
ಮತೀಯ ಭಾವನೆ ಕೆರೆಳಿಸುವ ಬಿಜೆಪಿ: ಡಾ.ಅನ್ಸುಲ್ ಅವಿಜಿತ್
ರಾಮನಗರ: ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳ ಆಡಳಿತದಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನರು ತತ್ತರಿಸಿದ್ದು ನಿರುದ್ಯೋಗ ಕಾಡುತ್ತಿದೆ. ಇವೆಲ್ಲವನ್ನು ಮುಚ್ಚಿಡಲು ಬಿಜೆಪಿ ಮತೀಯ ಭಾವನೆಗಳನ್ನು ಕೆರೆಳಿಸುತ್ತಿದೆ ಎಂದು ಎಐಸಿಸಿ ವಕ್ತಾರ ಡಾ.ಅನ್ಸುಲ್ ಅವಿಜಿತ್ ಕಿಡಿಕಾರಿದರು.
ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯದಲ್ಲಿನ ಬಿಜೆಪಿ ಸರ್ಕಾರದಲ್ಲಿ ಆಡಳಿತದ ಮಟ್ಟ ತೀರಾ ಕೆಳಮಟ್ಟಕ್ಕೆ ಕುಸಿದಿದ್ದು ಭ್ರಷ್ಟಾಚಾರ ಮಿತಿ ಮೀರಿದೆ. ಸ್ವತಃ ಬಿಜೆಪಿ ಶಾಸಕರೇ ತಮ್ಮ ಸರ್ಕಾರದಲ್ಲಿ ಭ್ರಷ್ಟಾಚಾರ ನಡೆಯುತ್ತಿರುವ ಬಗ್ಗೆ ಮಾತನಾಡಿದ್ದಾರೆ. ಈ ಸರ್ಕಾರದ ನೀತಿಗಳಿಂದಾಗಿ ತತ್ತರಿಸುವ ಜನತೆಗೆ ಕಾಂಗ್ರೆಸ್ ಸ್ಪಂದಿಸಲು ಉದ್ದೇಶಿಸಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಉತ್ತಮ ಜೀವನ ಕಟ್ಟಿಕೊಡಲಿದೆ ಎಂದರು.
ಪ್ರತಿ ಕುಟುಂಬದ ಒಡತಿಗೆ ಮಾಸಿಕ 2 ಸಾವಿರ ರೂ ಸಹಾಯಧನ ಬೆಲೆ ಏರಿಕೆಯ ಪರಿಣಾಮವನ್ನು ಸರಿದೂಗಿಸಲು ಸಹಕಾರಿಯಾಗುತ್ತದೆ. 200 ಯೂನಿಟ್ ಉಚಿತ ವಿದ್ಯುತ್ ಕೂಡ ಬೆಲೆ ಏರಿಕೆಯನ್ನು ಸ್ಪಲ್ಪ ಮಟ್ಟಿಗೆ ಸರಿದೂಗಿಸುತ್ತದೆ. ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯುವವರೆಗೆ ಅಥವಾ 2ವರ್ಷಗಳ ಕಾಲ ಸಹಾಯಧ ಧನ, ಕುಟುಂಬದ ಪ್ರತಿ ವ್ಯಕ್ತಿಗೆ ತಲಾ 10 ಕೆಜಿ ಅಕ್ಕಿ ಮತ್ತು ಮಹಿಳೆಯರಿಗೆ ಕೆ.ಎಸ್.ಆರ್.ಟಿ.ಸಿ ಬಸ್ಸುಗಳಲ್ಲಿ ಉಚಿತ ಪ್ರಯಾಣ ಹೀಗೆ 5 ಗ್ಯಾರಂಟಿಗಳನ್ನು ಕಾಂಗ್ರೆಸ್ ಘೋಷಿಸಿದೆ. ಕಾಂಗ್ರೆಸ್ ನೀಡಿರುವುದು ಭರವಸೆಗಳಲ್ಲ, ಗ್ಯಾರಂಟಿಗಳು, ಅವನ್ನು ಈಡೇರಿಸಿಯೇ ತೀರುತ್ತೇವೆ ಎಂದರು.
ಕೆಪಿಸಿಸಿ ವಕ್ತಾರ ಎ.ಎನ್.ನಟರಾಜಗೌಡ ಮಾತನಾಡಿ, ಮೇಕೆದಾಟು ಯೋಜನೆ ಜಾರಿ ಆಗಬಾರದು ಎಂದು ಬಿಜೆಪಿ ಸಂಚು ನಡೆಸುತ್ತಿದೆ. ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಮೇಕೆದಾಟು ಹೋರಾಟ ನಡೆಸಿದರೆ, ತಮಿಳುನಾಡಿನಲ್ಲಿ ಅಲ್ಲಿನ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಪ್ರತಿಭಟನೆ ಮಾಡುತ್ತಾರೆ. ಅದನ್ನು ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ.ರವಿ ಸಮರ್ಥಿಸಿಕೊಳ್ಳುತ್ತಾರೆ. ಒಟ್ಟಾರೆ ಮೇಕೆದಾಟು ಯೋಜನೆ ಜಾರಿಯಾಗಬಾರದು ಎಂಬುದು ಬಿಜೆಪಿಯ ಉದ್ದೇಶ ಎಂದು ದೂರಿದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮೇಕೆದಾಟು ಯೋಜನೆಯನ್ನು ಅನುಷ್ಠಾನಕ್ಕೆ ತರುತ್ತೇವೆ ಎಂದರು.
ಭಜರಂಗದಳ ನಿಷೇದದ ವಿಚಾರದಲ್ಲಿ ಪ್ರತಿಕ್ರಿಯಿಸಿದ ಅವರು ಯಾವುದೇ ಸಂಘಟನೆ ಅಶಾಂತಿಗೆ ಕಾರಣವಾದರೆ ಅಂತಹ ಸಂಘಟನೆಗಳನ್ನು ನಿಷೇಧಿಸುವುದಾಗಿ ತಿಳಿಸಿದರು.