ಮಣಿಪಾಲ : ಕರ್ಕಶ ಶಬ್ದ ಮಾಡುವ ಸೈಲೆನ್ಸರ್ ಗಳನ್ನು ಕಿತ್ತು ರೋಡ್ ರೋಲರ್ ಮೂಲಕ ಅನುಪಯುಕ್ತಗೊಳಿಸಿದ ಪೊಲೀಸರು

Spread the love

ಮಣಿಪಾಲ : ಕರ್ಕಶ ಶಬ್ದ ಮಾಡುವ ಸೈಲೆನ್ಸರ್ ಗಳನ್ನು ಕಿತ್ತು ರೋಡ್ ರೋಲರ್ ಮೂಲಕ ಅನುಪಯುಕ್ತಗೊಳಿಸಿದ ಪೊಲೀಸರು

ಮಣಿಪಾಲ : ಕರ್ಕಶವಾಗಿ ಶಬ್ದ ವಾಗುವ ಸೈಲೆನ್ಸರ್ ಅಳವಡಿಕೆ ಮಾಡಿದ ದ್ವಿಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳ ಮೇಲೆ ಉಡುಪಿ ಜಿಲ್ಲೆಯ ಪೊಲೀಸರು ಸಮರ ಸಾರಿದ್ದು, ಬುಧವಾರ ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕರ್ಕಶ ಶಬ್ದ ಮಾಡುವ 51 ಸೈಲೆನ್ಸರ್ ಗಳನ್ನು ಬಿಚ್ಚಿ ರೋಡ್ ರೋಲರ್ ಮೂಲಕ ಅನುಪಯುಕ್ತಗೊಳಿಸಿದ್ದಾರೆ.

ಈ ಕುರಿತು ಮಾಧ್ಯಮಗಳಿಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್ ವಿಷ್ಣುವರ್ಧನ್ ಅವರು ಪ್ರತಿ ವರ್ಷದಂತೆ ಈ ವರ್ಷವೂ ಜನವರಿ 18 ರಿಂದ ಫೆಬ್ರವರಿ 17 ರ ವರೆಗೆ ರಸ್ತೆ ಸುರಕ್ಷತಾ ಸಪ್ತಾಹ ಅಡಿಯಲ್ಲಿ “ಸಡಕ್ ಸುರಕ್ಷಾ – ಜೀವನ್ ಸುರಕ್ಷಾ” ಎಂಬ ಧ್ಯೇಯ ವಾಕ್ಯದೊಂದಿಗೆ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸವನ್ನು ಮಣಿಪಾಲ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬಂದಿಯವರು ಯಶಸ್ವಿಯಾಗಿ ಜಾರಿಗೆಗೊಳಿಸಿದ್ದಾರೆ. ಶಬ್ದ ಮಾಲಿನ್ಯ ಮಾಡುವ ದ್ವಿಚಕ್ರ ಮತ್ತು ನಾಲ್ಕು ಚಕ್ರ ವಾಹನಗಳ ವಿರುದ್ದ ಪ್ರಕರಣಗಳನ್ನು ದಾಖಲಿಸಿರುತ್ತಾರೆ.

ಜನವರಿ 1 ರಿಂದ 31 ರವರೆಗೆ ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 50 ದ್ವಿಚಕ್ರ ವಾಹನದ ಸವಾರರು ಹಾಗೂ ಒರ್ವ ನಾಲ್ಕು ಚಕ್ರದ ವಾಹನ ಸವಾರನ ವಿರುದ್ದ ಪ್ರಕರಣ ದಾಖಲಿಸಿ ರೂ 25,500 ದಂಡ ವಸೂಲಿ ಮಾಡಿ ಸೈಲೆನ್ಸರ್ ಗಳನ್ನು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಸೈಲೆನ್ಸರ್ ಗಳನ್ನು ವಾಹನ ಸವಾರರಿಗೆ ವಾಪಾಸ್ ನೀಡಿದ್ದಲ್ಲಿ ಮರು ಬಳಕೆ ಮಾಡುವ ಸಾಧ್ಯತೆ ಇರುವುದರಿಂದ ಪ್ರಾಯೋಗಿಕವಾಗಿ ಮಣಿಪಾಲ ಪೊಲೀಸ್ ಠಾಣೆಯಲ್ಲಿ ವಶಪಡಿಸಿಕೊಂಡ 51 ಸೈಲೆನ್ಸರ್ ಗಳನ್ನು ರೋಡ್ ರೋಲರ್ ನಿಂದ ಅನುಪಯುಕ್ತಗೊಳಿಸಾಗಿದ್ದು ಮುಂದಿನ ದಿನಗಳಲ್ಲಿ ಉಡುಪಿ ಜಿಲ್ಲೆಯಾದ್ಯಂತ ಈ ರೀತಿಯಾಗಿ ಕರ್ಕಶ ಶಬ್ದ ಮಾಡುವ ಸೈಲೆನ್ಸರ್ ಗಳನ್ನು ವಶಪಡಿಸಿಕೊಳ್ಳುವ ಪ್ರಕ್ರಿಯೆ ಎಲ್ಲಾ ಠಾಣೆಯಲ್ಲಿ ಮಾಡಲಾಗುವುದು ಎಂದರು.

