
ಮತ್ತೇ ಡಬಲ್ ಇಂಜೀನ್ ಸರ್ಕಾರ ಅಧಿಕಾರಕ್ಕೆ ತನ್ನಿ – ಪ್ರಮೋದ್ ಸಾವಂತ್
- ಕುಂದಾಪುರದಲ್ಲಿ ಬಿಜೆಪಿ ಮಹಿಳಾ ಮೋರ್ಚದ ಸಮಾವೇಶದಲ್ಲಿ ಗೋವಾ ಸಿಎಂ ಕರೆ
ಕುಂದಾಪುರ: ದೇಶದ ಮತ್ತು ಮಾನವ ಸಂಪನ್ಮೂಲದ ಅಭಿವೃದ್ಧಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಕೇಂದ್ರ ಕೇಂದ್ರ ಸರ್ಕಾರವನ್ನು ಇನ್ನಷ್ಟು ಬಲಪಡಿಸುವುದಕ್ಕಾಗಿ ಕರ್ನಾಟಕದ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಮತ್ತೊಮ್ಮೆ ಗೆಲ್ಲಿಸಬೇಕು, ಈ ಮೂಲಕ ಯಶಸ್ವಿಯಾಗಿರುವ ಡಬ್ಬಲ್ ಇಂಜಿನ್ ಸರ್ಕಾರವನ್ನು ಮತ್ತೇ ಅಧಿಕಾರಕ್ಕೆ ತರಬೇಕು ಎಂದು ಗೋವಾದ ಮುಖ್ಯಮಂತ್ರಿ ಡಾ.ಪ್ರಮೋದ್ ಸಾವಂತ್ ಮನವಿ ಮಾಡಿದ್ದಾರೆ.
ಅವರು ಭಾನುವಾರ ಇಲ್ಲಿನ ಕೋಟೇಶ್ವರದ ಕುರುಕ್ಷೇತ್ರ ಮೈದಾನದಲ್ಲಿ ಉಡುಪಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಆಶ್ರಯದಲ್ಲಿ ನಡೆದ ಮಹಿಳಾ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ದೇಶದಲ್ಲಿ ಪ್ರಪ್ರಥಮ ಬಾರಿಗೆ ಭೇಟಿ ಬಚಾವೋ ಭೇಟಿ ಪಡಾವೋ ಎಂಬ ಘೋಷಣೆಯ ಮೂಲಕ ಮತ್ತು ಪ್ರತಿಮನೆಗೆ ಶೌಚಾಲಯ ಯೋಜನೆಯ ಮೂಲಕ ಪ್ರದಾನಿ ಮೋದಿ ಅವರು ದೇಶದ ಮಹಿಳೆಯ ಪರ ತಮ್ಮ ಬದ್ಧತೆಯನ್ನು ಪ್ರಕಟಿಸಿದ್ದರು. ಮಹಿಳೆಯರಿಗಾಗಿ ಸುಕನ್ಯಾ ಸಮೃದ್ಧಿ ಯೋಜನೆ, ಮುದ್ರಾ ಸಾಲ ಯೋಜನೆ, ತಲಾಕ್ ರದ್ಧತಿ, 26 ವಾರಗಳ ಸಂಬಳಸಹಿತ ಹೆರಿಗೆ ರಜೆಯನ್ನು ನೀಡಿದ್ದಾರೆ. ಇದೀಗ ಮಹಿಳೆಯುರು ಮತ್ತೊಮ್ಮೆ ಮೋದಿ ಸರ್ಕಾರವನ್ನು ಬಲಪಡಿಸಲು ತಮ್ಮ ಬದ್ದತೆಯನ್ನು ತೋರಿಸಬೇಕಾಗಿದೆ ಎಂದರು.
ಮೋದಿ ಮಹಿಳೆಯರ ಹೆಮ್ಮೆ
ಪ್ರಧಾನ ಭಾಷಣ ಮಾಡಿದ ರಾಜ್ಯ ಬಿಜೆಪಿ ನಾಯಕಿ ಮಾಳವಿಕ ಅವಿನಾಶ್, ಮಹಿಳೆಯೊಬ್ಬರು ಪ್ರದಾನಿಯಾಗಿದ್ದರೂ ಅವರ ಅರಿವಿಗೆ ಬಾರದ ಮಹಿಳೆಯರ ಶೌಚಾಲಯ ಸಮಸ್ಯೆಗೆ ಪರಿಹಾರ, ಮನೆಮನೆಗೆ ಕುಡಿವ ನೀರು, ವಿದ್ಯುತ್, ಅಡುಗೆ ಅನಿಲ, ಜನಧನ್ ಖಾತೆಯಂತಹ ಯೋಜನೆಗಳ ಮೂಲಕ ದೇಶದ ಮಹಿಳೆಯರಿಗೆ ಗೌರವ ನೀಡಿದ ಮೋದಿ, ಈ ದೇಶದ ಮಹಿಳೆಯರ ಹೆಮ್ಮೆ ಎಂದರು.
