ಮನೆ ಇಲ್ಲ‌. ಸ್ನಾನಗೃಹ, ಶೌಚಾಲಯ ಇಲ್ಲವೇ ಇಲ್ಲ: ಮುರುಕಲು ಮನೆಯಲ್ಲಿ ಮಡುಗಟ್ಟಿದೆ ಹೆಣ್ಣುಮಕ್ಕಳ ಕಣ್ಣೀರು!

Spread the love

ಮನೆ ಇಲ್ಲ‌. ಸ್ನಾನಗೃಹ, ಶೌಚಾಲಯ ಇಲ್ಲವೇ ಇಲ್ಲ: ಮುರುಕಲು ಮನೆಯಲ್ಲಿ ಮಡುಗಟ್ಟಿದೆ ಹೆಣ್ಣುಮಕ್ಕಳ ಕಣ್ಣೀರು!

ಬೈಂದೂರು: ಅದು ಪಶ್ಚಿಮ ಘಟ್ಟದ ಸೆರಗಿನ ಒಂದು ಪುಟ್ಟ ಊರು. ಬಯಲು ಶೌಚಮುಕ್ತವೆಂಬ ಹೆಗ್ಗಳಿಕೆಗೆ ಪಾತ್ರವಾದ ಆ ಊರಲ್ಲಿ ತಾಯಿ-ಮಕ್ಕಳು ಬಹಿರ್ದೆಸೆಗೆ ಹೋಗಬೇಕಿದ್ದರೆ ಅರಣ್ಯವನ್ನೇ ಆಶ್ರಯಿಸಿದ್ದಾರೆ. ಹರಿದ ಸೀರೆ ತುಂಡು, ಟರ್ಪಾಲ್‌ ಹೊದಿಕೆಯೇ ಸ್ನಾನಗೃಹ. ಕನಿಷ್ಠ ಮೂಲಭೂತ ಸೌಕರ್ಯಗಳಿಲ್ಲದೆ ತನ್ನ ನಾಲ್ವರು ಮಕ್ಕಳೊಂದಿಗೆ ದಯನೀಯ ಸ್ಥಿತಿಯಲ್ಲಿ ಬದುಕು ಕಟ್ಟಿಕೊಳ್ಳೂತ್ತಿರುವ ಆ ಮಹಿಳೆಯ ನೆರವಿಗೆ ಸರ್ಕಾರಗಳು ಇದುವರೆಗೂ ಮುಂದಾಗಿಲ್ಲ.

ಬೈಂದೂರು ವಿಧಾನಸಭಾ ಕ್ಷೇತ್ರದ ಜಡ್ಕಲ್‌ ಗ್ರಾಪಂ ವ್ಯಾಪ್ತಿಯ ಬೀಸಿನಪಾರೆ-ಚಟ್‌ ಪಾರೆಯ ಮುಸ್ಲಿಂ ಸಮುದಾಯದ ಮಹಿಳೆ ಸಲೀಮಾ ತಮ್ಮ ನಾಲ್ವರು ಮಕ್ಕಳೊಂದಿಗೆ ಸುಮಾರು 25 ವರ್ಷಗಳಿಂದ ವಾಸವಾಗಿದ್ದಾರೆ.

ತನ್ನ ಪತಿಯೊಂದಿಗೆ ಸಾಲಪಡೆದು ಮಣ್ಣಿನ ಇಟ್ಟಿಗೆ ತಯಾರಿಸಿ ರಾತ್ರಿ ಹಗಲೆನ್ನದೇ ದುಡಿದು ಕಟ್ಟಿದ ಮನೆ ನೆಲಸಮಗೊಳ್ಳುವ ದುಃಸ್ಥಿಗೆ ಬಂದು ತಲುಪಿದೆ. ಪತಿ ನಿಧನದ ಬಳಿಕ ಬಿದ್ದ ಸೂರಿಗೆ ಮುಸ್ಲಿಂ ಸಮುದಾಯದ ಯುವಕರು ಸ್ವಯಂ ಸೇವಕರಾಗಿ ಬಂದು ಮತ್ತೆ ತಗಡಿನ ಶೀಟ್‌ ಹೊದಿಸಿ ತಾತ್ಕಾಲಿಕ ವ್ಯವಸ್ಥೆ ಮಾಡಿಕೊಟ್ಟಿದ್ದು ಬಿಟ್ಟರೆ ಇದುವರೆಗೆ ಈ ಅಸಹಾಯಕ ಕುಟುಂಬಕ್ಕೆ ವಸತಿ ಕಲ್ಪಿಸಲು ಯಾರೂ ಮುಂದಾಗಿಲ್ಲ.