ಸಾಮಾನ್ಯವಾಗಿ ಮೋಟಾರು ವಾಹನಗಳ ನಿಯಮಗಳ ಪ್ರಕಾರ ಸೈಲೆನ್ಸರ್ ನಿಂದ ಹೊರಸೂಸುವ ಶಬ್ದವು ಇಂತಿಷ್ಟೇ ಪರಿಮಾಣದಲ್ಲಿರಬೇಕೆಂದು ರಾಷ್ಟ್ರೀಯ ಮಾನದಂಡಗಳನ್ನು ನಿಗದಿ ಪಡಿಸಲಾಗಿದೆ. ವಾಹನವು ಹೊರಸೂಸುವ ಶಬ್ದವನ್ನು ಡೆಸಿಬಲ್ ಎಂಬ ಪರಿಮಾಣದಿಂದ ಅಳೆಯುತ್ತಾರೆ. ಸಾಮಾನ್ಯವಾಗಿ 80 ಡೆಸಿಬಲ್ ಗಿಂತ ಹೆಚ್ಚಿನ ಶಬ್ದವನ್ನು ಹೊರಸೂಸಿದರೆ ಅದನ್ನು ಶಬ್ದಮಾಲಿನ್ಯಕ್ಕೆ ಕಾರಣವಾಗುತ್ತದೆ ಎಂದರು.

ದ್ವಿಚಕ್ರ ವಾಹನ ಸವಾರರು ವಾಹನ ತಯಾರಿಕ ಕಂಪೆನಿಯಿಂದ ಬರುವ ಸೈಲೆನ್ಸರ್ ಗಳನ್ನು ಸ್ಥಳೀಯವಾಗಿ ಬದಲಾಯಿಸಿ ಮೊಡಿಫೈಡ್ ಸೈಲೆನ್ಸರ್ ಗಳನ್ನು ಅಳವಡಿಸಿ ಶಬ್ದಮಾಲಿನ್ಯ ಮಾಡುತ್ತಾರೆ. ಮೋಟಾರು ವಾಹನ ಕಾಯ್ದೆಯಲ್ಲಿ ಕಲಂ 52 ಮತ್ತು 190(2) ಗಳಲ್ಲಿ ಈ ರೀತಿಯ ಮಾರ್ಪಾಡುಗಳಿಗೆ 500 ರೂಪಾಯಿಯಿಂದ 2 ಸಾವಿರ ರೂಪಾಯಿ ವರೆಗೂ ದಂಡ ವಸೂಲಿ ಮಾಡಲು ಮತ್ತು ಮಾರ್ಪಾಡುಗೊಂಡ ಸಲಕರಣೆಗಳನ್ನು ವಶಪಡಿಸಿಕೊಳ್ಳಲು ಅವಕಾಶವಿದೆ ಎಂದರು.

ಈ ರೀತಿಯ ಶಬ್ದ ಮಾಲಿನ್ಯ ಮಾಡುವ ದ್ವಿಚಕ್ರ ವಾಹನಗಳ ಸವಾರರಿಂದ ಸಾಮಾನ್ಯ ನಾಗರಿಕರಿಗೆ ಕಿವುಡುತನ, ಒತ್ತಡ, ಕಳಪೆ ಏಕಾಗ್ರತೆ, ನಿದ್ರಾಹೀನತೆ, ಹಾಗೂ ಗರ್ಭಿಣಿ ಸ್ತ್ರೀಯರು ಮತ್ತು ಸಣ್ಣ ಮಕ್ಕಳಿಗೆ ಅರಿವಿನ ದುರ್ಬಲತೆ ಸಮಸ್ಯೆ ಉಂಟಾಗುವ ಸಾಧ್ಯತೆ ಇರುತ್ತದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕುಮಾರಚಂದ್ರ, ಉಡುಪಿ ಉಪವಿಭಾಗದ ಪೊಲೀಸ್ ಅಧೀಕ್ಷಕರಾದ ಸದಾನಂದ ನಾಯಕ್, ಮಣಿಪಾಲ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಮಂಜುನಾಥ್ ಎಂ, ಪೊಲೀಸ್ ಉಪನಿರೀಕ್ಷಕರಾದ ರಾಜಶೇಖರ ವಂದಲಿ, ಸುಧಾಕರ ತೋನ್ಸೆ, ಪ್ರೊಬೇಶನರಿ ಪಿ ಎಸ್ ಐ ಗಳಾದ ನಿರಂಜನ್ ಗೌಡ, ದೇವರಾಜ್ ಬಿರಾದಾರ್, ಸಿಬಂದಿಗಳಾದ ಶೀನ ಸಾಲ್ಯಾನ್, ಸಂತೋಷ, ಆನಂದ, ರೇವಣ ಸಿದ್ದಪ್ಪ, ಸುರೇಶ, ಸುದೀಪ್, ಸತೀಶ್ ಹಾಗೂ ಇತರರು ಉಪಸ್ಥಿತರಿದ್ದರು.


Spread the love