
ಮನೆದೇವರು ಸಿದ್ದರಾಮಯ್ಯಗೆ ಹೇಳಿದ್ದೇನು?
ಮಂಡ್ಯ: ವಿಧಾನಸಭಾ ಚುನಾವಣಾ ವಿಚಾರಕ್ಕೆ ಸಂಬಂಧಿಸಿದಂತೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಮನೆದೇವರಾದ ಚಿಕ್ಕತಾಯಮ್ಮ ಎಚ್ಚರಿಕೆ ನೀಡಿರುವುದು ಬೆಳಕಿಗೆ ಬಂದಿದೆ.
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಚುನಾವಣೆ ಭವಿಷ್ಯ ಕುರಿತಂತೆ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರು ಮಳವಳ್ಳಿ ತಾಲೂಕಿನ ಚೊಟ್ಟನಹಳ್ಳಿ ಗ್ರಾಮದ ಆದಿನಾಡು ಚಿಕ್ಕತಾಯಮ್ಮ ದೇವರ ಸನ್ನಿಧಾನಕ್ಕೆ ತೆರಳಿ ದೇವಿಯ ಮುಂದೆ ಪ್ರಸ್ತಾಪವಿಟ್ಟಾಗ ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಒಂದೇ ಕಡೆ ಸ್ಪರ್ಧಿಸಿದರೆ ಭವಿಷ್ಯವಿಲ್ಲ ಎಂದು ಭವಿಷ್ಯ ನುಡಿದಿದೆ.
ಇತ್ತಿಚೆಗಷ್ಟೇ ಕೋಲಾರದಿಂದಲೇ ಸ್ಪರ್ಧಿಸುವುದಾಗಿ ಸಿದ್ದರಾಮಯ್ಯ ಅವರು ಅಧಿಕೃತವಾಗಿ ಪ್ರಕಟಿಸಿದ್ದರು. ಈಗ ಅವರ ಮನೆ ದೇವರು ಎರಡೂ ಕಡೆ ಸ್ಪರ್ಧಿಸುವಂತೆ ಹೇಳಿರುವುದು ಸಿದ್ದರಾಮಯ್ಯ ಅವರನ್ನು ಮತ್ತಷ್ಟು ಗೊಂದಲಕ್ಕೆ ಸಿಲುಕುವಂತೆ ಮಾಡಿದೆ. ಅಲ್ಲದೆ ಒಮ್ಮೆ ಸನ್ನಿಧಾನಕ್ಕೆ ಬಂದು ಹೋಗುವಂತೆಯೂ ಸಿದ್ದರಾಮಯ್ಯ ಅವರಿಗೆ ತಿಳಿಸಿದೆ.
ಸಿದ್ದರಾಮಯ್ಯ ಒಂದೇ ಕಡೆ ನಿಂತರೆ ಬಲವಿಲ್ಲ. ಎರಡು ಕ್ಷೇತ್ರದಲ್ಲಿ ನಿಲ್ಲಬೇಕು. ನಿಮಗೆ ಪ್ರಬಲ ಶಕ್ತಿಗಳ ವಿರೋಧ ಇದೆ. ಒಂದು ಕಡೆ ಬಾಹುಬಲ ಚಾಚಿದರೆ ಆಗಲ್ಲ. ಅರ್ಥ ಆಯ್ತೇನಪ್ಪ. ಬಾಹುಬಲ ಎರಡು ಕಡೆ ಚಾಚಬೇಕು. ಒಂದು ಕಡೆ ಚಾಚಿದರೆ ತಪ್ಪಾಗುತ್ತೆ, ಅರ್ಥ ಮಾಡ್ಕೊಳ್ಳಿ. ಎರಡು ಕಡೆ ಚಾಚಿದರೆ ನಾನು ಗೆಲ್ಲಿಸಿಕೊಂಡು ಬರ್ತೀನಿ ಎಂದು ದೇವರು ಸೂಚನೆ ನೀಡಿದೆ.
ನಾನು ನಿಮ್ಮ ಮನೆಯ ಮೂಲದೇವರು. ನಾನು ನಿಮ್ಮ ಮನೆ ದೇವತೆ ಗೊತ್ತಾ ಬೇಕಾದ್ರೆ ಅವಕಾಶ ಸಿಕ್ಕಿದ್ರೆ ಯಾವಾಗಾದ್ರು ಬಂದು ನನ್ನ ಆಶೀರ್ವಾದ ತೆಗೆದುಕೊಂಡು ಹೋಗಲು ಹೇಳು ಎಂದು ದೇವಾಲಯದ ಅರ್ಚಕ ಡಾ. ಲಿಂಗಣ್ಣ ಮೈ ಮೇಲೆ ಬಂದ ಶಕ್ತಿ ದೇವತೆ ಸಲಹೆ ನೀಡಿದೆ. ಸಿದ್ದು ಪುತ್ರ ಡಾ.ಯತೀಂದ್ರ ಅವರು ದೇವಾಲಯಕ್ಕೆ ಬಂದು ಪೂಜೆ ಸಲ್ಲಿಸುವ ವೇಳೆ ದೇವರು ಈ ಸೂಚನೆ ನೀಡಿದೆ. ಈ ವೇಳೆ ಯತೀಂದ್ರ ಸಿದ್ದರಾಮಯ್ಯ ಅವರೊಂದಿಗೆ ಮಾಜಿ ಸಚಿವ ಪಿ.ಎಂ.ನರೇಂದ್ರಸ್ವಾಮಿ ಇದ್ದರು.
ಇದೀಗ ಈ ವಿಚಾರ ಭಾರೀ ಸುದ್ದಿ ಮಾಡುತ್ತಿದ್ದು, ಸಿದ್ದರಾಮಯ್ಯ ಅವರು ಈ ವಿಚಾರಕ್ಕೆ ಸಂಬಂಧಿಸಿದಂತೆ ಯಾವ ರೀತಿಯ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.