
ಮನೆಯಲ್ಲಿ ನಿಧಿ ಶೋಧನೆ ಮಾಡಿದವರು ನಾಪತ್ತೆ
ಚಾಮರಾಜನಗರ: ಜ್ಯೋತಿಷಿ ತೋರಿಸಿದ ನಿಧಿಯಾಸೆಗೆ ಮಹಿಳೆಯೊಬ್ಬರು ಕುಟುಂಬದೊಂದಿಗೆ ಸೇರಿ ಮನೆಯೊಳಗೆ 20 ಅಡಿ ಆಳದ ಗುಂಡಿ ತೋಡಿದ ಘಟನೆ ಜಿಲ್ಲೆಯ ಹನೂರು ತಾಲೂಕಿನ ವಿ.ಎಸ್.ದೊಡ್ಡಿ ಗ್ರಾಮದಲ್ಲಿ ನಡೆದಿದೆ.
ಭಾಗ್ಯ ಎಂಬವರ ಮನೆಯಲ್ಲಿ ಈ ಘಟನೆ ನಡೆದಿದ್ದು, ನಿಧಿಯಾಸೆಗೆ ಗುಂಡಿ ತೋಡಿದ ಮಾಹಿತಿ ಜನರಿಗೆ ತಿಳಿಯುತ್ತಿದ್ದಂತೆಯೇ ಮನೆಯಲ್ಲಿದ್ದವರು ನಾಪತ್ತೆಯಾಗಿದ್ದು, ಅವ ಪತ್ತೆಗೆ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ವಿ.ಎಸ್.ದೊಡ್ಡಿ ಗ್ರಾಮದ ನಿವಾಸಿ ಭಾಗ್ಯ ಹೊಸ ಮನೆ ನಿರ್ಮಿಸಿದ್ದರು. ಆದರೆ, ವಾಸ್ತು ಸರಿಯಿಲ್ಲ ಎಂಬ ಕಾರಣಕ್ಕೆ ಮನೆ ತೊರೆದು ಬೆಂಗಳೂರಿಗೆ ಆಗಮಿಸಿದ್ದರು. ಬೆಂಗಳೂರಿನಲ್ಲಿ ತಳ್ಳುವ ಗಾಡಿಯಲ್ಲಿ ಮಜ್ಜಿಗೆ, ಜ್ಯೂಸ್ ವ್ಯಾಪಾರ ಮಾಡಿಕೊಂಡಿದ್ದರು. ಈ ಸಂದರ್ಭದಲ್ಲಿ ಸಹೋದರಿಯ ಸಂಬಂಧಿ ಪರಶಿವ ಎಂಬವರು ಭಾಗ್ಯ ಅವರಿಗೆ ಸ್ಥಳೀಯ ಜ್ಯೋತಿಷಿಯೊಬ್ಬರಲ್ಲಿಗೆ ಕರೆದುಕೊಂಡು ಹೋಗಿ ಮನೆಯ ಕುರಿತು ಶಾಸ್ತ್ರ ಕೇಳಿಸಿದ್ದರಂತೆ. ಆಗ ಜ್ಯೋತಿಷಿ ಮನೆಯಲ್ಲಿ ನಿಧಿ ಇದೆ ಎಂದು ತಿಳಿಸಿದ್ದಾನೆ.
ಜ್ಯೋತಿಷಿ ಮಾತು ನಂಬಿದ ಭಾಗ್ಯ, ಮನೆಯಲ್ಲಿ ನಿಧಿ ಶೋಧಿಸಲು ಅನುಮತಿ ನೀಡಿದ್ದರು. ಜ್ಯೋತಿಷಿ ತನ್ನ ಸಹಚರರೊಂದಿಗೆ ಕಳೆದ ವಾರದ ಹಿಂದೆ ವಿ.ಎಸ್.ದೊಡ್ಡಿ ಗ್ರಾಮದಲ್ಲಿರುವ ಮನೆಗೆ ಬಂದು ಭಾಗ್ಯ ಅವರ ಸಮ್ಮುಖದಲ್ಲೇ ರಾತ್ರಿ ಮನೆಯಲ್ಲಿ ಕಳಸವಿಟ್ಟು ವಿಶೇಷ ಪೂಜೆ ನೆರವೇರಿಸಿದ್ದಾನೆ. ಯಾರಿಗೂ ತಿಳಿಯದಂತೆ ಗುಂಡಿ ತೆಗೆಯುವ ಕಾರ್ಯ ಆರಂಭಿಸಿದ್ದಾನೆ. 3 ಅಡಿ ಅಗಲ ಹಾಗೂ 20 ಅಡಿ ಆಳ ಗುಂಡಿ ತೆಗೆದಿದ್ದು, ಶೋಧ ಕಾರ್ಯ ಮುಂದುವರಿದಿತ್ತು. ಈ ವಿಚಾರ ಸ್ಥಳೀಯರಿಗೆ ತಿಳಿದು ಬಂದಿದೆ. ಅವರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಭಾಗ್ಯ, ಜ್ಯೋತಿಷಿ ಹಾಗೂ ಇನ್ನಿತರರು ನಾಪತ್ತೆಯಾಗಿದ್ದಾರೆ.