
Spread the love
ಮರವಂತೆಯಲ್ಲಿ ಗಾಳಿ ಮಳೆ – ಅಪಾರ ನಷ್ಟ
ಕುಂದಾಪುರ: ಮರವಂತೆಯಲ್ಲಿ ಭಾನುವಾರ ನಡುರಾತ್ರಿ ಬಂದ ಬಿರುಗಾಳಿ ಮತ್ತು ಮಳೆಯಿಂದ ನಷ್ಟ ಸಂಭವಿಸಿದೆ.
ಅಂಚೆಕಟ್ಟೆ ಎಂಬಲ್ಲಿನ ವಿಶ್ವನಾಥ ಶಾನುಭೋಗ್ ಅವರ ಮನೆಯ ಮೇಲೆ ಮೂರು ತೆಂಗಿನ ಮರಗಳು ಉರುಳಿದ ಕಾರಣ ಮನೆಯ ಹೆಂಚಿನ ಮಾಡು ಜಖಂ ಆಗಿ ಸುಮಾರು ರೂ 1.5 ಲಕ್ಷ ನಷ್ಟವಾಗಿದೆ. ಜಗಲಿಯಲ್ಲಿ ಮಲಗಿದ್ದ ವಿಶ್ವನಾಥ ಶಾನುಭೋಗ್ ಅವರ ತಲೆಯ ಮೇಲೆ ಹೆಂಚಿನ ತುಂಡುಗಳು ಬಿದ್ದ ಪರಿಣಾಮ ಗಾಯಗಳಾಗಿವೆ.
ಅನಂತ ಶೆಣೈ ಎಂಬವರ ಮನೆಯ ಬಳಿಯ ಒಂದು ತೆಂಗಿನ ಮರ ಉರುಳಿದೆ. ಆನಂದ ಖಾರ್ವಿ ಅವರ ತೋಟದ ತೆಂಗಿನ ಮರ ಉರುಳಿ, ಸನಿಹದ ವಿದ್ಯುತ್ ಕಂಬ ತುಂಡಾಗಿದೆ. ಹಲವಾರು ಮನೆಗಳ ತೋಟಗಳಲ್ಲಿ ಬೆಳೆದಿದ್ದ ಬಾಳೆ ಮರಗಳು ಮುರಿದು ಬಿದ್ದಿವೆ.
ಹಾನಿಗೊಳಗಾದ ಸ್ಥಳಗಳಿಗೆ ಗ್ರಾಮ ಲೆಕ್ಕಾಧಿಕಾರಿ ಸಂದೀಪ್ ಭೇಟಿನೀಡಿ ಪರಿಶೀಲಿಸಿ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಿದ್ದಾರೆ.
Spread the love