
ಮನೆಯಿಂದಲೇ ಮತದಾನಕ್ಕೆ ಉತ್ತಮ ಪ್ರತಿಕ್ರಿಯೆ
ಮೈಸೂರು: 80 ವರ್ಷ ಮೇಲ್ಪಟ್ಟವರು ಹಾಗೂ ಅಂಗವೈಕಲ್ಯದಿಂದ ಬಳಲುತ್ತಿರುವವರಿಗೆ ಅನುಕೂಲ ಮಾಡಿಕೊಡಲೆಂದು ಇದೇ ಮೊದಲ ಬಾರಿಗೆ ಮನೆಯಿಂದಲೇ ಮತದಾನ ನಡೆಸುವ ಪ್ರಕ್ರಿಯೆ ಆರಂಭಗೊಂಡಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮೇ 6ರವರೆಗೂ ಮತದಾನಕ್ಕೆ ಅವಕಾಶವಿದೆ.
ಜಿಲ್ಲೆಯಲ್ಲಿ 80 ವರ್ಷ ಮೇಲ್ಪಟ್ಟ 85,514 ಹಿರಿಯ ಮತದಾರರಿದ್ದು, 30,883 ಅಂಗವಿಕಲರಿದ್ದಾರೆ. 80 ವರ್ಷ ಮೇಲ್ಪಟ್ಟವರ ಪೈಕಿ 2,407 ಮಂದಿ ಹಾಗೂ ಅಂಗವಿಕಲರ ಪೈಕಿ 402 ಮಂದಿ ಮನೆಯಿಂದಲೇ ಮತದಾನಕ್ಕೆ ಅವಕಾಶ ನೀಡುವಂತೆ ಚುನಾವಣಾ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಅರ್ಜಿ ನೀಡಿದವರ ಮನೆಗಳಿಗೆ ಶನಿವಾರವೇ ಚುನಾವಣಾ ಅಧಿಕಾರಿಗಳು ಭೇಟಿ ನೀಡಿ ಮತದಾನ ಪ್ರಕ್ರಿಯೆಗೆ ಚಾಲನೆ ನೀಡಿದರು. ಚುನಾವಣಾ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಎಲ್ಲ ರಾಜಕೀಯ ಪಕ್ಷಗಳಿಗೂ ತಿಳಿಸುವ ವ್ಯವಸ್ಥೆ ಮಾಡಲಾಗುತ್ತದೆ.
ಜಿಲ್ಲೆಯಲ್ಲಿ 135 ಚುನಾವಣಾ ತಂಡಗಳು ಪ್ರಕ್ರಿಯೆಯಲ್ಲಿ ತೊಡಗಿಸಿ ಕೊಂಡಿದ್ದು, 11 ಕ್ಷೇತ್ರಗಳಿಗೆ 158 ವಿವಿಧ ಮಾರ್ಗಗಳ ಮೂಲಕ ತೆರಳಲಿದ್ದಾರೆ. ವಯಸ್ಸಿನ ಕಾರಣದಿಂದ, ಅನಾರೋಗ್ಯಕ್ಕೆ ತುತ್ತಾದವರಿಗೆ ಈ ಅವಕಾಶ ಸಿಗಲಿದೆ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.
ಐವರು ಸದಸ್ಯರುಳ್ಳ ತಂಡವನ್ನು ಜಿಲ್ಲಾಡಳಿತ ನಿಯೋಜಿಸಿದೆ. ಮೂವರು ಚುನಾವಣಾ ಸಿಬ್ಬಂದಿ, ಒಬ್ಬ ವಿಡಿಯೊಗ್ರಾಫರ್, ಪೊಲೀಸ್ ಕಾನ್‌ಸ್ಟೆಬಲ್ ಇರಲಿದ್ದು ಸಂಪೂರ್ಣ ಪ್ರಕ್ರಿಯೆ ವಿಡಿಯೊ ರೆಕಾರ್ಡ್ ಮಾಡಲಾಗುತ್ತದೆ. ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡುವ ಮಾಹಿತಿಯನ್ನು ಮತದಾರರಿಗೂ ಎಸ್‌ಎಂಎಸ್ ಮೂಲಕ ಮುಂಚಿತವಾಗಿ ತಿಳಿಸಲಾಗುತ್ತದೆ.
ಮನೆಗೆ ಭೇಟಿ ನೀಡಿದ ತಕ್ಷಣ ತಂಡವು ಮತದಾರರ ಗುರುತಿನ ಚೀಟಿ ಪರಿಶೀಲಿಸಿ, 12ಡಿ ಅರ್ಜಿಯನ್ನು ನೀಡಿ ಒಪ್ಪಿಗೆ ಪತ್ರ ಪಡೆದುಕೊಳ್ಳುತ್ತದೆ. ನಂತರ ಮತ ಚೀಟಿಯನ್ನು ನೀಡಿ, ಗೋಪ್ಯ ಮತದಾನ ನಡೆಸಿ, ಕವರ್‌ನಲ್ಲಿ ಇಡಲಾಗುತ್ತದೆ. ತುರ್ತು ಸಂದರ್ಭದ ನಿಮಿತ್ತ ಮತದಾರ ಹೊರಹೋಗಿದ್ದರೆ, ಎರಡನೇ ಬಾರಿ ಅವಕಾಶ ನೀಡಲಾಗುತ್ತದೆ. ಆಗಲೂ ಸಿಗದಿದ್ದರೆ, ಮತ್ತೆ ಮತದಾರರ ಮನೆಗೆ ಸಿಬ್ಬಂದಿ ಭೇಟಿ ನೀಡುವುದಿಲ್ಲ.
ಮನೆಯಿಂದಲೇ ಮತದಾನಕ್ಕೆ ಅವಕಾಶ ನೀಡಿದ ಆಯೋಗದ ನಿರ್ಧಾರಕ್ಕೆ ಹಿರಿಯ ನಾಗರಿಕರು ಸಂತಸ ವ್ಯಕ್ತಪಡಿಸಿದರು.
ಮೈಸೂರಿನ ಕೆ.ಆರ್.ಮೊಹಲ್ಲಾದ ಪದ್ಮಮ್ಮ ಅವರು ಅನಾರೋಗ್ಯದಿಂದ ಓಡಾಡಲು ಸಾಧ್ಯವಾಗುತ್ತಿರಲಿಲ್ಲ. ಮತ ಚಲಾಯಿಸಲು ಮತಗಟ್ಟೆಗೆ ತೆರಳಲು ಪ್ರಯಾಸ ಪಡಬೇಕಾಗಿತ್ತು. ಮನೆಯಿಂದ ಮತದಾನಕ್ಕೆ ಅವಕಾಶ ಸಿಕ್ಕಿರುವುದು ತುಂಬಾ ಸಹಾಯವಾಯಿತು ಎಂದು ಕುಟುಂಬದ ಸದಸ್ಯರು ಖುಷಿಪಟ್ಟರು.