
ಮದ್ದೂರು ಬಳಿ ಕಾರು ಅಪಘಾತ: ತಾಯಿ ಮಗ ಸಾವು
ಮದ್ದೂರು: ಕೊಡಗಿನಲ್ಲಿ ನಡೆಯುತ್ತಿರುವ ಹಾಕಿ ಉತ್ಸವ ನೋಡಿಕೊಂಡು ಬೆಂಗಳೂರಿಗೆ ತೆರಳುತ್ತಿದ್ದ ವೇಳೆ ಮದ್ದೂರು ಪಟ್ಟಣದ ಹೊರವಲಯದ ಬೆಂಗಳೂರು – ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಅಪಘಾತದಲ್ಲಿ ತಾಯಿ ಮಗ ಮೃತಪಟ್ಟು ತಂದೆ ಗಂಭೀರ ಗಾಯಗೊಂಡಿರುವ ಘಟನೆ ಶುಕ್ರವಾರ ನಡೆದಿದೆ.
ಕೊಡಗು ಮೂಲದ ಬಲಮುರಿ ನಿವಾಸಿಗಳಾದ ಕವಿತಾ (47), ಆಕೆಯ ಪುತ್ರ ಆರ್ಯ ಅಯ್ಯಪ್ಪನ್ (14) ಅಪಘಾತದಲ್ಲಿ ಮೃತಪಟ್ಟಿದ್ದರೆ, ಮುತ್ತಪ್ಪ(53) ತೀವ್ರಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಮುತ್ತಪ್ಪ ಕುಟುಂಬ ಕೊಡಗಿನವರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದರು. ಕೊಡಗಿಗೆ ಆಗಮಿಸಿದ್ದ ಅವರು ನಾಪೋಕ್ಲುನಲ್ಲಿ ನಡೆಯುತ್ತಿದ್ದ ಹಾಕಿ ಪಂದ್ಯಾವಳಿಯನ್ನು ನೋಡಿಕೊಂಡು ಶುಕ್ರವಾರ ಬೆಂಗಳೂರಿಗೆ ತೆರಳುತ್ತಿದ್ದರು.
ಮದ್ದೂರು ಪಟ್ಟಣದ ಹೊರವಲಯದ ಬೆಂಗಳೂರು – ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಮತ್ತು ಗೂಡ್ಸ್ ಟೆಂಪೋ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಈ ಸಂದರ್ಭ ಆರ್ಯ ಅಯ್ಯಪ್ಪನ್ ಸ್ಥಳದಲ್ಲೇ ಮೃತಪಟ್ಟರೆ ತಾಯಿ ಕವಿತಾ ಮಂಡ್ಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ವೇಳೆ ಕೊನೆಯುಸಿರೆಳೆದಿದ್ದಾರೆ. ಕಾರು ಚಾಲನೆ ಮಾಡುತ್ತಿದ್ದ ಪತಿ ಮುತ್ತಪ್ಪ ತೀವ್ರವಾಗಿ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಸ್ಥಳಕ್ಕೆ ಧಾವಿಸಿದ ಸಂಚಾರಿ ಠಾಣಾ ಪಿಎಸ್‌ಐ ಅಯ್ಯನಗೌಡ ಮತ್ತು ಸಿಬ್ಬಂದಿಗಳು ಸಾರ್ವಜನಿಕರ ನೆರವಿನಿಂದ ಗಾಯಾಳುಗಳನ್ನು ಹೊರ ತೆಗೆದು ಆಸ್ಪತ್ರೆಗೆ ಸಾಗಿಸಲು ನೆರವಾದರು. ಈ ಸಂಬಂಧ ಮದ್ದೂರು ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.