ಮನೆಯಲ್ಲಿಯೇ ಮತದಾನ ಹಕ್ಕು ಚಲಾಯಿಸಿದ ಹಿರಿಯ ನಾಗರೀಕರು, ವಿಕಲಚೇತನರು

Spread the love

ಮನೆಯಲ್ಲಿಯೇ ಮತದಾನ ಹಕ್ಕು ಚಲಾಯಿಸಿದ ಹಿರಿಯ ನಾಗರೀಕರು, ವಿಕಲಚೇತನರು

ಉಡುಪಿ: ವಿಧಾನಸಭಾ ಸಾರ್ವತ್ರಿಕ ಚುನಾವಣೆ 2023 ಕ್ಕೆ ಸಂಬಂದಿಸಿದಂತೆ , ಚುನಾವಣಾ ಆಯೋಗವು ಇದೇ ಮೊದಲ ಬಾರಿಗೆ 80 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಮತ್ತು ವಿಕಲಚೇತನರಿಗೆ ಮನೆಯಿಂದಲೇ ಮತದಾನ ಮಾಡುವ ವಿಶೇಷ ಸೌಲಭ್ಯ ಒದಗಿಸಿದ್ದು, ಈ ಸೌಲಭ್ಯವನ್ನು ಜಿಲ್ಲೆಯ ಹಿರಿಯ ನಾಗರೀಕರು ಮತ್ತು ವಿಕಲಚೇತನರು ಸದುಪಯೋಗಪಡಿಸಿಕೊಂಡರು.

ಜಿಲ್ಲೆಯಲ್ಲಿ ಇಂದಿನಿAದ ಆರಂಭಗೊಂಡ ಮನೆಯಿಂದಲೇ ಮತದಾನ ಮಾಡುವ ವಿಶೇಷ ಸೌಲಭ್ಯವನ್ನು ಹಲವು ಮಂದಿ ಹಿರಿಯ ನಾಗರೀಕರು ಮತ್ತು ವಿಕಲಚೇತನರು ಪಡೆದುಕೊಂಡರು.

ಉಡುಪಿ ವಿಧಾನ ಸಭಾ ಕ್ಷೇತ್ರದ ಸೆಕ್ಟರ್ 17 ರಲ್ಲಿ ಕಿದಿಯೂರು ಗ್ರಾಮದ 83 ವರ್ಷದ ಸುನಂದ ಭಟ್ ತಮ್ಮ ಸೊಸೆ ಶೋಭಾ ವಿ ಭಟ್ ಅವರ ಸಹಕಾರದಿಂದ ಮನೆಯಿಂದಲೇ ತಮ್ಮ ಹಕ್ಕು ಚಲಾಯಿಸಿದರು. ಕಿದಿಯೂರು ಗ್ರಾಮದ 87 ವರ್ಷದ ಸೀತಾರಾಮ ಭಟ್ ಮತ್ತು 81 ವರ್ಷದ ಉಷಾ ಭಟ್ ದಂಪತಿಗಳು ಮನೆಯವರ ಸಹಕಾರ ಪಡೆಯದೇ ತಾವೇ ಸ್ವಯಂ ಮತ ಚಲಾಯಿಸಿ, ತಮ್ಮ ಹಕ್ಕು ಚಲಾಯಿಸಿದ ಹೆಮ್ಮಯಿಂದ ಮತಪತ್ರವನ್ನು ಮತಗಟ್ಟೆಗೆಗೆ ಹಾಕಿದರು.

ಮತದಾನ ಮಾಡಿದ ನಂತರ ಮಾತನಾಡಿದ ಸೀತಾರಾಮ ಭಟ್, ವಯೋ ಸಹಜತೆಯಿಂದ ನಡೆಯಲು ತುಂಬಾ ಕಷ್ಟಕರವಾಗಿದ್ದು, ಮತದಾನ ಕೇಂದ್ರಕ್ಕೆ ತೆರಳುವುದು ಅಸಾಧ್ಯವಾಗಿತ್ತು, ಈ ಸೌಲಭ್ಯದಿಂದ ಅನುಕೂಲವಾಗಿದ್ದು, ಮನೆಯಿಂದಲೇ ತನ್ನ ಹಕ್ಕು ಚಲಾಯಿಸಿದ್ದು ಸಂತಸ ತಂದಿದೆ ಎಂದರು.

