ಮತದಾನ ಅಕ್ರಮಗಳನ್ನು ನಡೆಸುವುದು ಕಾಂಗ್ರೆಸ್ ಪಕ್ಷದ ಸಂಸ್ಕøತಿ – ಸಚಿವ ಡಾ| ಅಶ್ವಥ್ ನಾರಾಯಣ

Spread the love

ಮತದಾನ ಅಕ್ರಮಗಳನ್ನು ನಡೆಸುವುದು ಕಾಂಗ್ರೆಸ್ ಪಕ್ಷದ ಸಂಸ್ಕøತಿ – ಸಚಿವ ಡಾ| ಅಶ್ವಥ್ ನಾರಾಯಣ

ಕೋಟ: ಮತದಾರರ ಪಟ್ಟಿಯಲ್ಲಿ ಗೊಂದಲ ಉಂಟುಮಾಡುವುದು, ಮತದಾನ ಅಕ್ರಮಗಳನ್ನು ನಡೆಸುವುದು ಕಾಂಗ್ರೆಸ್ ಪಕ್ಷದ ಸಂಸ್ಕøತಿಯಾಗಿದೆ ಎಂದು ರಾಜ್ಯ ಉನ್ನತ ಶಿಕ್ಷಣ, ಐಟಿ ಮತ್ತು ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ, ಕೌಶಲ್ಯ ಅಭಿವೃದ್ಧಿ ಸಚಿವ ಡಾ. ಅಶ್ವತ್ ನಾರಾಯಣ ಸಿ ಎನ್ ಹೇಳಿದರು.

ಅವರು ಶನಿವಾರ ಕೋಟದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ ಮತದಾರರ ಪಟ್ಟಿ ಪರಿಷ್ಕರಣೆ ಎಲ್ಲಾ ಕಾಲದಲ್ಲೂ ಆಗುವ ಪ್ರಕಿಯೆ ಆಗಿರುತ್ತದೆ. ಮತದಾರರ ಪಟ್ಟಿಯಲ್ಲಿ ಯಾವುದೇ ತಪ್ಪು ಒಪ್ಪುಗಳಿದ್ದರೂ ಅದರ ಪರಿಷ್ಕರಣೆ ನಡೆಯಬೇಕು ಅದರಲ್ಲಿ ಯಾವುದೇ ತಪ್ಪಿಲ್ಲ. ಮತದಾರರ ಪಟ್ಟಿ ಪ್ರಜಾಪ್ರಭುತ್ವದ ಆಶಯವಾಗಿದ್ದು ಮತದಾರನಿಗೆ ಮತದಾನ ಮಾಡಲು ಯಾವುದೇ ಅಡಚಣೆಗಳು ಇರಬಾರದು. ಅರ್ಹತೆ ಇರುವ ಪ್ರತಿಯೊಬ್ಬ ಭಾರತೀಯನೂ ಕೂಡ ಮತ ಚಲಾಯಿಸಬೇಕು ಎಂದರು.

ಮತದಾರ ಪಟ್ಟಿಯ ಪರಿಷ್ಕರಣೆ ವಿಚಾರದಲ್ಲಿ ನಾವು ಯಾವುದೇ ರೀತಿಯ ಗೊಂದಲಕ್ಕೆ ಆಸ್ಪದ ನೀಡುವುದಿಲ್ಲ. ನಮ್ಮ ಸರಕಾರ ಮತ್ತು ಪಕ್ಷ ಈ ವಿಚಾರದಲ್ಲಿ ಪಾರದರ್ಶಕವಾಗಿದೆ. ಚಿಲುಮೆ ಸಂಸ್ಥೆಯ ವಿಚಾರದಲ್ಲಿ ಕೂಡ ಪಾರದರ್ಶಕವಾದ ತನಿಖೆ ನಡೆಯುತ್ತಿದ್ದು ಎಲ್ಲರ ಮೇಲೆ ಕೂಡ ಕ್ರಮ ಕೈಗೊಳ್ಳಲಾಗುತ್ತಿದೆ ಅಲ್ಲದೆ ಅಗತ್ಯವಿದ್ದರೆ ಮತ್ತಷ್ಟು ಹೆಚ್ಚಿನ ತನಿಖೆ ಮಾಡಿಸುತ್ತೇವೆ ಎಂದರು.

ಇದೇ ರೀತಿ ಬೇರೆ ಯಾವುದಾದರೂ ಸಂಘ ಸಂಸ್ಥೆಗಳು ಅಕ್ರಮ ಮಾಡುತ್ತಿದ್ದ ಅಂತಹವರ ಮೇಲೆ ಕೂಡ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗಳಿಗೆ ಸಲಹೆ ನೀಡಿದ್ದೇನೆ. ಈ ಹಗರಣದಲ್ಲಿ ಯಾರಿದ್ದರೂ ಕೂಡ ಬಿಡಬೇಡಿ ಎಂದು ಹೇಳಿದ್ದೇನೆ. ನಾವು ಜನರ ಆಶೀರ್ವಾದ ಇರುವವರು ಮತ್ತು ಜನರ ಶಕ್ತಿ ಇಟ್ಟುಕೊಂಡವರು ಇಂತಹ ಯಾವುದೇ ದಾರಿಯಲ್ಲಿ ನಮಗೆ ನಂಬಿಕೆ ಇಲ್ಲ ಕಾಂಗ್ರೆಸ್ ಕಾರ್ಯಕರ್ತರು ಇಲ್ಲದ ಪಕ್ಷವಾಗಿದೆ ಅವರಿಗೆ ಜನರ ಆಶೀರ್ವಾದವೂ ಇಲ್ಲ ಕಾಂಗ್ರೆಸ್ ಅಂದರೆ ಕುಟುಂಬದ ಪಕ್ಷವಾಗಿದೆ. ಎಂದರು.