ಕಳೆದ ಒಂದು ವರ್ಷ ಹಿಂದೆ ಕೊಲ್ಲೂರು ಪಿಯು ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಮೂರನೇ ಮಗಳು ಶಕಿನಾ ಆರ್ಥಿಕ ಸಮಸ್ಯೆಗಳಿಂದಾಗಿ ವಿದ್ಯಾಭ್ಯಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿದ್ದಾಳೆ. ಓದಲು ಉತ್ಕಟವಾದ ಮನಸ್ಶಿರುವ ಶಕಿನಾಗೆ ಕಾಲೇಜಿಗೆ ಹೋಗಿ ಬಸ್‌ ಗೆ ಹಣವಿಲ್ಲದೆ ಅಸಹಾಯಕಳಾಗಿ ಓದು ಅರ್ಧದಲ್ಲೇ ನಿಲ್ಲಿಸಿದ್ದಾಳೆ. ಮ್ಯಾಂಗಲೋರಿಯನ್‌ ಪ್ರತಿನಿಧಿಯೊಂದಿಗೆ ತನ್ನ ಓದು ಮುಂದುವರೆಸುವ ಆಕಾಂಕ್ಷೆ ವ್ಯಕ್ತಪಡಿಸಿದ ಶಕಿನಾಳ ಶಿಕ್ಷಣಕ್ಕೆ ನೆರವಾಗಲು ದಾನಿಗಳು ಮುಂದೆ ಬರಬೇಕಿದೆ.

25 ವರ್ಷಗಳ ಹಿಂದೆ ಮಂಜೂರುಗೊಂಡ ಶೌಚಾಲಯಕ್ಕೆ ಸಿಕ್ಕಿದ್ದು ಕೇವಲ 1200 ರೂ. ಅರ್ಧಕ್ಕೆ ನಿಂತ ಶೌಚಾಲಯಕ್ಕೆ ಇದುವರೆಗೂ ಕಾಯಕಲ್ಪ ಸಿಕ್ಕಿಲ್ಲ. ಇರಲೊಂದು ಸುಭದ್ರ ಮನೆ ಹಾಗೂ ಶೌಚಾಲಯ ಬೇಡಿಕೆ ಯಾರಿಗೂ ಕೇಳಿಲ್ಲ. ರೇಶನ್‌. ವಿದ್ಯುತ್‌ ಬಿಟ್ಟರೆ ಸರಕಾರದಿಂದ ಇವರಿಗೆ ಸಿಕ್ಕಿದ್ದು ಏನೂ ಇಲ್ಲ.

ಪತಿ ನಿಧನದ ಬಳಿಕ ಅನೇಕ ಸಂಕಷ್ಠಗಳು ಎದುರಾದವು. ಆ ಸಂದರ್ಭದಲ್ಲಿ ಸಾಯಬೇಕೆಂದು ನಿರ್ಧರಿಸಿದ್ದೆ. ನಾಲ್ವರು ಮಕ್ಕಳಿಗಾಗಿ ಇಂದಿಗೂ ಬದುಕಿದ್ದೇನೆ. ಪತಿ ನಿಧನದ ಬಳಿಕ ಅನಾರೋಗ್ಯ ಸಮಸ್ಯೆ ಎದುರಾಗಿದ್ದರಿಂದ ಕೂಲಿ ಮಾಡಲು ಸಾಧ್ಯವಾಗುತ್ತಿಲ್ಲ. ಅವರಿವರು ಕೊಟ್ಟ ಹಣದಲ್ಲಿ ಜೀವನ ಸಾಗಿಸುತ್ತಿದ್ದೇವೆ ಎಂದು ಸಲೀಮಾ ಕಷ್ಟ ತೋಡಿಕೊಂಡರು.

ಈ ವರೆಗೆ ರೇಶನ್‌ ಅಕ್ಕಿಯನ್ನೇ ಅವಲಂಬಿಸಿಕೊಂಡಿದ್ದೇವೆ. ಪತಿ ತೀರಿಕೊಂಡ ಬಳಿಕ ಅನಾರೋಗ್ಯಕ್ಕೊಳಗಾಗಿ ಕೂಲಿಯೂ ಮಾಡಲು ಸಾಧ್ಯವಾಗುತ್ತಿಲ್ಲ. ಅವರಿವರು ಕೊಟ್ಟ ಹಣದಲ್ಲೇ ಜೀವನ ಸಾಗಿಸುತ್ತಿದ್ದೇವೆ. ರೇಶನ್‌ ಇದ್ದರೆ ಉಪ್ಪು ಹಾಕಿ ಗಂಜಿ ಮಾಡಿ ಮಕ್ಕಳಿಗೆ ಕೊಡುತ್ತೇನೆ. ಊರಿನವರೇ ಬಟ್ಟೆ ಕೊಡುತ್ತಾರೆ ಸರ್ಕಾರದಿಂದ ನಮಗೆ ತುರ್ತು ಸ್ನಾನಗೃಹ, ಶೌಚಾಲಯ ಮನೆ ಕಟ್ಟಿಸಿಕೊಡಬೇಕು ಎನ್ನುವುದು ಸಲೀಮ ಬೇಡಿಕೆ.

