ಮಣಿಪುರ ಪ್ರಕರಣದಲ್ಲಿ ಪ್ರಧಾನಿ ನಿರ್ಲಕ್ಷ್ಯತೆ ಖಂಡನೀಯ – ವೆರೋನಿಕಾ ಕರ್ನೆಲಿಯೋ

Spread the love

ಮಣಿಪುರ ಪ್ರಕರಣದಲ್ಲಿ ಪ್ರಧಾನಿ ನಿರ್ಲಕ್ಷ್ಯತೆ ಖಂಡನೀಯ – ವೆರೋನಿಕಾ ಕರ್ನೆಲಿಯೋ

ಉಡುಪಿ: ಕಣಿವೆ ರಾಜ್ಯ ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ಕೊನೆಗೊಳಿಸುವಲ್ಲಿ ಮತ್ತು ಮಹಿಳೆಯರ ಮೇಲೆ ನಡೆಯುತ್ತಿರುವ ಕ್ರೌರ್ಯದ ಕುರಿತು ಮೌನ ವಹಿಸಿರುವ ಪ್ರಧಾನಿ ನರೇಂದ್ರ ಮೋದಿಯವರ ವರ್ತನೆ ನಿಜಕ್ಕೂ ಖಂಡನೀಯ. ಮಹಿಳೆಯರನ್ನು ಬೆತ್ತಲೆಗೊಳಿಸಿ ಮೆರವಣಿಗೆ ಮಾಡಿರುವುದು ಇಡೀ ದೇಶವೇ ತಲೆತಗ್ಗಿಸುವಂತ ವಿಚಾರವಾಗಿದೆ. ಸದಾ ಬೇಟಿ ಬಚಾವೊ ಬೇಟಿ ಪಡಾವೊ ಎಂಬ ಘೋಷಣೆಯನ್ನು ಮಾಡಿಕೊಂಡು ಬಂದಿರುವ ಪ್ರಧಾನಿ ಮಣಿಪುರದ ಮಹಿಳೆಯರ ನೋವಿನ ಆಕ್ರಂದನವನ್ನು ಕೇಳಿಯೂ ಕೇಳದಂತೆ ಇರುವುದು ನಾಚಿಕೇಗೇಡು ಎಂದು ಕೆಪಿಸಿಸಿ ವಕ್ತಾರರಾದ ವೆರೋನಿಕಾ ಕರ್ನೆಲಿಯೋ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಣಿಪುರಾ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ನಿಯಂತ್ರಿಸುವಲ್ಲಿ ಕೇಂದ್ರ ಮತ್ತು ರಾಜ್ಯ ವಿಫಲವಾಗಿದೆ. ಮಣಿಪುರದ ಮುಖ್ಯಮಂತ್ರಿಗಳು ಮಹಿಳೆಯರ ಬೆತ್ತಲೆ ಪ್ರಕರಣ ವೈರಲ್ ವೀಡಿಯೋವನ್ನು ಉಲ್ಲೇಖಿಸಿ ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸಿದ ರೀತಿ, ರಾಜ್ಯದಲ್ಲಿ ನೂರಾರು ಘಟನೆಗಳು ಮತ್ತು ಅನೇಕ ಎಫ್ಐಆರ್ಗಳು ನಡೆದಿವೆ. ಇಂತಹ ಅಮಾನವೀಯ ವರ್ತನೆ ನಡೆದರೂ ಕೂಡ ಕಣ್ಣಿದ್ದು ಕುರುಡರಾಗಿ ವರ್ತಿಸುತ್ತಿರುವ ಪ್ರಧಾನಿ ಇದರಲ್ಲಿ ರಾಜಕೀಯ ಲಾಭವನ್ನು ನೋಡುತ್ತಿದ್ದಾರೆ.

ಪ್ರಧಾನಿಯವರು ಮಣಿಪುರದ ವಿಚಾರದಲ್ಲಿ ಮೊದಲ ಬಾರಿಗೆ ಹೇಳಿಕೆ ನೀಡುವಾಗ ರಾಜಕೀಯ ಬೆರೆಸಿಕೊಂಡೇ ರಾಜಸ್ಥಾನ ಮತ್ತು ಛತ್ತೀಸ್ಗಢದಲ್ಲಿ ನಡೆದ ಅತ್ಯಾಚಾರ ಘಟನೆಗಳ ಬಗ್ಗೆ ಪ್ರಸ್ತಾಪಿಸಿ ನಂತರ ಮಣಿಪುರದ ಬಗ್ಗೆ ಪ್ರಸ್ತಾಪಿಸಿದ್ದಾರೆ. ಅಮಾಯಕ ಮಹಿಳೆಯರ ನೋವು ಕೂಡ ದೇಶದ ಪ್ರಧಾನಿ ರಾಜಕೀಯಕ್ಕೆ ಬಳಸಿಕೊಂಡಿರುವುದು ದುರದೃಷ್ಠಕರ ಸಂಗತಿಯಾಗಿದೆ.

