ ಜಿಲ್ಲೆಯಾಗಿದೆ. ಆ ನಿಟ್ಟಿನಲ್ಲಿ ಜಿಲ್ಲೆಯ ಪರಿಸರವನ್ನು ಕಾಪಾಡುವುದು ಎಲ್ಲರ ಆದ್ಯ ಕರ್ತವ್ಯವಾಗಿದೆ. ಮಹಿಳೆಯರು ಪರಿಸರ ಶುಚಿತ್ವದ ಬಗ್ಗೆ ಹೆಚ್ಚಿನ ಒತ್ತು ನೀಡಿ ಪರಿಸರ ಸಂರಕ್ಷಣೆಯಲ್ಲಿ ಕೈಜೋಡಿಸುವಂತಾಗಬೇಕು ಎಂದು ಮನವಿ ಮಾಡಿದರು.

ನಗರಸಭೆ ನಿವೃತ್ತ ಪೌರಾಯುಕ್ತರಾದ ಬಿ.ಬಿ.ಪುಷ್ಪವತಿ ಅವರು ಮಾತನಾಡಿ ನವರಾತ್ರಿ ಉತ್ಸವ ಮಹಿಳಾ ಪ್ರಧಾನ ಆಚರಣೆಯಾಗಿದೆ. ಈ ಆಚರಣೆಯಲ್ಲಿ ಮಹಿಳೆಯರಿಗೆ ಹೆಚ್ಚಿನ ಜವಾಬ್ದಾರಿ ಇರುತ್ತದೆ ಎಂದರು.

ಕೊಡವ ಸಮಾಜದ ನಿರ್ದೇಶಕರಾದ ಕನ್ನಂಡ ಕವಿತಾ ಅವರು ಮಾತನಾಡಿ ಮೈಸೂರು ದಸರಾ ವಿಶ್ವವಿಖ್ಯಾತ ದಸರಾ ಉತ್ಸವವಾಗಿದೆ. ಅದೇ ರೀತಿಯಾಗಿ ಮಡಿಕೇರಿ ದಸರಾವೂ ಕೂಡ ದೇಶದಲ್ಲಿಯೇ ಹೆಸರುವಾಸಿಯಾಗಿದೆ. ಇಲ್ಲಿನ ಶಕ್ತಿ ದೇವತೆಗಳ ಆರಾಧನೆಯೊಂದಿಗೆ ನಡೆಯುವ ಕರಗೋತ್ಸವವು ಎಲ್ಲರ ಆಕರ್ಷಣೀಯವಾಗಿದೆ ಎಂದರು.

ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಸುರಯ್ಯ ಅಬ್ರಾರ್ ಅವರು ಮಾತನಾಡಿ ಜಿಲ್ಲೆಯಲ್ಲಿ ಮಹಿಳೆಯರು ಪ್ರತಿಯೊಂದು ಕ್ಷೇತ್ರದಲ್ಲಿ ತೊಡಗಿಕೊಳ್ಳಲು ಬಹಳಷ್ಟು ಪ್ರೋತ್ಸಾಹ ನೀಡಲಾಗುತ್ತಿದೆ ಇದು ಹೆಮ್ಮೆಯ ವಿಷಯ ಎಂದು ಹೇಳಿದರು.


Spread the love