ಇಂದು ಮತದಾನ ಕಾರ್ಯಕ್ರಮಕ್ಕೆ ಮನೆಗೆ ಆಗಮಿಸುವ ಕುರಿತಂತೆ , ಮುಂಚಿತವಾಗಿಯೇ ಬಿ.ಎಲ್.ಓ ಗಳ ಮೂಲಕ ಮತದಾರರಿಗೆ ಮಾಹಿತಿ ನೀಡಿದ್ದು, ಅಗತ್ಯ ಗುರುತು ದಾಖಲೆಗಳನ್ನು ಸಿದ್ದವಾಗಿಟ್ಟುಕೊಳ್ಳುವಂತೆ ಹಾಗೂ ಅನಿವಾರ್ಯ ಮತ್ತು ತುರ್ತು ಸಂದರ್ಭ ಹೊರತುಪಡಿಸಿ ಹೊರಗೆ ತೆರಳದೇ ಮನೆಯಲ್ಲಿಯೇ ಇರುವಂತೆ ತಿಳಿಸಲಾಗಿತ್ತು.

ಮತದಾನ ಪೆಟ್ಟಿಗೆ ಮತ್ತು ಮತದಾನ ಪ್ರಕ್ರಿಯೆಗೆ ಅಗತ್ಯವಿದ್ದ ಉಪಕರಣಗಳೊಂದಿಗೆ ಬಿ.ಎಲ್.ಓ ಅವರ ನೆರವಿನಿಂದ ಹಿರಿಯ ನಾಗರೀಕರು ಮತ್ತು ವಿಕಲಚೇತನ ಮತದಾರರ ಮನೆಗೆ ತೆರಳಿ, ಚುನಾವಣಾ ಆಯೋಗ ನೀಡಿದ ಎಲ್ಲಾ ನಿರ್ದೇಶನಗಳನ್ನು ಯಥಾವತ್ತಾಗಿ ಪಾಲಿಸಿ, ಯಾವುದೇ ಸಂದರ್ಭದಲ್ಲೂ ಮತದಾನದ ಗೌಪ್ಯತೆ ಉಲ್ಲಂಘನೆ ಆಗದಂತೆ ಅತ್ಯಂತ ವ್ಯವಸ್ಥಿತ ರೀತಿಯಲ್ಲಿ ಕಾರ್ಯನಿರ್ವಹಿಸಲಾಯಿತು.

ಮತಗಟ್ಟ್ಟೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಸುದಿನ ಅವರು, ಮತದಾನ ಮಾಡುವ ಪ್ರಕ್ರಿಯೆಯಗಳ ಕುರಿತು ಹಿರಿಯ ನಾಗರೀಕರಿಗೆ ಸಂಪೂರ್ಣ ಮಾಹಿತಿ ನೀಡಿ, ಮತದಾರರು ಯಾವುದೇ ಗೊಂದಲಗಳಿಗೆ ಒಳಗಾಗದೇ ಮತದಾನ ಮಾಡುವಂತೆ ತಿಳಿಸಿದರು.

ಮೈಕ್ರೋ ಅಬ್ಸರ್ವರ್ ತರುಣ್ ಕುಮಾರ್, ಸಹಾಯಕ ಮತಗಟ್ಟ ಅಧಿಕಾರಿ ವಿಷ್ಣು ಮೊಗೇರಾ , ಬಿ.ಎಲ್.ಓ ಗೀತಾ ಮತದಾನ ಪ್ರಕ್ರಿಯೆಯಲ್ಲಿ ಸಹಕರಿಸಿದರು.


Spread the love