ಯಾವುದೇ ವಿಚಾರಗಳು ಬಂದಾಗ ಕೂಡ ಮೊದಲಾಗಿ ಪ್ರತಿಕ್ರಿಯಿಸುವ ದೇಶದ ಬಿಜೆಪಿ ಮಹಿಳಾ ಸಚಿವೆಯರು ಸಂಸದರು ಮಣಿಪುರ ವಿಚಾರದಲ್ಲಿ ಮೌನತೆಯನ್ನು ಕಾಪಾಡಿದ್ದಾರೆ. ಮಹಿಳೆಯರನ್ನು ತಾಯಿ ಮಾತೆ ಎಂದೆಲ್ಲಾ ನಾಟಕವಾಡುವ ಬಿಜೆಪಿಗರಿಗೆ ಕಣಿವೆ ರಾಜ್ಯದಲ್ಲಿ ಮಹಿಳೆಯರನ್ನು ಬೆತ್ತಲೆಗೊಳಿಸಿ ಮೆರವಣಿಗೆ ನಡೆಸುವಾಗ ಅದನ್ನು ತಡೆಯಬೇಕು ಎನ್ನುವ ಕನಿಷ್ಠ ಜ್ಞಾನ ಬಂದಿಲ್ಲವೆ? ಉಡುಪಿ –ಚಿಕ್ಕಮಗಳೂರಿನ ಸಂಸದೆ ಹಾಗೂ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರು ಯಾವುದೇ ಚಿಕ್ಕ ವಿಚಾರವಿದ್ದರೂ ಕೂಡ ರಾಷ್ಟ್ರ ಮಟ್ಟದ ವರೆಗೆ ಬೊಬ್ಬಿರುದು ಸುದ್ದಿಯಾಗುತ್ತಾರೆ ಆದರೆ ಮಣಿಪುರದಲ್ಲಿ ಮಹಿಳೆಯರನ್ನು ಅಮಾನವೀಯವಾಗಿ ನಡೆಸಿಕೊಳ್ಳುವ ವಿಚಾರ ತಿಳಿದು ತಿಳಿಯದಂತೆ ಮೌನ ವಹಿಸಿದ್ದಾರೆ. ಇವರ ಮಹಿಳಾ ಪರ ಕಾಳಜಿ ಕೇವಲ ಚುನಾವಣಾ ವಿಚಾರಕ್ಕೆ ಮಾತ್ರ ಸೀಮಿತವಾಗಿದೆ ಎನ್ನುವುದು ಎದ್ದು ಕಾಣುತ್ತದೆ.

ಕಣಿವೆ ರಾಜ್ಯದಲ್ಲಿ ಇನ್ನೂ ಕೂಡ ಎರಡು ಸಮುದಾಯಗಳ ನಡುವೆ ನಡೆಯುತ್ತಿರುವ ಹಿಂಸಾಚಾರ ಮುಂದುವರೆದಿದ್ದು ಇದನ್ನು ಶಮನಗೊಳಿಸುವಲ್ಲಿ ಅಲ್ಲಿನ ಬಿಜೆಪಿ ನೇತೃತ್ವದ ಸರಕಾರ ಸಂಪೂರ್ಣ ವಿಫಲವಾಗಿದ್ದು ಸ್ವತಃ ಮಹಿಳೆಯಾಗಿರುವ ರಾಷ್ಟ್ರಪತಿಗಳು ಕೂಡಲೇ ಮಧ್ಯಪ್ರವೇಶಿಸಿ ಅಲ್ಲಿನ ಆಡಳೀತಾರೂಡ ಸರಕಾರವನ್ನು ವಜಾಗೊಳಿಸಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಬೇಕು ಅಲ್ಲದೆ ಕೂಡಲೇ ಶಾಂತಿ ಸ್ಥಾಪಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.


Spread the love