ಮರಳು ಅಕ್ರಮಗಳ ಕುರಿತ ದೂರುಗಳಿಗೆ ಕಂಟ್ರೋಲ್ ರೂಮ್ ಸ್ಥಾಪನೆ : ಉಡುಪಿ ಡಿಸಿ ಕೂರ್ಮಾರಾವ್

Spread the love

ಮರಳು ಅಕ್ರಮಗಳ ಕುರಿತ ದೂರುಗಳಿಗೆ ಕಂಟ್ರೋಲ್ ರೂಮ್ ಸ್ಥಾಪನೆ : ಉಡುಪಿ ಡಿಸಿ ಕೂರ್ಮಾರಾವ್
 

ಉಡುಪಿ: ಜಿಲ್ಲಾ ವ್ಯಾಪ್ತಿಯಲ್ಲಿನ ಕರಾವಳಿ ನಿಯಂತ್ರಣ ವಲಯ ಪ್ರದೇಶದಲ್ಲಿ ಗುರುತಿಸಲಾಗಿರುವ ಮರಳು ದಿಬ್ಬಗಳನ್ನು ತೆರವುಗೊಳಿಸುವ ದೋಣಿಗಳಿಗೆ ಹಾಗೂ ಮರಳು ಸಾಗಾಣಿಕಾ ವಾಹನಗಳಿಗೆ ಅಳವಡಿಸಿರುವ ಜಿಪಿಎಸ್ ತಂತ್ರಾಂಶದ ನಿಯಂತ್ರಣ ಹಾಗೂ ಉಲ್ಲಂಘನೆ ಬಗ್ಗೆ ಪರಿಶೀಲಿಸಲು ಜಿಪಿಎಸ್ ಉಸ್ತುವಾರಿ ಕೇಂದ್ರ (ಜಿಪಿಎಸ್ ಮೋನಿಟರಿಂಗ್ ಸೆಂಟರ್)ವನ್ನು ಪ್ರಾರಂಭಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ.ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಲ್ಲದೇ ಜಿಲ್ಲಾ ವ್ಯಾಪ್ತಿಯಲ್ಲಿ ನಡೆಯುವ ಅನಧಿಕೃತ ಉಪ ಖನಿಜ ಗಣಿಗಾರಿಕೆ, ಸಾಗಾಣಿಕೆ, ದಾಸ್ತಾನು ಸಂಬಂಧಿಸಿದಂತೆ ಜಿಲ್ಲಾ ಮಟ್ಟದಲ್ಲಿ ದಿನದ 24 ಗಂಟೆ ಲಭ್ಯವಿರುವ ದೂರವಾಣಿ ಸೇವೆ, ಷರತ್ತು ಉಲ್ಲಂಘನೆ ಸೂಚೆ (ಅಲರ್ಟ್) ಡ್ಯಾಶ್‌ಬೋರ್ಡ್ ಇರುವ ಸೇವೆಯನ್ನು ಅಳವಡಿಸಿದ ಕಂಟ್ರೋಲ್ ರೂಮ್‌ನ್ನು ಪ್ರಾರಂಭಿಸಲಾಗಿದೆ.

ಇದಕ್ಕೆ ದಿನದ 24 ಗಂಟೆಯೂ ನಿರಂತರ ಸೇವೆಯನ್ನು ಎನ್‌ಐಸಿ, ಇ-ಗವರ್ನೆನ್ಸ್ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಸಿಬ್ಬಂದಿಗಳು ತಾಂತ್ರಿಕ ಸಹಾಯವನ್ನು ಒದಗಿಸಲಿದ್ದಾರೆ. ಈ ಕಂಟ್ರೋಲ್ ರೂಮಿನ ದೂರವಾಣಿ ಸಂಖ್ಯೆ: 0820-2950080 ಆಗಿದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

ಅನಧಿಕೃತ ಉಪ ಖನಿಜ ಗಣಿಗಾರಿಕೆ, ಸಾಗಾಣಿಕೆ, ದಾಸ್ತಾನು ನಿಯಂತ್ರಿಸುವ ಸಲುವಾಗಿ ಉಡುಪಿ ಜಿಲ್ಲೆಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳನ್ನೊಳಗೊಂಡ ಚಾಲಿತ ದಳವನ್ನು ಸಹ ರಚಿಸಲಾಗಿದೆ.

