ಮರದ ಅಂಬಾರಿ ಹೊತ್ತು ಸಾಗಿದ ಅಭಿಮನ್ಯು

Spread the love

ಮರದ ಅಂಬಾರಿ ಹೊತ್ತು ಸಾಗಿದ ಅಭಿಮನ್ಯು

ಮೈಸೂರು: ಮೈಸೂರು ಜಂಬೂ ಸವಾರಿಯಲ್ಲಿ ಸಾಗಲಿರುವ ಗಜಪಡೆಗಡೆ ತಾಲೀಮು ನಡೆಯುತ್ತಿದ್ದು, ತಾಲೀಮಿನ ಅಂತಿಮ ಹಂತದ ಮರದ ಅಂಬಾರಿ ತಾಲೀಮು ಆರಂಭಿಸಲಾಗಿದೆ. ಅದರಂತೆ ಗಜಪಡೆಯ ರೂವಾರಿ ಚಿನ್ನದ ಅಂಬಾರಿ ಹೊರುವ ಅಭಿಮನ್ಯುಗೆ ಮರದ ಅಂಬಾರಿಯ ತಾಲೀಮು ನಡೆಸಲಾಗಿದೆ.

ಅರಮನೆಯ ಆವರಣದಲ್ಲಿರುವ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ನಿವಾಸದ ಮುಂದೆ ಅಳವಡಿಸಲಾಗಿರುವ ಕ್ರೇನ್ ಸಹಾಯದಿಂದ ಅಭಿಮನ್ಯು ಮೇಲೆ ಮರಳು ಮೂಟೆ ಮತ್ತು ಮರದ ಅಂಬಾರಿ ಇರಿಸಲಾಯಿತು. ಬಳಿಕ ಅರ್ಚಕ ಮೈಸೂರಿನ ಪ್ರಹ್ಲಾದ್ ರಾವ್ ಗಜಪಡೆಗೆ ಪೂಜೆ ಸಲ್ಲಿಸಿದರು. ಆನೆಗಳ ಪಾದ ತೊಳೆಯಲಾಯಿತು. ನಂತರ ಆನೆಗಳ ಪಾದದ ಬಳಿ ಕುಂಕುಮ, ಹರಿಸಿಣ, ಗರಿಕೆ, ಬೆಲ್ಲ, ಕಬ್ಬು, ಮೋದಕ, ಕಡುಬು, ಪಂಚಕಜ್ಜಾಯ, ಎಲೆ, ಅಡಿಕೆಗಳನ್ನು ಇಟ್ಟು ಪೂಜೆ ಸಲ್ಲಿಸಲಾಯಿತು. ಬೆನ್ನಿನ ಮೇಲೆ ನೂರಾರು ಕೆಜಿ ಭಾರ ಹೊತ್ತಿದ್ದರೂ ಅಭಿಮನ್ಯು ಮರದ ಅಂಬಾರಿ ಹೊತ್ತು ರಾಜಗಾಂಭೀರ್ಯದಿಂದ ಹೆಜ್ಜೆ ಹಾಕಿದನು. ಇದೇ ವೇಳೆ ರಾಜಪಥದಲ್ಲಿದ ನೂರಾರು ಜನ ಆನೆಗಳ ತಾಲೀಮನ್ನು ಕಣ್ತುಂಬಿಕೊಂಡರು.

