ಮನೆಗೆ ನುಗ್ಗಿ 15ಲಕ್ಷ ಮೌಲ್ಯದ ಚಿನ್ನಾಭರಣ ದೋಚಿದ ಕಳ್ಳರು

Spread the love

ಮನೆಗೆ ನುಗ್ಗಿ 15ಲಕ್ಷ ಮೌಲ್ಯದ ಚಿನ್ನಾಭರಣ ದೋಚಿದ ಕಳ್ಳರು

ಚಾಮರಾಜನಗರ: ಜನನಿಬಿಡ ಬಡಾವಣೆಯಲ್ಲಿಯೇ ಕಳ್ಳರು ಮನೆಗೆ ಕನ್ನ ಹಾಕಿ‌ರುವ ಘಟನೆ ಚಾಮರಾಜನಗರದ ರಾಘವೇಂದ್ರ ಬಡಾವಣೆಯಲ್ಲಿ ನಡೆದಿದೆ.

ನಗರದ ರಾಘವೇಂದ್ರ ಚಿತ್ರಮಂದಿರದ ಎದುರಿನ ಶೋಭಾ ಎಂಬವರ ಮನೆಗೆ ಕಳ್ಳರು ನುಗ್ಗಿದ್ದು, ಮಗಳ ಮದುವೆಗೆಂದು ಮಾಡಿಸಿಟ್ಟಿದ್ದ 15 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಮುಂದಿನ ಬಾಗಿಲು ಮೀಟಿ, ಒಳನುಗ್ಗಿ ಹಿಂದಿನ ಬಾಗಿಲಿನಲ್ಲಿ ಹೊತ್ತೊಯ್ದಿದ್ದಾರೆ.

ಶೋಭಾರ ಪತಿ ಇತ್ತೀಚೆಗೆ ನಿಧನ ಹೊಂದಿದ್ದು, ಅವರು ಏಕಾಂಗಿಯಾಗಿ ವಾಸಿಸುತ್ತಿದ್ದರು. ಮಗಳ‌ ಮದುವೆಗೆಂದು 3 ನೆಕ್ಲೇಸ್, 2 ಜೊತೆ ಬಳೆ, 2 ಸರ, 30 ಜೊತೆ ಓಲೆ, 10 ಉಂಗುರ ಹಾಗೂ ಮುಕ್ಕಾಲು ಕೆಜಿಯಷ್ಟು ಬೆಳ್ಳಿ ಸಾಮಗ್ರಿ ಸೇರಿ ರೂ.15 ಲಕ್ಷಕ್ಕೂ ಅಧಿಕ ಮೌಲ್ಯದ ಸ್ವತ್ತನ್ನು ಮನೆಯ ಬೀರುವಿನಲ್ಲಿಟ್ಟಿದ್ದರು. ಶೋಭಾ ಅವರು ಹಬ್ಬಕ್ಕಾಗಿ ಆಲೂರಿಗೆಂದು ತೆರಳಿದ್ದ ವೇಳೆ ಕಳ್ಳರು ಹೊಂಚು ಹಾಕಿ ಮುಂಬಾಗಿಲು ಮೀಟಿ ಕೃತ್ಯ ಎಸಗಿದ್ದಾರೆ. ಅಕ್ಕಪಕ್ಕದ ಮನೆಗಳು, ಎದುರಿಗೆ ಥಿಯೇಟರ್, ಮುಖ್ಯರಸ್ತೆ ಇದ್ದರೂ ಕಳ್ಳರು ರಾಜಾರೋಷವಾಗಿ ಕಳವು ಮಾಡಿದ್ದಾರೆ.

ಕೇವಲ ಒಂದು ಸ್ಕ್ರೂ ಡ್ರೈವರ್ ಸಹಾಯದಿಂದ ಇಂಟರ್ ಲಾಕ್ ಬಾಗಿಲು ಮೀಟಿರುವ ಕಳ್ಳರು ಚಿನ್ನ ಕದ್ದು ಸ್ಕ್ರೂ ಡ್ರೈವರ್ ಅನ್ನು ಮನೆಯಲ್ಲೇ ಎಸೆದು ಹೋಗಿದ್ದಾರೆ. ಪರಿಚಿತರೊಬ್ಬರು ಮನೆಗೆ ಬಾಗಿಲು ಹಾಕದೇ ಊರಿಗೆ ಹೋಗಿದ್ದೀರಲ್ಲಾ? ಎಂದು ಫೋನ್ ಮಾಡಿ ಕೇಳಿದಾಗ ಘಟನೆ ಬೆಳಕಿಗೆ ಬಂದಿದೆ.

ಬ್ಯಾಂಕ್ ಲಾಕರ್ನಲ್ಲಿ ಚಿನ್ನ ಇಡುವ ಜೊತೆಗೆ ಎಲ್ಲಿಗಾದರೂ ಹೋಗುವಾಗ ಬೀಟ್ ಪೊಲೀಸರ ಗಮನಕ್ಕೆ ತರದೇ ಇದ್ದಾಗ ಈ ರೀತಿಯ ಘಟನೆಗಳು ಸಂಭವಿಸುತ್ತವೆ. ಮನೆಗೆ ಎಎಸ್ಪಿ ಉದೀಶ್, ಡಿವೈಎಸ್ಪಿ ಪ್ರಿಯದರ್ಶಿನಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶ್ವಾನ ತಂಡ ಹಾಗೂ ಬೆರಳಚ್ಚು ತಜ್ಞರು ಸಹ ತನಿಖೆಗೆ ನೆರವಾಗುತ್ತಿದ್ದಾರೆ. ಈ ಬಗ್ಗೆ ಚಾಮರಾಜನಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love