ಉಡುಪಿ ಜಿಲ್ಲೆಯ ಕುಂದಾಪುರ, ಬ್ರಹ್ಮಾವರ ಹಾಗೂ ಉಡುಪಿ ತಾಲೂಕುಗಳ ವ್ಯಾಪ್ತಿಯಲ್ಲಿರುವ ವಾರಾಹಿ, ಸೌಪರ್ಣಿಕಾ, ಸ್ವರ್ಣಾ ಹಾಗೂ ಸೀತಾನದಿ ಪಾತ್ರಗಳಲ್ಲಿ ಮರಳು ದಿಬ್ಬ ತೆರವುಗೊಳಿಸುವ ಕಾರ್ಯ ಹಾಗೂ ಜಿಲ್ಲಾ ಕರಾವಳಿ ನಿಯಂತ್ರಣ ವಲಯ ಹೊರತುಪಡಿಸಿದ (ನಾನ್ ಸಿಆರ್‌ಝಡ್) ಪ್ರದೇಶದಲ್ಲಿ ಮರಳು ಗಣಿ ಗುತ್ತಿಗೆಗಳಲ್ಲಿ ಮರಳು ಪೂರೈಕೆಯ ಕಾರ್ಯ ಪ್ರಗತಿಯಲ್ಲಿದ್ದು, ಈ ಮರಳನ್ನು ಸಾರ್ವಜನಿಕರಿಗೆ, ಅಭಿವೃದ್ಧಿ ಕಾಮಗಾರಿಗಳಿಗೆ ‘ಉಡುಪಿ ಇ-ಸ್ಯಾಂಡ್ ಆಯಪ್’ ಮೂಲಕ ಪೂರೈಸಲಾಗುತ್ತಿದೆ.

ಮರಳು ಅಗತ್ಯವಿರುವವರು ಅಂತರ್ಜಾಲದಲ್ಲಿ -udupiesand.com-ನ್ನು ಸಂದರ್ಶಿಸಿ ತಮ್ಮ ಹೆಸರು, ವಿಳಾಸ ದಾಖಲಿಸಿ ಬೇಕಾಗಿರುವ ಮರಳಿನ ಪ್ರಮಾಣವನ್ನು ನಮೂದಿಸಿ ಆನ್‌ಲೈನ್ ಮುಖಾಂತರ ಹಣ ಪಾವತಿ ಮಾಡಬಹುದಾಗಿದೆ. ಇದೊಂದು ಸರಳ ಹಾಗೂ ಪಾರದರ್ಶಕ ಪ್ರಕ್ರಿಯೆಯಾಗಿದ್ದು, ಉಡುಪಿ ಜಿಲ್ಲೆಯ ಸಾರ್ವಜನಿಕರು ಇದರ ಉಪಯೋಗ ಪಡೆದುಕೊಳ್ಳಬಹುದಾಗಿದೆ.

ಸ್ಯಾಂಡ್‌ ಆಯಪ್ ಸಂಪರ್ಕ ಸಂಖ್ಯೆ: 6366745888, 6364024555 (ಆಯಪ್ ಕುರಿತ ಮಾಹಿತಿಗೆ) ಹಾಗೂ 6366871888 (ಖಾತೆಯ ಕುರಿತಂತೆ). ಸಾರ್ವಜನಿಕರು ಮೇಲಿನ ಸೇವೆಗಳ ಸದುಪಯೋಗವನ್ನು ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love