ಮತೀಯವಾದಿ ಸಂಘಟನೆಗಳ ಬೆದರಿಕೆಗೆ ಮಣಿಯುವ ಪ್ರಶ್ನೆಯೇ ಇಲ್ಲ : ಯಶ್ ಪಾಲ್ ಸುವರ್ಣ

Spread the love

ಮತೀಯವಾದಿ ಸಂಘಟನೆಗಳ ಬೆದರಿಕೆಗೆ ಮಣಿಯುವ ಪ್ರಶ್ನೆಯೇ ಇಲ್ಲ : ಯಶ್ ಪಾಲ್ ಸುವರ್ಣ

ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಶಾಸಕ ರಘುಪತಿ ಭಟ್ ರವರಿಗೆ ಮತೀಯವಾದಿಗಳು ಬೆದರಿಕೆ ಕರೆ ಮಾಡಿರುವುದು ಖಂಡನೀಯ, ಈ ಬೆದರಿಕೆಗಳಿಗೆ ಮಣಿದು ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್ ಪಾಲ್ ಸುವರ್ಣ ತಿಳಿಸಿದ್ದಾರೆ.

ಕಾಲೇಜಿನ ಶಿಸ್ತು ಮತ್ತು ಹಿಜಾಬ್ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಲು ಯತ್ನಿಸುತ್ತಿರುವ ಶಾಸಕರಿಗೆ ಬೆದರಿಕೆ ಹಾಕಿ ಮಾನಸಿಕ ಸ್ಥೈರ್ಯ ಕುಗ್ಗಿಸಲು ಯತ್ನಿಸುತ್ತಿರುವುದು ಖೇದಕರ, ಈ ಮೂಲಕ ಹಿಜಾಬ್ ವಿವಾದದಲ್ಲಿನ ಮತೀಯವಾದಿಗಳ ಪೂರ್ವ ನಿಯೋಜಿತ ಸಂಚು ಬಯಲಾಗಿದೆ.

ನನಗೂ ಕಳೆದ ಕೆಲವು ದಿನಗಳಿಂದ ಹೋರಾಟದಿಂದ ಹಿಂದೆ ಸರಿಯುವಂತೆ ಮೊಬೈಲ್ ಸಂದೇಶ ಬರುತ್ತಿದ್ದು ಈ ವರೆಗೆ ಯಾವುದೇ ಕರೆ ಬಂದಿಲ್ಲ.

25 ವರ್ಷಗಳಿಂದ ಹಿಂದೂ ಕಾರ್ಯಕರ್ತನಾಗಿ ಹಲವಾರು ಬೆದರಿಕೆ, ಒತ್ತಡಗಳನ್ನು ಎದುರಿಸಿಕೊಂಡೇ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದು, ರಾಷ್ಟ್ರೀಯವಾದಿ ಚಿಂತನೆಯೊಂದಿಗೆ ಸಮಾಜದ ಸ್ವಾಸ್ಥ್ಯವನ್ನು ಹದಗೆಡಿಸಲು ಯತ್ನಿಸುತ್ತಿರುವ ಮತೀಯವಾದಿಗಳ ಬೆದರಿಕೆಗೆ ಮಣಿದು ಸಿದ್ಧಾಂತದೊಂದಿಗೆ ರಾಜೀಯಾಗುವ ಪ್ರಶ್ನೆಯೇ ಇಲ್ಲ.

ದೇಶದಾದ್ಯಂತ ಅರಾಜಕತೆ ಸೃಷ್ಟಿಸಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹುನ್ನಾರದ ಭಾಗವಾಗಿ ಉಡುಪಿಯಲ್ಲಿ ಹಿಜಾಬ್ ವಿವಾದ ಸೃಷ್ಟಿಸಿ ದೇಶವ್ಯಾಪಿಯಾಗಿಸಲು ನಿರತರಾಗಿರುವ ಸಂಘಟನೆಗಳ ಮುಖವಾಡ ಶೀಘ್ರದಲ್ಲೇ ಕಳಚಲಿದೆ.

ಶಾಸಕರ ನೇತೃತ್ವದಲ್ಲಿ ಹಿಜಾಬ್ ವಿವಾದಕ್ಕೆ ತಾರ್ಕಿಕ ಅಂತ್ಯ ನೀಡಲು ನ್ಯಾಯಾಲಯದ ತೀರ್ಪಿನ ನಿರೀಕ್ಷೆಯಲ್ಲಿದ್ದು, ಹಿಂದೂ ಪರ ಕಾರ್ಯಕರ್ತರು ಶಾಸಕರ ಪರ ಸದಾ ನಿಲ್ಲಲಿದ್ದು, ಶಾಸಕರಿಗೆ ಬೆದರಿಕೆ ಕರೆ ಮಾಡಿರುವ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸರಕಾರಕ್ಕೆ ಆಗ್ರಹಿಸುವುದಾಗಿ ತಿಳಿಸಿದ್ದಾರೆ.


Spread the love