ಮೊದಲ ದಿನವಾದ ಸೋಮವಾರ ಅಂಬಾರಿ ಆನೆ ಅಭಿಮನ್ಯು ಮರಳಿನ ಮೂಟೆ ಸೇರಿದಂತೆ 750 ಕೆಜಿ ಭಾರದ ಮರದ ಅಂಬಾರಿ ಹೊರುವ ಮೂಲಕ ತಾಲೀಮು ನಡೆಸಿದ್ದಾನೆ. 280 ಕೆ.ಜಿ ತೂಕದ ಮರದ ಅಂಬಾರಿ, 400 ಕೆ.ಜಿ. ಮರಳಿನ ಮೂಟೆ ಸೇರಿದಂತೆ ಸೇರಿದಂತೆ ಒಟ್ಟು 750ಕ್ಕೂ ಹೆಚ್ಚಿನ ಭಾರವನ್ನು ಹೊತ್ತು ಅರಮನೆ ಆವರಣದಿಂದ ಬನ್ನಿ ಮಂಟಪದವರೆಗೆ (5 ಕಿ.ಮೀ) ಯಶಸ್ವಿಯಾಗಿ ಹೆಜ್ಜೆ ಹಾಕಿದೆ ಸಂಜೆ 5.30ಕ್ಕೆ ಅರಮನೆ ಆವರಣ ಬಿಟ್ಟ ಅಭಿಮನ್ಯು ಸಂಜೆ 6.40ರ ವೇಳೆಗೆ ಬನ್ನಿಮಂಟಪ ತಲುಪಿದ್ದಾನೆ. ಆ ಮೂಲಕ ಅಂಬಾರಿ ಹೊರಲು ತಾನು ಸಮರ್ಥ ಎಂಬ ಸಂದೇಶ ನೀಡಿದ್ದಾನೆ.

ಅಭಿಮನ್ಯು ಮರದ ಅಂಬಾರಿ ಹೊತ್ತು ಗಜಗಾಂಭೀರ್ಯದಿಂದ ಮುಂದೆ ನಡೆದರೆ ಆತನ ಪಕ್ಕ ಕುಮ್ಕಿ ಆನೆಗಳಾದ ಚೈತ್ರಾ ಮತ್ತು ಕಾವೇರಿ ಸಾಗಿ ಸಾಥ್ ನೀಡಿದವು. ಗಂಡಾನೆಗಳಾದ ಅರ್ಜುನ, ಗೊಪಾಲಸ್ವಾಮಿ, ಧನಂಜಯ, ಮಹೇಂದ್ರ, ಭೀಮ, ಹೆಣ್ಣಾನೆ ಲಕ್ಷ್ಮಿಕೂಡ ಹಿಂದೆ ಹೆಜ್ಜೆ ಹಾಕಿ ಸಾಥ್ ನೀಡಿದವು. ಈ ಪೈಕಿ ಸತತ 8 ವರ್ಷ ಅಂಬಾರಿ ಹೊತ್ತ ಅರ್ಜುನನಿಗೆ ವಯಸ್ಸಿನ ಕಾರಣಕ್ಕೆ ಈ ಬಾರಿ ಭಾರ ಹೊರಿಸಲಿಲ್ಲ. ಹಾಗಾಗಿ, ಅರ್ಜುನ ಮರದ ಅಂಬಾರಿಯನ್ನು ಹೊರುವುದಿಲ್ಲ. ಉಳಿದಂತೆ ಗೊಪಾಲಸ್ವಾಮಿ, ಧನಂಜಯ, ಮಹೇಂದ್ರ, ಭೀಮ ಆನೆಗಳಿಗೆ ಭಾರ ಹೊರಿಸಿ ತಾಲೀಮು ನಡೆಸಲಾಗುತ್ತದೆ. ಆದರೆ, ಈ ಪೈಕಿ ಗೊಪಾಲಸ್ವಾಮಿ, ಧನಂಜಯ, ಮಹೇಂದ್ರನಿಗೆ ಮಾತ್ರ ಮರದ ಅಂಬಾರಿ ಹೊರಿಸಿ ತಾಲೀಮು ನಡೆಸಲು ಅರಣ್ಯ ಅಧಿಕಾರಿಗಳು ನಿರ್ಧರಿಸಿದ್ದಾರೆ. ಹೀಗಾಗಿ ಪ್ರತಿ ದಿನ ಒಂದೊಂದು ಆನೆ ಮರದ ಅಂಬಾರಿ ಹೊರಲಿವೆ.


Spread the love

Leave a Reply

Please enter your comment!
Please enter your name here