ಭಯೋತ್ಪಾದನೆಯ ವಿರುದ್ಧ ಚುನಾವಣೆ – ಸಚಿವ ಕೋಟ
ಕನ್ನಡ ಶಾಲೆಯ ಮಕ್ಕಳನ್ನು ಗುರಿಯಾಗಿರಿಸಿಕೊಂಡು ಕುಕ್ಕರಿನಲ್ಲಿ ಬಾಂಬ್ ಇಟ್ಟು ಸ್ಪೋಟಿಸುವ ವಿಕೃತ ಮನಸ್ಥಿತಿ, ಭಯೋತ್ಪಾನೆಯ ವಿರುದ್ಧ ಈ ಬಾರಿಯ ಚುನಾವಣೆ ನಡೆಯಲಿದೆ ಎಂದ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಈ ಬಾಂಬ್ ಬ್ಲಾಸ್ಟ್ ನಂತಹ ಘಟನೆಗಳನ್ನು ಕಾಂಗ್ರೆಸ್ ಪಕ್ಷದ ಮುಖಂಡರು ಯಾಕೆ ಖಂಡಿಸುವುದಿಲ್ಲ ಎಂದು ಪ್ರಶ್ನಿಸಿದರು. ಯಾವುದೇ ಕಾರಣಕ್ಕೂ ಅಧಿಕಾರಕ್ಕೂ ಅವರು ಬರಬಾರದು ಎಂದರು.
ರಾಜ್ಯ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಪಕ್ಷದ ನಾಯಕರಾದ ಉದಯಕುಮಾರ ಶೆಟ್ಟಿ, ಕಿರಣ್‌ಕುಮಾರ ಕೊಡ್ಗಿ, ಮಟ್ಟಾರು ರತ್ನಾಕರ ಹೆಗ್ಡೆ, ಶ್ಯಾಮಲಾ ಕುಂದರ್, ನಯನಾ ಗಣೇಶ್, ಗುರ್ಮೆ ಸುರೇಶ್ ಶೆಟ್ಟಿ, ಯಶ್‌ಪಾಲ್ ಸುವರ್ಣ, ಶಂಕರ ಅಂಕದಕಟ್ಟೆ, ಸುರೇಂದ್ರ ಕಾಂಚನ್ ಸಂಗಮ್, ವೀಣಾ ಭಾಸ್ಕರ್ ಮೆಂಡನ್, ಭಾಗೀರಥಿ ಮುರುಳ್ಯಾ, ಸುಪ್ರಸಾದ್ ಶೆಟ್ಟಿ ಬೈಕಾಡಿ, ಗೀತಾಂಜಲಿ ಸುವರ್ಣ, ಕುತ್ಯಾರು ನವೀನ್ ಶೆಟ್ಟಿ, ರೂಪಾ ಪೈ, ವೀಣಾ ವಿ. ನಾಯ್ಕ್, ಮಾಲಿನಿ ಜೆ ಶೆಟ್ಟಿ, ವಸಂತಿ ಸತೀಶ್, ಸರೋಜಾ ಶೆಟ್ಟಿಗಾರ್, ಅನಿತಾ ಶ್ರೀಧರ ಇದ್ದರು.
ಇದೇ ಸಮಾರಂಭದಲ್ಲಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕಿ ಇಂದ್ರಾಕ್ಷೀ ಉಡುಪ ಅವರನ್ನು ಗೌರವಿಸಲಾಯಿತು. ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಪ್ರಾಸ್ತಾವಿಕ ಭಾಷಣ ಮಾಡಿದರು, ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಶೆಟ್ಟಿ ಸ್ವಾಗತಿಸಿದರು, ರಶ್ಮೀತಾ ಶೆಟ್ಟಿ ನಿರೂಪಿಸಿದರು, ಸೌರಭಿ ಪೈ ವಂದಿಸಿದರು.