ಮತಾಂತರ ಆರೋಪ: ಕಾರ್ಕಳದಲ್ಲಿ ಪ್ರಾರ್ಥನಾಲಯದ ಮೇಲೆ ಹಿಂದೂ ಜಾಗರಣ ವೇದಿಕೆ ದಾಳಿ

Spread the love

ಮತಾಂತರ ಆರೋಪ: ಕಾರ್ಕಳದಲ್ಲಿ ಪ್ರಾರ್ಥನಾಲಯದ ಮೇಲೆ ಹಿಂದೂ ಜಾಗರಣ ವೇದಿಕೆ ದಾಳಿ

ಕಾರ್ಕಳ: ಅಕ್ರಮವಾಗಿ ಅಮಾಯಕರನ್ನು ಮತಾಂತರ ಮಾಡಲಾಗುತ್ತಿದೆ ಎಂದು ಆರೋಪಿಸಿ ಕಾರ್ಕಳ ಕುಕ್ಕುಂದೂರು ಸಮೀಪದ ನಕ್ರ ಆನಂದಿ ಮೈದಾನದ ಬಳಿಯ ಪ್ರಾರ್ಥನಾ ಕೇಂದ್ರಕ್ಕೆ ಹಿಂದು ಜಾಗರಣ ವೇದಿಕೆ ಕಾರ್ಯಕರ್ತರು ದಾಳಿ ನಡೆಸಿದ ಘಟನೆ ಶುಕ್ರವಾರ ಸಂಭವಿಸಿದೆ.

ಕಳೆದ ಹತ್ತು ವರ್ಷಗಳಿಂದ ಬೆನಡಿಕ್ಟ್‌ ಎಂಬಾತನ ನೇತೃತ್ವದಲ್ಲಿ ಮತಾಂತರ ಕೆಲಸದಲ್ಲಿ ಪ್ರಾರ್ಥನಾ ಕೇಂದ್ರ ನಿರತವಾಗಿದೆ ಎಂದು ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಆರೋಪಿಸಿದ್ದು, ಶುಕ್ರವಾರ 60ಕ್ಕೂ ಅಧಿಕ ಮಹಿಳೆಯರನ್ನು ಹತ್ತು ಮಕ್ಕಳನ್ನು ಸೇರಿಸಿ ಪ್ರಾರ್ಥನೆ ನಡೆಸುತ್ತಿದ್ದ ವೇಳೆ ದಾಳಿ ನಡೆಸಿದ್ದಾರೆ. ಪ್ರಾರ್ಥನಾಲಯಕ್ಕೆ ಯಾವುದೇ ಅನುಮತಿ ಇಲ್ಲ ಎಂದು ಸಂಘಟನೆಯ ಕಾರ್ಯಕರ್ತರು ಆರೋಪಿಸಿದ್ದು ದಾಳಿಯಿಂದಾಗಿ ಸ್ಥಳದಲ್ಲಿ ಸ್ವಲ್ಪ ಸಮಯ ಪ್ರಕ್ಷುಬ್ದ ವಾತಾವರಣ ನಿರ್ಮಾಣವಾಗಿತ್ತು.

ಮಾಹಿತಿ ತಿಳಿದು ಕೂಡಲೇ ಸ್ಥಳಕ್ಕೆ ಆಗಮಿಸಿದ ಕಾರ್ಕಳ ಗ್ರಾಮಾಂತರ ಠಾಣೆಯ ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ.

ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಹಿಂದೂ ಜಾಗರಣ ವೇದಿಕೆ ಮುಖಂಡ ಪ್ರಕಾಶ್‌ ಕುಕ್ಕೆಹಳ್ಳಿ ಉಡುಪಿಯಲ್ಲಿ ಹಲವಾರು ವರ್ಷಗಳಿಂದ ಮತಾಂತರ ಪ್ರಕ್ರಿಯೆ ನಡೆಯುತ್ತಿದ್ದು, ನೂರಾರು ಹಿಂದೂಗಳನ್ನು ಕ್ರೈಸ್ತ ಮಿಷನರಿಗಳು ಮತಾಂತರ ಮಾಡಿವೆ. ಈ ಬಗ್ಗೆ ಆರಂಭದಿಂದಲೂ ಹಿಂದು ಜಾಗರಣ ವೇದಿಕೆ ಈ ಬಗ್ಗೆ ಹೋರಾಟ ನಡೆಸುತ್ತಲೇ ಇದೆ. ಇಂದು ಸೂಕ್ತ ಮಾಹಿತಿಗಳು ಇದ್ದ ಹಿನ್ನೆಲೆಯಲ್ಲಿ ನಾವು ದಾಳಿ ಮಾಡಿದ್ದೇವೆ. ಪೊಲೀಸರ ಕೇಂದ್ರಕ್ಕೆ ಹೋಗಿ ವಿಚಾರಿಸಿದ್ದಾರೆ

ಅದ್ದೂರಿ ಗಣೇಶೋತ್ಸವಕ್ಕೆ ಸರ್ಕಾರ ಅನುಮತಿ ಕೊಟ್ಟಿಲ್ಲ ಆದರೆ ಪ್ರಾರ್ಥನೆಯ ಹೆಸರಿನಲ್ಲಿ ಮತಾಂತರಕ್ಕೆ ಅವಕಾಶ ಇದೆ. ಮತಾಂತರಿಗಳಿಗೆ ಕೋವಿಡ್ ನಿಯಮ ಪಾಲನೆ ಇಲ್ಲವೇ? ಕರಾವಳಿ ಜಿಲ್ಲೆಗಳಲ್ಲಿ ಹಲವಾರು ಮತಾಂತರ ಕೇಂದ್ರಗಳಿವೆ ಇನ್ನಾದರೂ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳದಿದ್ದರೆ ನಾವು ದಾಳಿ ಮುಂದುವರಿಸುತ್ತೇವೆ. ಪರಿಸ್ಥಿತಿ ಹದಗೆಡಲು ಅವಕಾಶ ಕೊಡಬೇಡಿ ಎಂದು ಎಚ್ಚರಿಕೆ ನೀಡಿದರು.

ಇಲ್ಲಿ ನಾವು ಯಾವುದೇ ಮತಾಂತರ ಮಾಡುತ್ತಿಲ್ಲ. ನಾವು ಪ್ರಾರ್ಥನೆ ಮಾತ್ರ ಮಾಡುತ್ತಿದ್ದೇವೆ ಎಂದು ಕಾರ್ಕಳದ ಮತಾಂತರ ಕೇಂದ್ರದ ಮುಖ್ಯಸ್ಥ ಬೆನೆಡಿಕ್ಟ್ ಅವರು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

ಇದು ಮಂಗಳೂರಿನ ಕ್ರೈಸ್ತ ಸಂಸ್ಥೆ ನಡೆಸುತ್ತಿರುವ ಕೇಂದ್ರ. ನಾವು ಯಾರನ್ನೂ ಮತಾಂತರ ಮಾಡುವುದಿಲ್ಲ. ಅನ್ಯ ಧರ್ಮದವರು ಕೆಲವರು ಪ್ರಾರ್ಥನೆಗಾಗಿ ಬರುತ್ತಾರೆ. ಇವತ್ತು ಪ್ರಾರ್ಥನೆ ನಡೆಸುತ್ತಿರುವಾಗ ಹಿಂದು ಜಾಗರಣ ವೇದಿಕೆಯ ಕಾರ್ಯಕರ್ತರು ಏಕಾಏಕಿ ನುಗ್ಗಿ ಗಲಾಟೆ ಮಾಡಿದ್ದಾರೆ. ವಿಡಿಯೋ ತೆಗೆದಿದ್ದಾರೆ. ಮಹಿಳೆಯರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಮತಾಂತರ ಮಾಡುವುದು ನಮ್ಮ ಕೆಲಸ ಅಲ್ಲ.ನಾವು ಕೇವಲ ಪ್ರಾರ್ಥನೆ ಮಾತ್ರ ಮಾಡುತ್ತಿದ್ದೆವು ಎಂದು ಪ್ರತಿಕ್ರಿಯೆ ನೀಡಿದ್ದಾರೆ.


Spread the love