ಮಣಿಪಾಲ: ಎಸ್‌ಸಿಡಿಸಿಸಿ ಬ್ಯಾಂಕಿನ ನೂತನ ಎಟಿಎಂ ಉದ್ಘಾಟನೆ

Spread the love

ಮಣಿಪಾಲ: ಎಸ್‌ಸಿಡಿಸಿಸಿ ಬ್ಯಾಂಕಿನ ನೂತನ ಎಟಿಎಂ ಉದ್ಘಾಟನೆ

ಮಣಿಪಾಲ: ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಮಣಿಪಾಲ ಶಾಖಾ ಕಟ್ಟಡದಲ್ಲಿ ಅನುಷ್ಠಾನಗೊಳಿಸಿದ ಬ್ಯಾಂಕಿನ ನೂತನ ಏಳನೇ ಎಟಿಎಂ ಭಾನುವಾರ ಉದ್ಘಾಟನೆಗೊಂಡಿತು.

ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಡಾ. ಎಂ ಎನ್ ರಾಜೇಂದ್ರ ಕುಮಾರ್ ನೂತನ ಎಟಿಎಂ ಕೇಂದ್ರವನ್ನು ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು ದಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಇತರ ಖಾಸಗಿ ವಾಣಿಜ್ಯ ಬ್ಯಾಂಕ್ ಗಳಿಗೆ ಪೈಪೋಟಿ ನೀಡುವಲ್ಲಿ ಯಶಸ್ವಿಯಾಗಿದ್ದು ಅವುಗಳಿಗಿಂತ ಹೆಚ್ಚಿನ ಬಡ್ಡಿ 8%ವನ್ನು ಠೇವಣಿದಾರರಿಗೆ ನೀಡಲಾಗುತ್ತಿದೆ. ಮಾಜಿ ಯೋಧರು, ಯೋಧರು ಮತ್ತು ಮಹಿಳೆಯರಿಗೆ 8.5% ಬಡ್ಡಿದರ ನೀಡುತ್ತಿದೆ. ಬ್ಯಾಂಕಿನ ನವೋದಯ ಸದಸ್ಯೆಯರಿಗೆ ಸ್ವಾವಲಂಬಿಗಳಾಗಿ ಬದುಕಲು ಸಹಕಾರಿಯಾಗುವಂತೆ ಸಾಲ ಸೌಲಭ್ಯವನ್ನು ನೀಡಿಕೊಂಡು ಬಂದಿರುತ್ತದೆ. ವೈದ್ಯಕೀಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಪ್ರಗತಿಯಾಗುತ್ತಿರುವ ಮಣಿಪಾಲದಲ್ಲಿ ಪ್ರಧಾನಿಯವರ ಡಿಜಿಟಲ್ ಇಂಡಿಯಾ ಕಲ್ಪನೆಯಂತೆ ನಗದು ವ್ಯವಹಾರ ಕಡಿಮೆ ಮಾಡುವ ನಿಟ್ಟಿನಲ್ಲಿ ಹೊಸ ಎಟಿಎಂ ತೆರೆಯಲಾಗಿದ್ದು ಮುಂದಿನ 8 ನೇ ಎಟಿಎಂ ಬೆಳ್ತಂಗಡಿಯಲ್ಲಿ ತೆರೆಯಲಾಗುವುದು ಎಂದರು.

ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಉಡುಪಿ ಉಜ್ವಲ್ ಡೆವಲಪರ್ಸ್‌ನ ಪುರುಷೋತ್ತಮ ಪಿ.ಶೆಟ್ಟಿ, ರೋಟರಿ ಕ್ಲಬ್‌ನ ಜೈವಿಠಲ್, ಬ್ಯಾಂಕಿನ ಉಪಾಧ್ಯಕ್ಷ ವಿನಯ ಕುಮಾರ್ ಸೂರಿಂಜೆ, ನಿರ್ದೇಶಕರುಗಳಾದ ರಾಜು ಪೂಜಾರಿ, ಅಶೋಕ್ ಕುಮಾರ್ ಶೆಟ್ಟಿ, ರಾಜೇಶ್ ರಾವ್ ಇನ್ನಂಜೆ, ಎಂ.ಮಹೇಶ್ ಹೆಗ್ಡೆ, ದ.ಕ. ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕ ಲಕ್ಷ್ಮೀನಾರಾಯಣ ಜಿ.ಎನ್. ಮೊದಲಾದವರು ಉಪಸ್ಥಿತರಿದ್ದರು.

ಬ್ಯಾಂಕಿನ ನಿರ್ದೇಶಕ ಐಕಳಬಾವ ದೇವಿಪ್ರಸಾದ್ ಶೆಟ್ಟಿ ಸ್ವಾಗತಿಸಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ಗೋಪಾಲಕೃಷ್ಣ ಭಟ್ ವಂದಿಸಿದರು.


Spread the love