ಮಣಿಪಾಲ: ಕುಡಿದ ಮತ್ತಿನಲ್ಲಿ ವಾಹನ ಚಾಲನೆ; ಎರಡು ಕಾರು ಜಖಂ, ಚಾಲಕ ವಶಕ್ಕೆ

Spread the love

ಮಣಿಪಾಲ: ಕುಡಿದ ಮತ್ತಿನಲ್ಲಿ ವಾಹನ ಚಾಲನೆ; ಎರಡು ಕಾರು ಜಖಂ, ಚಾಲಕ ವಶಕ್ಕೆ

ಉಡುಪಿ: ಪಬ್‌ನಲ್ಲಿ ಕುಡಿದ ಮತ್ತಿನಲ್ಲಿ ತನ್ನ ಇನ್ನೋವಾ ಕಾರನ್ನು ಹಿಮ್ಮುಖವಾಗಿ ಚಲಾಯಿಸಿ ಅಪಘಾತ ಮಾಡಿದ ಕಾರು ಚಾಲಕ ಸುಹಾಸ್‌ ಮೇಲೆ ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸೆ.3ರಂದು ರಾತ್ರಿ ಮಣಿಪಾಲದ ಪಬ್‌ಗ ಬಂದಿದ್ದ ಗ್ರಾಹಕ ಪಬ್‌ನಿಂದ ಹೊರಗೆ ಹೋಗುವಾಗ ತನ್ನ ಇನ್ನೋವಾ ಕಾರನ್ನು ಕುಡಿದ ಮತ್ತಿನಲ್ಲಿ ಹಿಮ್ಮುಖವಾಗಿ ನಿರ್ಲಕ್ಷ್ಯತನದಿಂದ ಚಾಲನೆ ಮಾಡಿದ್ದಾನೆ. ಪರಿಣಾಮ ಪಬ್‌ ನೌಕರ ವಿಕ್ರಾಂತ್‌ ಅವರ ಕಾಲಿಗೆ ಗಾಯ ಉಂಟು ಮಾಡಿದ್ದಲ್ಲದೆ ಪಾರ್ಕಿಂಗ್‌ನಲ್ಲಿದ್ದ ಸ್ಕೋಡಾ ಮತ್ತು ಫಾರ್ಚೂನರ್‌ ವಾಹನಕ್ಕೆ ಢಿಕ್ಕಿ ಹೊಡೆದಿದ್ದಾರೆ.

ಜಿಎ08ಎಫ್ 3693 ನೋಂದಣಿ ಸಂಖ್ಯೆಯ ಕಪ್ಪು ಬಣ್ಣದ ಇನ್ನೋವಾ ಕಾರನ್ನು ಅವರು ಚಲಾಯಿಸುತ್ತಿದ್ದರು. ಚಾಲನೆ ವೇಳೆ ಸುಹಾಸ್‌ ಮದ್ಯ ಸೇವನೆ ಮಾಡಿದ್ದು ದೃಢಪಟ್ಟಿದೆ. ಇನ್ನಿತರ ಅಮಲು ಪದಾರ್ಥ ಸೇವನೆ ಮಾಡಿರುವ ಬಗ್ಗೆ ತಪಾಸಣೆಗೆ ಒಳಪಡಿಸಲಾಗಿದೆ. ಇನ್ನೋವಾ ಕಾರಿನಲ್ಲಿದ್ದ ಸುಹಾಸ್‌ ಅವರ ಸ್ನೇಹಿತರಾದ ಭರತ್‌, ನವೀನ್‌ ಕಲ್ಯಾಣ್‌, ನಿರ್ಮಲಾ, ಕವನಾ ಅವರನ್ನೂ ಪರೀಕ್ಷೆಗೆ ಒಳಪಡಿಸಲಾಗಿದೆ.

ಇವರೆಲ್ಲರೂ ಬೆಂಗಳೂರು ಮತ್ತು ಶಿವಮೊಗ್ಗ ಮೂಲದವರಾಗಿದ್ದು, ಬೆಂಗಳೂರಿನಲ್ಲಿ, ಐಟಿ ಸೆಕ್ಟರ್‌ನಲ್ಲಿ ನೌಕರಿ ಮಾಡುತ್ತಿರುವ ಬಗ್ಗೆ ಮಾಹಿತಿ ತಿಳಿದು ಬಂದಿದೆ. ಇವರೆಲ್ಲರೂ ಸಂಬಂಧಿಕರ ಮದುವೆಗೆ ಉಡುಪಿಗೆ ಬಂದಿದ್ದು, ರಾತ್ರಿ ಪಬ್‌ಗೆ ಬಂದಿದ್ದರು. ಈ ಅಪಘಾತದಿಂದ 1 ಸ್ಕೋಡಾ ಕಾರು ಹಾಗೂ ಮತ್ತೂಂದು ಫಾರ್ಚುನರ್‌ ಕಾರು ಜಖಂಗೊಂಡಿದೆ. ಫಾರ್ಚೂನರ್‌ ಕಾರು ಚಾಲಕ ರೋಶನ್‌ ಅವರು ಠಾಣೆಯಲ್ಲಿ ದೂರು ನೀಡಿದ್ದಾರೆ. ಅಪಘಾತಪಡಿಸಿದ ಕಾರು ಚಾಲಕನನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ.


Spread the love