ಹೇಳಿಕೊಳ್ಳಲು ಒಂದು ಎಕರೆಯಷ್ಟು ಜಾಗವಿದ್ದರೂ ಹಕ್ಕುಪತ್ರ ಸಿಕ್ಕಿಲ್ಲ. ನಾಲ್ವರು ಹೆಣ್ಣುಮಕ್ಕಳ ಪೈಕಿ ಆಸ್ಮಾ, ರುಬೀನಾಗೆ ವಿವಾಹವಾದರೆ ಶಕೀನಾ ಆರ್ಥಿಕ ಸಂಕಷ್ಟದಿಂದಾಗಿ ತನ್ನ ವಿದ್ಯಾಭ್ಯಾಸವನ್ನು ಪ್ರಥಮ ಪಿಯುಸಿಯ ಅರ್ಧದಲ್ಲೇ ಮೊಟಕುಗೊಳಿಸಿದ್ದಾಳೆ. ಇನ್ನು ಕೊನೆಯ ಪುತ್ರಿ ಮುನ್ನಿ ಮೂಕಾಂಬಿಕಾ ಪ್ರೌಢ ಶಾಲೆಯಲ್ಲಿಎಂಟನೇ ತರಗತಿ ವ್ಯಾಸಗಂ ಮಾಡುತ್ತಿದ್ದಾಳೆ. ಇವಳ ಶೈಕ್ಷಣಿಕ ವೆಚ್ಚಕ್ಕೆ ಸ್ಥಳೀಯ ಬ್ಯಾಂಕ್‌ ಆಫ್‌ ಬರೋಡಾದಿಂದ ವರ್ಷಕ್ಕೆ ಐದು ಸಾವಿರ ನೆರವು ಸಿಗುತ್ತದೆ. ಸಾಂಸಾರಿಕ ಗಲಾಟೆಯಿಂದಾಗಿ ಸಲೀಮಾರ ಎರಡನೇ ಮಗಳು ರುಬೀನಾ ಪತಿ ಮನೆಯನ್ನು ತ್ಯಜಿಸಿ ತನ್ನ ಮಗುವಿನೊಂದಿಗೆ ತವರು ಮನೆಗೆ ವಾಪಾಸಾಗಿದ್ದಾಳೆ.

ಮನೆ, ಶೌಚಾಲಯ ಇಲ್ಲದೆ ಇಪ್ಪತೈದು ವರ್ಷಗಳಿಂದ ಈ ಬಡಕುಟುಂಬದ ಶೋಚನಿಯ ಸ್ಥೀತಿಯ ಬದುಕು ಈ ಹಿಂದಿನ ಚುನಾಯಿತ ಪ್ರತಿನಿಧಿಗೆ ಹಾಗೂ ಆಡಳಿತ ವ್ಯವಸ್ಥೆಗೆ ಕಾಣಿಸದೆ ಇರುವುದು ದುರದೃಷ್ಠಕರ. ಆರ್ಥಿಕ ಮುಗ್ಗಟ್ಟಿನಿಂದ ವಿದ್ಯಾಭ್ಯಾಸ ಅರ್ಧಕ್ಕೆ ಮೊಟಕುಗೊಳಿಸಿದ ಪ್ರಥಮ ಪಿಯುಸಿ ವಿದ್ಯಾರ್ಥಿಯ ಮುಂದಿನ ವಿದ್ಯಾಭ್ಯಾಸಕ್ಕೆ ಅನುವು ಮಾಡಿಕೊಡುವಂತೆ ಜಿಲ್ಲಾಧಿಕಾರಿಯನ್ನು ಭೇಟಿಯಾಗಿ ಮನವಿ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಶ ಸಮಿತಿ ಉಡುಪಿ ಜಿಲ್ಲಾ ಸಂಘಟನಾ ಸಂಚಾಲಕ ವಾಸುದೇವ ಮುದೂರು ಹೇಳಿದ್ದಾರೆ.

ಈ ಬಡ ಕುಟುಂಬದ ನೋವಿಗೆ ದನಿಯಾಗುವ ಸಹೃದಯ ದಾನಿಗಳು ಮ್ಯಾಂಗಲೋರಿಯನ್‌ ಪ್ರತಿನಿಧಿ 9480450693 ಯನ್ನು ಸಂಪರ್ಕಿಸಬಹದು

Account Holder Name : SALEEMA
Account Number :01752250008503
IFSC Code :CNRB0010175
MICR Code : 576015049
Bank : Canara Baņk Kollur
Adress : Beesina Pare, Jadkal, Kundapur – 576233


Spread the love