ಮತದಾರರ ಪಟ್ಟಿ ಪರಿಷ್ಕರಣೆ ಹಗರಣ ವಿಚಾರದಲ್ಲಿ ಚುನಾವಣಾ ಆಯೋಗ ಮಧ್ಯಪ್ರವೇಶ ಮಾಡಿರುವುದು ಸ್ವಾಗತಾರ್ಹ ವಿಚಾರವಾಗಿದೆ. ಮತದಾರರ ಸ್ವಾತಂತ್ರ್ಯ ರಕ್ಷಣೆಗೆ, ಮತ್ತು ಆತನ ಹಕ್ಕನ್ನು ಕಾಪಾಡಲು ಚುನಾವಣಾ ಆಯೋಗ ಇದೆ. ಮತದಾರರ ಹಕ್ಕನ್ನು ಯಾವ ಸಂದರ್ಭದಲ್ಲಿ ಕೂಡ ಯಾರು ಕಸಿಯಬಾರದು ಎಂದರು.

ಚಿಲುಮೆ ಸಂಸ್ಥೆಗೆ ಪೊಲೀಸರು ನೋಟಿಸ್ ನೀಡಿರುವುದು ಸರಿಯಾಗಿದ್ದು ತನಿಖೆ ಇನ್ನಷ್ಟು ಮುಕ್ತವಾಗಿ ನಡೆಯಲಿ. ಚಿಲುಮೆ ಹಗರಣದಲ್ಲಿ ನನ್ನ ಮೇಲೆ ಆರೋಪ ಬಂದಿದೆ ಆದರೆ ನನಗೆ ಯಾವುದೇ ಆತಂಕ ಇಲ್ಲ ಆತಂಕ ಇದ್ದರೆ ಅದು ಕಾಂಗ್ರೆಸ್ ನವರಿಗೆ ಮಾತ್ರ. ನನ್ನ ಕ್ಷೇತ್ರದಲ್ಲಿ ಇಂತಹ ಯಾವುದೇ ಸಮಸ್ಯೆ ಇಲ್ಲ. ಕಾಂಗ್ರೆಸ್ ಹಿತ್ತಲು ನೋಡಿದರೆ ಅದರ ಹಣೆಬರಹ ತಿಳಿಯುತ್ತದೆ ಅವರ ಹಿತ್ತಲಲ್ಲಿ ಬರಿ ಕೊಳಕು ತುಂಬಿದೆ. ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದ ಮಹಾಪುರುಷರು ಯಾರು ಎನ್ನುವುದ ಬಯಲಾಗಬೇಕು ಎಂದರು.

ಬೆಳಗಾವಿಯಲ್ಲಿ ಮಹಾರಾಷ್ಟ್ರ ತಗಾದೆ ವಿಚಾರದಲ್ಲಿ ಪ್ರತಿಕ್ರಿಯಿಸಿದ ಸಚಿವರು ಮಹಾರಾಷ್ಟ್ರದ ಧೋರಣೆ ಖಂಡನೀಯ. ಇತ್ಯರ್ಥ ಆಗಿರುವ ವಿಚಾರವನ್ನು ಮತ್ತೆ ಕೆಣಕಿ ಜನರ ಭಾವನೆಯನ್ನು ಕೆರಳಿಸುವುದು ಸರಿಯಲ್ಲ. ಇಂತಹ ವಿಚಾರಗಳಿಗೆ ನಾಗರಿಕರು ಬಲಿಯಾಗಬಾರದು ನಾವು ಜೊತೆಯಾಗಿ ಬದುಕಿ ಬಾಳಬೇಕು. ನಾವೆಲ್ಲರೂ ಭಾರತೀಯರು ಎಂಬ ಭಾವನೆಯಲ್ಲಿ ಮುಂದೆ ಸಾಗಬೇಕು. ಯಾವುದೇ ರೀತಿಯ ಅಹಿತಕರ ಘಟನೆ ಗಲಭೆಗಳು ಜರುಗಬಾರದು, ಯಾವುದೇ ಗದ್ದಲಕ್ಕೆ ಅವಕಾಶ ಇಲ್ಲದೆ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದರು.
ಮಹಾರಾಷ್ಟ್ರದಲ್ಲಿ ಸಮ್ಮೀಶ್ರ ಸರಕಾರ ಇದ್ದು ಶಿವಸೇನೆ ತನ್ನ ರಾಜಕೀಯ ಅಸ್ತಿತ್ವಕ್ಕೆ ಬೇಕಾಗಿರುವ ರೀತಿಯಲ್ಲಿ ಹೇಳಿಕೆ ನೀಡುತ್ತಿದ್ದು ಭಾರತೀಯತೆ ಎನ್ನುವುದು ಇವೆಲ್ಲವನ್ನು ಮೀರಿದ ವಿಚಾರವಾಗಿದೆ. ಕ್ಷುಲ್ಲಕ ರಾಜಕೀಯ ಮಾಡದೆ ನೂರೆಂಟ್ ಒಳ್ಳೆಯ ಕೆಲಸ ಮಾಡಬೇಕು. ಆದರೆ ನೆಲಜಲದ ವಿಚಾರದಲ್ಲಿ ಯಾವುದೇ ರೀತಿಯ ಪ್ರಚೋದನೆಯನ್ನು ನಾವು ಸಹಿಸಲ್ಲ ಎಂದು ಎಚ್ಚರಿಕೆ ನೀಡಿದರು.


Spread the love